ಸೌಂದತ್ತಿ

ಪಟ್ಟಣಕ್ಕೆ ನೀರು ಪೂರೈಸುವ ಜಾಕ್‌ವೆಲ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ

ಪಟ್ಟಣಕ್ಕೆ ನೀರು ಪೂರೈಸುವ ಜಾಕ್‌ವೆಲ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ

ಸವದತ್ತಿ 18: ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಜಾಕ್‌ವೆಲ್‌ನಲ್ಲಿ ಶನಿವಾರದಿಂದ ನಾಲ್ಕೈದು ದಿನಗಳ ಕಾಲ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿರುವದರಿಂದ ಪಟ್ಟಣದ ವಿವಿಧ ವಾರ್ಡಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಸ್ವಲ್ಪ ತೊಂದರೆಯಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. 

ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಜಾಕ್‌ವೆಲ್ ಸ್ವಚ್ಛತಾ ಕಾರ್ಯಕ್ಕೆ   ಶನಿವಾರದಂದು ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅವರು, ಜಾಕ್‌ವೆಲ್‌ನ್ನು ಹಲವಾರು ವರ್ಷಗಳಿಂದ ಸ್ವಚ್ಛಗೊಳಿಸದೆ ಇರುವದರಿಂದ ನದಿಯಿಂದ ಸರಿಯಾಗಿ ನೀರೆತ್ತಲು ತೊಂದರೆಯಾಗುತ್ತಿರುವದರಿಂದ ತುರ್ತಾಗಿ ಈ ಕಾಮಗಾರಿಯನ್ನು ಮಾಡಲಾಗುತ್ತಿದೆ ಎಂದರು.  

ಸದ್ಯದ ಪರಸ್ಥಿತಿಯಲ್ಲಿ ಪಟ್ಟಣದಲ್ಲಿ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿರುವದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದ್ದು, ಜಾಕ್‌ವೆಲ್ ಸ್ವಚ್ಚಗೊಳಿಸದ ನಂತರ ಕನಿಷ್ಠಪಕ್ಷ ಮೂರು ದಿನಗಳಿಗೊಮ್ಮೆಯಾದರೂ ಕುಡಿಯುವ ನೀರನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. 

ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ ಮಾತನಾಡಿ, ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕುಡಿಯುವ ನೀರಿನ ಅತಿ ಅವಶ್ಯಕತೆ ಕಂಡು ಬಂದ ವಾರ್ಡಗಳಲ್ಲಿ ಟ್ಯಾಂಕರಗಳ ಮೂಲಕ ನೀರನ್ನು ಪೂರೈಸುವ ವ್ಯವಸ್ಥೆಯನ್ನು ಪುರಸಭೆಯಿಂದ ಕೈಗೊಳ್ಳಲಾಗಿದ್ದು, ಪಟ್ಟಣದಲ್ಲಿರುವ ಬೋರವೆಲ್‌ಗಳ ಮುಖಾಂತರವು ಸಹಿತ ಸಾರ್ವಜನಿಕರಿಗೆ ನೀರನ್ನು ಪೂರೈಸುವ ಕೆಲಸವನ್ನು ಮಾಡಲಾಗುತ್ತದೆ ಎಂದರು. ಕೂಡಲೆ ಸ್ವಚ್ಚತಾ ಕಾರ್ಯವನ್ನು ಪೂರ್ಣಗೊಳಿಸಿ ಸಮಯಾನುಸಾರ ಪಟ್ಟಣದ ಜನತೆಗೆ ನೀರನ್ನು ಪೂರೈಕೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ ಎಂದರು. 

ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ, ಸದಸ್ಯರಾದ ಮಲ್ಲಿಕಾರ್ಜುನ ಪುರದಗುಡಿ, ಅರ್ಜುನ ಅಮ್ಮೋಜಿ, ಸಂಗಮೇಶ ಹಾದಿಮನಿ, ಶಿವಾನಂದ ಪಟ್ಟಣಶೆಟ್ಟಿ, ಬಸವರಾಜ ಪ್ರಭುನವರ, ತಾ.ಪಂ ಇಓ ಯಶವಂತಕುಮಾರ, ಇಂಜನೀಯರ ನಿರ್ಮಲಾ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ