ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಸರಕಾರದ ಮಹತ್ವಾಕಾಂಕ್ಷಿ ಯೋಜನೆ
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿಕೆ: ಪ್ರತಿ ತಿಂಗಳ ಮೂರನೇ ಶನಿವಾರ ಕಾರ್ಯಕ್ರಮ
ಬೈಲಹೊಂಗಲ 20:ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ವಿನೂತನ ಕಾರ್ಯಕ್ರಮ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ತಾಲೂಕಿನ ಬೈಲವಾಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಂದಾಯ ಸಚಿವ ಆರ್.ಅಶೋಕ ಅವರು ಪ್ರತಿ ತಿಂಗಳ ಮೂರನೇ ಶನಿವಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಗ್ರಾಮದಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ ಹೂಡಿ ಗ್ರಾಮೀಣ ಭಾಗದ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಅನುಕೂಲವಾಗಲಿದ್ದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಆಯಾ ತಾಲೂಕಿನ ತಹಶಿಲ್ದಾರ ಹಾಗೂ ಸಿಬ್ಬಂದಿ ಗ್ರಾಮದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ ಎಂದರು.
ಬೈಲವಾಡ ಗ್ರಾಮವು ಪೋಡಿಮುಕ್ತ ಗ್ರಾಮವಾಗಿದ್ದು, ಈ ಭಾಗದ ಶಾಸಕ ಮಹಾಂತೇಶ ಕೌಜಲಗಿ ಅವರು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಸರಕಾರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಕಾಲೇಜು ಸ್ಥಾಪಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ಹೊಲಕ್ಕೆ ಹೋಗಿ ಕೃಷಿ ಚಟುವಟಿಕೆ ತೊಡಗಿಸಿಕೊಂಡು ಕಷ್ಟ ಪಟ್ಟು ಅಧ್ಯಯನ ಮಾಡಿ ಶೇ.94 ರಷ್ಟು ಅಂಕ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಮನೆಗಳ ನಿರ್ಮಾಣ ಮಾಡಿಕೊಡಲಾಗುವುದು. ಮನೆ ನಿರ್ಮಾಣಕ್ಕೆ ಜಾಗೆ ಇಲ್ಲದಿದ್ದರೆ ಗ್ರಾ.ಪಂ ಯವರು ಯಾರಾದರೂ ಜಮೀನು ಮಾರಾಟ ಮಾಡಿದರೆ ಅದಕ್ಕೆ ಸೂಕ್ತ ಸರಕಾರದ ಹಣ ಸಂದಾಯ ಮಾಡಿ ಖರೀದಿ ಮಾಡಿ ಮನೆ ಇಲ್ಲದವರಿಗೆ ಹಂಚಿಕೆ ಮಾಡಲಾಗುವುದು ಎಂದರು.
ಗ್ರಾಮದಲ್ಲಿ ವಿದ್ಯುತ್ ಕಂಬಗಳು ವಾಲಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆಂದು ನಾಗರಿಕರು ದೂರಿದ್ದಾರೆ.
ಕೂಡಲೇ ವಿದ್ಯುತ ತಂತಿಗಳನ್ನು ದುರಸ್ಥಿ ಮಾಡಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಗ್ರಾಮದ ಅಭಿವೃದ್ಧಿಗೆ ಜನರೊಂದಿಗೆ ಬೆರೆತು ಕೆಲಸ ನಿರ್ವಹಿಸದಿದ್ದರೆ ಅಂಥ ಅಧಿಕಾರಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸರಕಾರದ ವಿನೂತನ ಯೋಜನೆ ರಾಜ್ಯಾದ್ಯಂತ ಪ್ರಾರಂಭವಾಗಿದ್ದು ಸಂತಸವಾಗಿದೆ. ಈ ಹಿಂದೆ ಸಮ್ಮಿಶ್ರ ಸರಕಾರದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಸಿದ್ದತೆ ಇತ್ತು. ಇಂಥ ಯೋಜನೆ ಜಾರಿಗೆ ತರುವದರಿಂದ ಗ್ರಾಮೀಣ ಭಾಗದ ಹಲವಾರು ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಸಾಧ್ಯ ಎಂದರು.
ಮಲಪ್ರಭಾ ನದಿಯಿಂದ ಕೆರೆಗೆ ನೀರು ತುಂಬಿಸುವ ಹಾಗೂ ಕುಡಿಯುವ ನೀರಿನ ಸರಬರಾಜು ಯೋಜನೆ ಸರಕಾರದಲ್ಲಿ ಪ್ರಸ್ತಾವನೆ ಇದ್ದು ಈ ಯೋಜನೆಯನ್ನು ಜಾರಿಗೆ ತಂದಲ್ಲಿ ಈ ಭಾಗದ ರೈತರ ಹಾಗೂ ಜನರ ನೀರಿನ ಭವನೆಯನ್ನು ನೀಗಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದ ಕೌಜಲಗಿಯವರು ಈ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಮುರಗೋಡ ದುರಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಬೆಳಗಾವ ಡಿಎಲ್ಆರ್ ಮೋಹನ ಶಿವನ್ನವರ ಮಾತನಾಡಿ, ಪ್ರಧಾನ ಮಂತ್ರಿಗಳು ಏ.24 ರಂದು ನ್ಯಾಶನಲ್ ಪಂಚಾಯತ ರಾಜ್ ಇಲಾಖೆ ರಾಷ್ಟ್ರೀಯ ಪಂಚಾಯತ ಇಲಾಖೆ ಸ್ಥಾಪನೆ ದಿನಾಚರಣೆ ನಿಮಿತ್ತ ಸಂಯುಕ್ತ ಯೋಜನೆ ಜಾರಿಗೆ ತಂದಿದ್ದಾರೆ. ಗ್ರಾಮ ಠಾಣಾದಲ್ಲಿರುವಂತಹ ಪ್ರತಿಯೊಂದು ಮನೆಗಳನ್ನು ಅಳತೆ ಮಾಡಿ ನಿಖರವಾದ ಗಡಿ ನಿರ್ಮಾಣ ಮಾಡಿ ಕಂಪ್ಯೂಟರ ಉತಾರ ನೀಡುವುದು. ಹಲವಾರು ವರ್ಷಗಳಿಂದ ಗ್ರಾಮ ಠಾಣೆಗಳಲ್ಲಿರುವ ಮನೆಗಳು ಅಳತೆಯಾಗಿಲ್ಲ. ತಂದೆ ಮುತ್ತಜ್ಜ ಕಾಲದಿಂದ ಇರುವ ಮನೆ ಅಳತೆ ಗೊತ್ತಿಲ್ಲ. ಇದರಿಂದ ಗ್ರಾಮದಲ್ಲಿ ಪಂಚಾಯತ ಇಲಾಖೆಯಲ್ಲಿ ಉತಾರ ಪಡೆಯಲು ಪರದಾಡುವ ಸ್ಥಿತಿ ಇದೆ. ಅದನ್ನು ಮನಗಂಡು ಸರಕಾರ ಸಂಯುಕ್ತ ಯೋಜನೆ ಜಾರಿಗೆ ತಂದಿದ್ದು, ಮನೆ, ಮನೆಗೆ ತೆರಳಿ ಸರ್ವೇ ಮಾಡಿ ಮಾರ್ಕಿಂಗ್ ಮಾಡಲಾಗುವುದು. ನಂತರ ಡ್ರೋನ ಮುಖಾಂತರ ಸರ್ವೇ ಮಾಡಿ ಫೊಟೋ ತೆಗೆದುಕೊಂಡು ಕಂಪ್ಯೂಟರ್ ಉತಾರ ಕೊಡಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಅಶೋಕ ಗುಡಗುಂಟಿ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ ಬಸವರಾಜ ನಾಗರಾಳ, ಕೃಷಿ ಇಲಾಖೆ ಜಂಟಿ ನಿರ್ದೆಶಕ ಶಿವನಗೌಡ ಪಾಟೀಲ, ಆಹಾರ ಇಲಾಖೆ ಜಂಟಿ ನಿರ್ದೆಶಕ ಚನ್ನಬಸಪ್ಪ ಕೊಡ್ಲಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಉಮಾ ಸಾಲಿಗೌಡರ,ಸಿಡಿಪಿಓ ರೇವತಿ ಹೊಸಮಠ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ ವರವಟ್ಟಿ, ತಾ.ಪಂ.ಇಒ ಸುಭಾಸ ಸಂಪಗಾಂವಿ, ಸಿಡಿಪಿಒ ರೇವತಿ ಹೊಸಮಠ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಉಣ್ಣಿ, ಗ್ರಾಮ ಪಂಚಾಯತ ಅಧ್ಯಕ್ಷೆ ಕಸ್ತೂರಿ ನಡುವಿನಮನಿ, ಉಪಾಧ್ಯಕ್ಷೆ ಜೈತುನಬಿ ದೇವಲಾಪೂರ, ಪಿಡಿಒ ಎಸ್.ಜಿ. ಪೂಜೇರಿ, ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗದ ಎಸ್.ಕೆ.ಮುಗಸಜ್ಜಿ ಇದ್ದರು.