ಸೌಂದತ್ತಿ

ಬಾಲ್ಯ ವಿವಾಹವು ಇಂದಿಗೂ ಮುಂದುವರೆದಿರುವುದು ಶೋಚನೀಯ ; ಎಸ್‌. ಆರ್‌. ದೇಸಾಯಿ ವಿಷಾದ : ಹದಿಹರೆಯರ ಆರೋಗ್ಯ ಸಮಸ್ಯೆ ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ

ಬಾಲ್ಯ ವಿವಾಹವು ಇಂದಿಗೂ ಮುಂದುವರೆದಿರುವುದು ಶೋಚನೀಯ  ; ಎಸ್‌. ಆರ್‌. ದೇಸಾಯಿ ವಿಷಾದ : ಹದಿಹರೆಯರ ಆರೋಗ್ಯ ಸಮಸ್ಯೆ ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ 


ಸವದತ್ತಿ 15:  ಬಾಲ್ಯ ವಿವಾಹವು ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಅನಿಷ್ಟ ಪದ್ಧತಿಯಾಗಿದ್ದು, ಈ ಶತಮಾನದಲ್ಲಿಯೂ ಮುಂದುವರೆದಿರುವುದು ತುಂಬಾ ಶೋಚನೀಯವಾಗಿರುತ್ತದೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದು ಬಿಎಚ್‌ಇಓ ಎಸ್‌. ಆರ್‌. ದೇಸಾಯಿ ಹೇಳಿದರು.  

ಅವರು ಸಮೀಪದ ಹೂಲಿಕಟ್ಟಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಪಂಚಾಯತ ಆರೋಗ್ಯ ಅಮೃತ ಅಭಿಯಾನ ಹಾಗೂ ಹದಿಹರೆಯರ ಆರೋಗ್ಯ ಸಮಸ್ಯೆ ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.  

ಈ ಅಪಾಯಕಾರಿ ಪದ್ಧತಿಯು ಎಳೆ ತಾಯಂದಿರ ಮರಣ, ಶಿಶು ಮರಣ, ಅಪೌಷ್ಠಿಕತೆ ಮಾಡುವುದಲ್ಲದೆ ಮಕ್ಕಳ ಬೌದ್ಧಿಕ, ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಜವಾಬ್ದಾರಿಯನ್ನು ಹೊರುವಂತೆ ಮಾಡುತ್ತದೆ ಎಂದು ಎಚ್ಚರಿಸಿದರು.  


ಈ ಎಲ್ಲಾ ಕಾರಣಗಳಿಂದಾಗಿ ಬಾಲ್ಯ ವಿವಾಹವನ್ನು ತಡೆಯಲು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದು ಪ್ರತಿಯೊಬ್ಬ ನಿಷೇದಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಇದಲ್ಲದೆ ಪ್ರತಿಯೊಬ್ಬ ನಾಗರೀಕರೂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಕೈಜೋಡಿಸಿ ಬಾಲ್ಯ ವಿವಾಹವನ್ನು ತಡೆಯುವ ನಿಟ್ಟಿನಲ್ಲಿ ಬಾಲ್ಯ ವಿವಾಹ ನಡೆಯುವ ಬಗ್ಗೆ ತಿಳಿದು ಬಂದಲ್ಲಿ ಮಾಹಿತಿ ನೀಡಲು ಸಹಕರಿಸಬೇಕೆಂದು ಮನವಿ ಮಾಡಿದರು.  


ಎಲ್ಲರೂ ಒಂದಾಗಿ ಬಾಲ್ಯ ವಿವಾಹವೆಂಬ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗುವಂತೆ ಈ ಕಿರುಹೊತ್ತಿಗೆಯನ್ನು ಹೊರತಂದಿದ್ದು ಇದರ ಪ್ರಯೋಜನ ಪಡೆದು ಮಕ್ಕಳ ಹಕ್ಕುಗಳನ್ನು ರಕ್ಷಿಸಿ, ಮಕ್ಕಳಿಗೆ ಬಾಲ್ಯವನ್ನು ಸಂಪೂರ್ಣವಾಗಿ ಅನುಭವಿಸಲು ಅವಕಾಶ ನೀಡಿ ಉತ್ತಮ ಸದೃಢ ರಾಜ್ಯವನ್ನು ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಿ ಹಾಗೂ ಬಾಲ್ಯ ವಿವಾಹ ನಿಷೇಧ ನೆಯಮ ಉಲ್ಲಂಘನೆ ಮಾಡಿದಲ್ಲಿ 2 ವರ್ಷ ಜೈಲು ಶಿಕ್ಷೆ ಹಾಗೂ 1ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದರು. 


ನಂತರ ಮಾತನಾಡಿದ ಸಿಎಚ್‌ಓ ಶಿವಶಂಕರ ಭೂಷಣ್ಣವರ ಈ ವಯಸ್ಸಿನಲ್ಲಿ ತೀವ್ರತರವಾದ ದೈಹಿಕ ಬೆಳವಣಿಗೆ ಹಾಗೂ ಹೆಚ್ಚಿನ ದೈಹಿಕ ಚಟುವಟಿಕೆ ಗಳಿರುವುದರಿಂದ ಹದಿಹರೆಯದವರಿಗೆ ಪೌಷ್ಠಿಕಾಂಶದ ಅವಶ್ಯಕತೆ ಹೆಚ್ಚಾಗಿರುತ್ತದೆ. ಮುಖ್ಯವಾಗಿ ಕ್ಯಾಲ್ಕಿಯಂ, ಅಯೋಡಿನ್ ಮತ್ತು ಕಬ್ಬಿಣಾಂಶದ ಜೊತೆ ಎಲ್ಲಾ ಪೌಷ್ಠಿಕಾಂಶಗಳ ಹೆಚ್ಚಿನ ಅವಶ್ಯಕತೆ ಇದೆ.  


ಹೆಣ್ಣು ಮಕ್ಕಳು ಮುಟ್ಟಾಗುವುದರಿಂದ ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಜಂತು ಹುಳುಗಳಿಂದಾಗಿ ರಕ್ತ ಹೀನತೆಯಿಂದ ಬಳಲುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಕಬ್ಬಿಣಾಂಶ ಹೆಚ್ಚಾಗಿರುವ ಹಸಿರು ತರಕಾರಿ, ಮೊಳಕೆ ಕಟ್ಟಿದ ಕಾಳು, ಬೆಲ್ಲದ ಜೊತೆ ಹಾಲು, ಮೊಟ್ಟೆ, ಮಾಂಸ, ಮೀನು ಮುಂತಾದ ಪೌಷ್ಠಿಕಾಹಾರ ಸೇವಿಸಬೇಕು ಎಂದರು.  

ಸಾಮಾನ್ಯವಾಗಿ ಹೆಣ್ಣುಮಕ್ಕಳಿಗಿಂತ ಸ್ವಲ್ಪ ತಡವಾಗಿ ಗಂಡುಮಕ್ಕಳಲ್ಲಿ ಹರೆಯತನ ಕಾಣುತ್ತೇವೆ. ಸ್ವರದಲ್ಲಿ ಬದಲಾವಣೆ, ಮುಖದಲ್ಲಿ ಗಡ್ಡ, ಮೀಸೆ, ಎದೆ-ಕಂಕುಳು ಮತ್ತು ಜನನಾಂಗದ ಭಾಗದಲ್ಲಿ ರೋಮದ ಬೆಳವಣಿಗೆ ಕಂಡುಬರುತ್ತದೆ. ಜನನಾಂಗದ ಗಾತ್ರದಲ್ಲಿ ಬೆಳವಣಿಗೆಯಾಗಿ ವೀರ್ಯ ಉತ್ಪಾದನೆ ಪ್ರಾರಂಭವಾಗುತ್ತದೆ.  ಒಮ್ಮೊಮ್ಮೆ ಜನನಾಂಗದ ಉದ್ರೇಕ ಹಾಗೂ ತಮಗರಿವಿಲ್ಲದಂತೆ ವೀರ್ಯಸ್ಕಲನವಾಗಬಹುದು. ಹದಿಹರೆಯದ ಹುಡುಗರಲ್ಲಿ ಈ ಎಲ್ಲಾ ಬದಲಾವಣೆಗಳು ಸಾಮಾನ್ಯ ಹಾಗೂ ನೈಸರ್ಗಿಕ ಅದರ ಬಗ್ಗೆ ನಾಚಿಕೆ, ಭಯ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು. 


ಎಚ್‌ಆಯ್‌ಓ ಎಸ್‌. ಎಸ್‌. ಹಿರೇಮಠ, ಪಿಎಸ್‌ಓ ಆರ್, ಆರ್‌. ಈಟಿ, ಮುಖ್ಯೋಪಾಧ್ಯಾಯ ಉಮೇಶ ಅಗಸಿಮನಿ, ಕೆಎಚ್‌ಪಿಓ ಸಂಸ್ಥೆಯ ತಾಲೂಕಾ ಸಂಯೋಜಕ ಆನಂದ ಚಲವಾದಿ, ಅಸ್ಫಾಕ ಸುಲ್ತಾನ ಸೇರಿದಂತೆ ಶಾಲಾ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ