ಜನ್ನಿ ಮಿಲ್ಕ್ ಕಂಪನಿ ರೈತರಿಗೆ ವಂಚನೆ: ನ್ಯಾಯ ಕೊಡಿಸಲು ಮನವಿ
ಹೊಸಪೇಟೆ 20: ಜನ್ನಿ ಮಿಲ್ಕ್ಗೆ ಬಹಳಷ್ಟು ರೈತರು ಹಣವನ್ನು ಕಂಪನಿಯ ಹೆಸರಿನಲ್ಲಿ ಸಂದಾಯ ಮಾಡಿ ವಂಚನೆಗೆ ಒಳಗಾದ ರೈತರಿಗೆ ನ್ಯಾಯ ದೊರಕಿಸಿ ಅವರ ಹಣವನ್ನು ಹಿಂದಿರುಗಿಸಿಕೊಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಮನವಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ರೈತರು ಜನ್ನಿ ಮಿಲ್ಕ್ (ಕತ್ತೆ ಹಾಲು) ಕಂಪನಿಗೆ ಹಣವನ್ನು ಸಂದಾಯ ಮಾಡಿರುತ್ತಾರೆ. ಹಾಗೆ ವಿಜಯನಗರ ಜಿಲ್ಲೆಯಲ್ಲಿಯೂ ಕೂಡ ರೈತರಿಗೆ ಮೋಸ ವಂಚನೆ ಮಾಡಲು ಮುಂದಾದಾಗ ಇಲ್ಲಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಇವರ ಬಳಿ ಬಂದು ಅದನ್ನೆಲ್ಲಾ ಪರೀಶೀಲಿಸಿದಾಗ ಇದು ಯಾವುದೇ ರೀತಿಯಾಗಿ ಸರ್ಕಾರದ ಪರವಾನಿಗೆ ಮತ್ತು ಮನ್ನಣೆ ಪಡೆಯದೇ ಇರುವುದು ತಿಳಿದು ಅನುಮಾನಾಸ್ಪದಗೊಂಡು ಜಿಲ್ಲಾಧಿಕಾರಿಗಳ ಗಮನಕ್ಕೆ ಇದೇ ಸೆ. 11ರಂದು ತಂದಿದ್ದಾರೆ.
ಜಿಲ್ಲಾಧಿಕಾರಿಗಳು ಇದರ ಬಗ್ಗೆ ಸೂಕ್ತ ತನಿಖೆ ನಡೆಸುವುದರ ಮೂಲಕ ಕ್ರಮ ಕೈಗೊಂಡು ಕಂಪನಿಯನ್ನು ಸೀಜ್ ಮಾಡಿದ್ದಾರೆ. ಆದರೆ ಬಹಳಷ್ಟು ರೈತರು ಹಣವನ್ನು ಕಂಪನಿಯ ಹೆಸರಿನಲ್ಲಿ ಸಂದಾಯ ಮಾಡಿದ್ದು, ಈ ಕೂಡಲೇ ಮೋಸ, ವಂಚನೆಗೆ ಒಳಗಾದ ರೈತರಿಗೆ ನೆರವಾಗುವಂತೆ ನ್ಯಾಯ ದೊರಕಿಸಿ ಅವರ ಹಣವನ್ನು ಹಿಂದಿರುಗಿಸಿಕೊಡಿಸಬೇಕೆಂದು ಆಗ್ರಹಿಸಿದ್ದಾರೆ. ಒಂದುವೇಳೆ ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಾದ್ಯಂತ ತೀವ್ರ ಹಾಗೂ ಉಗ್ರವಾದ ಹೋರಾಟ ಮಾಡುತ್ತೇವೆಂದು ತಿಳಿಸಿದ್ದಾರೆ.
ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಇವರು ಮಾತನಾಡಿ ರೈತರಿಗೆ ಸರಿಯಾದ ಬೆಂಬಲಬೆಲೆ ಇಲ್ಲದ ಕಾರಣ ರೈತರು ಈ ಮೂಲಕ ಮೋಸ, ವಂಚನೆಗಳಿಗೆ ತುತ್ತಾಗುತ್ತಿದ್ದಾರೆ, ಈ ಕೂಡಲೇ ಸರ್ಕಾರ ಜಿನ್ನಿ (ಕತ್ತೆ ಹಾಲು) ಕಂಪನಿಯ ಮೇಲೆ ಕಠಿಣ ಕ್ರಮ ಜರುಗಿಸಿ ರೈತರಿಗೆ ಬರಬೇಕಾದ ಹಣವನ್ನು ಬೇಗನೆ ಮರುಪಾವತಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಟಿ.ನಾಗರಾಜ್ ಮಾತನಾಡಿ ರೈತರು ತಾವುಗಳು ಬೆಳೆಯುತ್ತಿರುವ ಬೆಳೆಗಳಿಗೆ ಸರಿಯಾದ ನಿಗದಿತ ಬೆಲೆಯೂ ಪೂರೈಕೆ ಆಗದೆ, ರಸಗೊಬ್ಬರದ ಬೆಲೆ ಏರಿಕೆ, ಇನ್ನಿತರೆ ರಾಸಾಯನಿಕ ಓಷಧಿಗಳನ್ನು ಖರೀದಿ ಮಾಡಿದಾಗ ಅವರು ನಷ್ಟ ಹೊಂದಿರುತ್ತಾರೆ. ಇದರಿಂದ ಸಾಯುವ ಪರಿಸ್ಥಿತಿಯನ್ನು ಎದುರಿಸಿ ಲಾಭಾಂಶ ಬರುವ ನೀರೀಕ್ಷೆಯಲ್ಲಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಇಂತಹ ಅಸಹಾಯಕ ಕೃತ್ಯಕ್ಕೆ ಬಲಿಯಾಗುತ್ತಾರೆ ಎಂದು ಹೇಳಿದರು.
ಮನವಿ ಅರ್ಪಿಸುವಾಗ ರೈತ ಮುಖಂಡರಾದ ಬಿ.ಜಾಕೀರ್ಹುಸೇನ್, ಹೆಚ್.ಸತೀಶ್, ಡಿ.ಸಾಗರ್, ಕೆ.ರಾಮಾಂಜಿನಿ, ರೇವಣಸಿದ್ದಪ್ಪ, ಮತ್ತು ಇನ್ನಿತರೆ ಮೋಸ ಹೋದ ರೈತರು ಭಾಗವಹಿಸಿದ್ದರು.