ಹೊಸ ಸಮಸ್ಯೆಗೆ ಸಿಲುಕಿದ ಜಾಕ್ವೆಲಿನ್ ಫರ್ನಾಂಡೀಸ್.....!
ಮುಂಬೈ, ಡಿ 1 ಬಾಲಿವುಡ್ ತಾರೆ. ಶ್ರೀಲಂಕಾದ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ವಂಚನೆ ಪ್ರಕರಣವೊಂದರ ಆರೋಪಿಯೊಂದಿಗಿನ ಸಂಬಂಧದ ಮೂಲಕ ಸುದ್ದಿಯಲ್ಲಿದ್ದಾರೆ. 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸಿ ಜೈಲು ಸೇರಿದ್ದ ಸುಕೇಶ್ ಚಂದ್ರಶೇಖರ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳು ಬಯಲಿಗೆ ಬಂದ ನಂತರ ಈ ಬೆಡಗಿಗೆ ಇನ್ನಿಲ್ಲದ ಸಮಸ್ಯೆಗಳು ಆರಂಭಗೊಂಡಿವೆ.
ಆದರೆ, ಇವುಗಳನ್ನು ಜಾಕ್ವೆಲಿನ್ ತಂಡ ಸಾರಾಸಗಟಾಗಿ ಅಲ್ಲಗಳೆದಿದೆ. ಆದರೆ, ಇತ್ತೀಚೆಗೆ, ಆತನೊಂದಿಗೆ ನಟಿ ನಿಕಟವಾಗಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರೊಂದಿಗೆ ಆಕೆಗೆ ಹೊಸ ಸಮಸ್ಯೆ ಸೃಷ್ಟಿಯಾದಂತೆ ಕಂಡುಬರುತ್ತಿದೆ. ಫೋಟೋದಲ್ಲಿ ಸುಕೇಶ್ ಕೆನ್ನೆಗೆ ಆಕೆ ಮುತ್ತಿಟ್ಟಿದ್ದಾರೆ.
ಸುಕೇಶ್ ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ ಮೇ ನಿಂದ ಜೂನ್ ನಡುವೆ ಈ ಪೋಟೋ ಸೆರೆಹಿಡಿದಂತೆ ಕಂಡುಬರುತ್ತಿದೆ. ಆ ಸಮಯದಲ್ಲಿ ಜಾಕ್ವೆಲಿನ್ ನಾಲ್ಕು ಬಾರಿ ಆತನನ್ನು ಭೇಟಿಯಾಗಿದ್ದರು ಎಂದು ವರದಿಯಾಗಿದೆ. ಈ ಬೆಡಗಿಗಾಗಿ ಆತ ಖಾಸಗಿ ಜೆಟ್ ವ್ಯವಸ್ಥೆ ಮಾಡಿದ್ದ ಎಂದು ಹೇಳಲಾಗಿದೆ. ಇದಕ್ಕೂ ಮುನ್ನ ಸುಕೇಶ್ ಜೊತೆಗಿನ ಸಂಬಂಧದ ಬಗ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪ್ರಶ್ನಿಸಿದ್ದಾಗ .... ತನಗೂ ಆತನಿಗೂ ಯಾವುದೇ ಸಂಬಂಧವಿಲ್ಲ ಎಂದು ನಟಿ ಹೇಳಿಕೆ ನೀಡಿದ್ದರು. ಜಾಕ್ವೆಲಿನ್ ಪ್ರಸ್ತುತ ಅಕ್ಷಯ್ ಕುಮಾರ್ ನಾಯಕರಾಗಿರುವ 'ಬಚ್ಚನ್ ಪಾಂಡೆ' ಹಾಗೂ 'ರಾಮ್ ಸೇತು' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.