ನಿರ್ಮಾಪಕ ಕೆ ಬಾಲು ನಿಧನ
ಚೆನ್ನೈ,ಮ ಜ 02 : ತಮಿಳು ಚಿತ್ರರಂಗದ ಜನಪ್ರಿಯ ನಿರ್ಮಾಪಕ, ಕೆಬಿ ಫಿಲಮ್ಸ್ ಮುಖ್ಯಸ್ಥ ಕೆ.ಬಾಲು ವಿಧಿವಶರಾಗಿದ್ದಾರೆ. ಹೊಸ ವರ್ಷದ ಮೊದಲ ದಿನ ಜನವರಿ 1 ರಂದು ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಕೆಲವು ದಿನಗಳ ಹಿಂದೆ ಕೊರೋನಾ ವೈರಸ್ ಸೋಕಿಗೆ ತುತ್ತಾಗಿದ್ದ ಬಾಲು, ಸಾವು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.ಅವರ ಅಂತಿಮ ಸಂಸ್ಕಾರ ಶನಿವಾರ ಚೆನ್ನೈನ ಬೆಸೆಂಟ್ ನಗರದಲ್ಲಿ ನಡೆಯಲಿದೆ. ಕೆಪಿ ಫಿಲಮ್ಸ್ ಹೆಸರಿನ ಪ್ರೊಡಕ್ಷನ್ ಹೌಸ್ ಹೊಂದಿದ್ದ ಕೆ.ಬಾಲು ಕೆಲವು ಉತ್ತಮ ತಮಿಳು ಸಿನಿಮಾಗಳನ್ನು ನಿರ್ಮಿಸಿದ್ದರು.
ಅನೇಕ ಚಿತ್ರಗಳಿಗೆ ಸಹಾಯಕ ನಿರ್ಮಾಪಕರಾಗಿ, ವಿತರಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಕೆ.ಬಾಲು ನಿಧನಕ್ಕೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. ನಟ ಶರತ್ ಕುಮಾರ್ ಟ್ವೀಟ್ ಮಾಡಿ, 'ಕೆ.ಬಾಲು ನಿಧನ ಸುದ್ದಿ ಕೇಳಿ ಆಘಾತವಾಗಿದೆ. ಅವರ ಸಾವು ಚಿತ್ರರಂಗದಲ್ಲಿ ನಿರ್ವಾತ ಸೃಷ್ಟಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನನ್ನ ಮತ್ತು ನನ್ನ ಕುಟುಂಬದ ಕಡೆಯಿಂದ ಸಂತಾಪಗಳು' ಎಂದಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ಧನಂಜಯ್ ಸಹ ಟ್ವೀಟ್ ಮಾಡಿದ್ದು, 'ಕೆ ಬಾಲು ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಬಹಳ ಬೇಸರದ ಸುದ್ದಿಯಿದು. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದಿದ್ದಾರೆ. ಕೆ.ಬಾಲು ಅವರು 1991 ರಲ್ಲಿ ಚಿನ್ನತಂಬಿ, 1992 ರಲ್ಲಿ ಪಂಡಿತುರೈ, 1996 ರಲ್ಲಿ ಪಂಚಾಲಂಕುರಿಚಿ ಹಾಗೂ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕೆಲವು ಸಿನಿಮಾಗಳಿಗೆ ಸಹ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ.