ರಾಜ್ಯಾದ್ಯಂತ ಜ್ಯೋತಿ ಬಜಾರ ಆರಂಭಕ್ಕೆ ಚಿಂತನೆ : ಬಸವಪ್ರಸಾದ ಜೊಲ್ಲೆ
ಲೋಕದರ್ಶನ ವರದಿ
ಚಿಕ್ಕೋಡಿ 14: ಯಕ್ಸಂಬಾ ಜೊಲ್ಲೆ ಉದ್ಯೋಗ ಸಮೂಹದ ಅಂಗಸಂಸ್ಥೆಯಾದ ಶ್ರೀಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯ ವತಿಯಿಂದ ಇಡೀ ರಾಜ್ಯಾದ್ಯಂತ ಜ್ಯೋತಿ ಬಜಾರ ಆರಂಭ ಮಾಡಲು ಚಿಂತನೆ ನಡೆಸಲಾಗಿದೆ. ಸಂಸ್ಥೆಯು ಪ್ರಸಕ್ತ ವರ್ಷದಲ್ಲಿ 1.01 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಬಸವಜ್ಯೋತಿ ಯುಥ ಪೌಂಡೇಶನ ಅಧ್ಯಕ್ಷರು ಹಾಗೂ ಸಂಸ್ಥೆಯ ನಿರ್ದೇಶಕ ಬಸವಪ್ರಸಾದ ಜೊಲ್ಲೆ ತಿಳಿಸಿದರು.
ಶನಿವಾರ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯ ಜೊತೆಗೆ ಇದರ ಅಡಿಯಲ್ಲಿ 17 ಜ್ಯೋತಿ ಬಜಾರ ಆರಂಭ ಮಾಡಲಾಗಿದೆ. ಬರುವ ದಿನಗಳಲ್ಲಿ 18 ಹೊಸ ಶಾಖೆಗಳನ್ನು ಆರಂಭ ಮಾಡುವ ಸಂಕಲ್ಪ ಇಟ್ಟುಕೊಳ್ಳಲಾಗಿದೆ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ನಡೆಯುವ ಬೀರೇಶ್ವರ ಸೌಹಾರ್ದ ಕ್ರೆಡಿಟ್ ಸಹಕಾರಿಯು ಈಗಾಗಲೇ ಹೆಮ್ಮರವಾಗಿ ಬೆಳೆದು ನಿಂತಿದೆ. ಅದೇ ಮಾದರಿಯಲ್ಲಿ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯು ಬೆಳವಣಿಗೆ ಕಾಣಲಿದೆ. ಮುಂದಿನ ತಿಂಗಳು ಬಾಗಲಕೋಟ ಜಿಲ್ಲೆಯ ಮುಧೋಳ, ಶಿರೋಳ, ಲೋಕಾಪೂರ ಮತ್ತು ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದಲ್ಲಿ ನಾಲ್ಕು ಹೊಸ ಶಾಖೆಗಳನ್ನು ಆರಂಭ ಮಾಡಲಾಗುತ್ತದೆ ಎಂದರು.
ಪ್ರಸಕ್ತ ವರ್ಷದಲ್ಲಿ ಸಂಸ್ಥೆಯು 21752 ಸದಸ್ಯರನ್ನು ಹೊಂದಿದೆ. 93.76 ಲಕ್ಷ ಶೇರಬಂಡವಾಳ, 3.96 ಕೋಟಿ ನಿಧಿಗಳು, 168.36 ಕೋಟಿ ಠೇವು, 57.19 ಕೋಟಿ ಸಾಲ ಮತ್ತು ಮುಂಗಡುಗಳು, 80.73 ಲಕ್ಷ ಗುಂತಾವಣಿಗಳು, 1.01 ಕೋಟಿ ರೂ ನಿವ್ವಳ ಲಾಭಗಳಿಸಿದೆ ಎಂದರು.
ಸಂಸ್ಥೆಯ ಮೂಲಕ ರಾಷ್ಟ್ರೀಕೃತ ಬ್ಯಾಂಕ ಸೇವೆ ಹಾಗೇ ನಮ್ಮ ಸಂಸ್ಥೆಯು ಗ್ರಾಹಕರಿಗೆ ವಿವಿಧ ಸೇವೆ ಒದಗಿಸುತ್ತಿದೆ. ಗ್ರಾಹಕರ ಸಹಕಾರ, ಸಿಬ್ಬಂದಿಗಳ ಪರಿಶ್ರಮದಿಂದ ಸಂಸ್ಥೆಯು ಪ್ರಗತಿಯತ್ತ ಹೆಜ್ಜೆ ಇಡುತ್ತಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ಖೋತ, ಉಪಾಧ್ಯಕ್ಷ ಬಾಬುರಾವ ಮಾಳಿ, ಸಿಇಒ ಡಾ, ವಿವೇಕಾನಂದ ಮನಗೂಳಿ, ಪ್ರಧಾನ ವ್ಯವಸ್ಥಾಪಕ ವಿಜಯ ಖಡಕಭಾವಿ ಮುಂತಾದವರು ಇದ್ದರು.
ಸದ್ಯಕ್ಕೆ ರಾಜಕೀಯ ಪ್ರವೇಶ ಇಲ್ಲ:
ತಂದೆ ಅಣ್ಣಾಸಾಹೇಬ ಜೊಲ್ಲೆ ಹಾಗೂ ತಾಯಿ ಶಶಿಕಲಾ ಜೊಲ್ಲೆ ರಾಜಕೀಯವಾಗಿ ಉನ್ನತ ಹುದ್ದೆಯಲ್ಲಿದ್ದುಕೊಂಡು ಜನ ಸೇವೆ ಮಾಡುತ್ತಿದ್ದಾರೆ. ನಾನು ಸದ್ಯಕ್ಕೆ ರಾಜಕೀಯಕ್ಕೆ ಬರುವ ಚಿಂತನೆಯಿಲ್ಲ, ಸಹಕಾರಿ ರಂಗದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ.
ಬಸವಪ್ರಸಾದ ಜೊಲ್ಲೆ.