ಅಕ್ಷರಗಳು ಅನ್ನವಾಗುವ ಸಮಯವಿದು : ನಿರ್ದೇಶಕ ಸಿ ಎಂ ವಿಜಯ್
ಬೆಂಗಳೂರು, ಆಗಸ್ಟ್ 21 'ಉಸಿರೇ ಉಸಿರೇ' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಈ ವೇಳೆ ನಿರ್ದೇಶಕ ಸಿ ಎಂ ವಿಜಯ್ ತಮ್ಮ ಭಾವನೆಗಳನ್ನು ಹಂಚಿಕೊಂಡರು.
ಇದು ನನ್ನ ಅಕ್ಷರಗಳು ಅನ್ನವಾಗುತ್ತಿರುವ ಸಮಯ. ಇದೊಂದು ಪಕ್ಕಾ ಪ್ರೇಮಕಥೆ. ಇಲ್ಲಿಯವರೆಗೂ ಅನೇಕ ಪ್ರೇಮಕಥೆಯುಳ್ಳ ಚಿತ್ರಗಳು ಬಂದಿವೆಯಾದರೂ ಇದು ವಿಭಿನ್ನ ಎಂದರು.
ಅಮರಪ್ರೇಮಿಗಳು ಎಂದರೆ ಎಲ್ಲರೂ ರೋಮಿಯೋ - ಜೂಲಿಯಟ್, ಸಲೀಂ ಅನಾರ್ಕಲಿ ಅನ್ನುತ್ತಾರೆ. ಈ ಚಿತ್ರ ನೋಡಿದ ಮೇಲೆ ಪ್ರೇಕ್ಷಕರು ನಮ್ಮ ಕಥಾನಾಯಕ - ನಾಯಕಿಯನ್ನೂ ಈ ಸಾಲಿಗೆ ಸೇರಿಸಬಹುದು ಎಂದ ಅವರು, ಸೆಪ್ಟೆಂಬರ್ ಅಂತ್ಯದಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ಮಾಹಿತಿ ನೀಡಿದರು.
ನಾಯಕ ನಟ ರಾಜೀವ್, ನಾನು ಈ ತನಕ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ, ಇಂತಹ ವೇದಿಕೆ ಸಿಗಲು 10 ವರ್ಷ ಬೇಕಾಯಿತು. ಈ ಅವಕಾಶ ಮಾಡಿಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ಧನ್ಯವಾದ. ಮೋಷನ್ ಪೋಸ್ಟರ್ ಬಿಡುಗಡೆಗೆ ಆಗಮಿಸಿರುವ ಸುದೀಪ್ ಅವರಿಗೆ ವಿಶೇಷ ಧನ್ಯವಾದ ಎಂದರು.
ಒಮ್ಮೆ ನಾನು ಸುದೀಪ್ ಸರ್ ಜೊತೆ ಕಾರಿನಲ್ಲಿ ಬರುತ್ತಿದ್ದಾಗ, ಅವರ ನಟನೆಯ ಚಿತ್ರದ "ಉಸಿರೇ ಉಸಿರೇ" ಹಾಡು ಕೇಳಿದ್ದೆ. ನನಗೆ ಈ ಚಿತ್ರದ ಬಗ್ಗೆ ಗೊತ್ತಿದ್ದರಿಂದ ನಿರ್ದೇಶಕರಿಗೆ ಫೋನ್ ಮಾಡಿ ನಮ್ಮ ಚಿತ್ರಕ್ಕೆ ಇದೇ ಶೀರ್ಷಿಕೆ ಇಡೋಣ. ಈಗಲೇ ನೊಂದಾಯಿಸಿ ಎಂದು ಹೇಳಿದೆ. ಚಿತ್ರಕ್ಕಾಗಿ ನಾನು ಹೆಚ್ಚು ವರ್ಕ್ ಔಟ್ ಏನು ಮಾಡಿಲ್ಲ. ಸಹಜವಾಗಿರುವ ಪಾತ್ರ. ನಮ್ಮ ನಾಲ್ಕುವರ್ಷಗಳ ಶ್ರಮಕ್ಕೆ ಈಗ ಉತ್ತಮ ಕಾಲ ಕೂಡಿ ಬಂದಿದೆ. ಎಲ್ಲರ ಹಾರೈಕೆಯು ನಮಗಿರಲಿ ಎಂದರು.
ಎನ್ ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಿಸುತ್ತಿರುವ ನಿರ್ಮಾಪಕ ಪ್ರದೀಪ್ ಯಾದವ್, ನಾನು ಅನೇಕ ಕಥೆಗಳನ್ನು ಕೇಳಿದ್ದೀನಿ. ರಾಜೀವ್ ಹಾಗೂ ವಿಜಯ್ ಬಂದು ಹೇಳಿದ ಈ ಕಥೆ ನನ್ನ ಹೃದಯಕ್ಕೆ ಹತ್ತಿರವಾಯಿತು. ಹಾಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದೆ ಎಂದು ಹೇಳಿಕೊಂಡರು.