ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಬರುತ್ತಿರುವುದು ನಿಜ; ಜನಪ್ರತಿನಿಧಿಗಳ ಪ್ರಯತ್ನ, ಹಸಿ ಸುಳ್ಳು: ಉಮೇಶ ಪಾಟೀಲ..!!
ಲೋಕದರ್ಶನ ವರದಿ
ಕಾಗವಾಡ 30: ಕಳೆದ ಐದಾರು ದಿನಗಳಿಂದ ಕೃಷ್ಣಾ ನದಿಗೆ ರಾಜಾಪೂರ ಬ್ಯಾರೇಜ್ ಮುಖಾಂತರ ಸುಮಾರು 500 ಕ್ಯೂಸೆಕ್ ನೀರು ಹರಿದು ಬರುತ್ತಿರುವುದು ನಿಜವಾಗಿದ್ದು, ಈ ನೀರು ಮಹಾರಾಷ್ಟ್ರದ ಮೈಶಾಳ ಬ್ಯಾರೇಜ್ ರೀಪೇರಿ ಕಾರ್ಯದಿಂದ ಹರಿದು ಬರುತ್ತೀದೆ ವಿನಃ ಇಲ್ಲಿಯ ಜನಪ್ರತಿನಿಧಿಗಳ ಪ್ರಯತ್ನದಿಂದಲ್ಲವೆಂದು ಕಾಗವಾಡ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಉಮೇಶ ಪಾಟೀಲ ಮಾಹಿತಿ ನೀಡಿದ್ದಾರೆ.
ಅವರು, ಸೋಮವಾರ ದಿ. 30 ರಂದು ರಾಜಾಪೂರ ಬ್ಯಾರೇಜ್ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಕಳೆದ ಒಂದು ವಾರದಿಂದ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಹರಿದು ಬರುತ್ತಿರುವುದು ಸಂತಸದ ವಿಷಯವಾಗಿದೆ. ಈ ಕುರಿತು ಕೆಲ ಪತ್ರಿಕೆಗಳಲ್ಲಿ ಇಲ್ಲಿಯ ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಕೊಯ್ನಾ ಅಣೆಕಟ್ಟಿನಿಂದ 500 ಕ್ಯೂಸೆಕ್ ನೀರು ಬಿಡಿಸಿಕೊಂಡು ಬರಲಾಗಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ.
ಈ ಕುರಿತು ಮಹಾರಾಷ್ಟ್ರದ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಾಗ, ಸಾಂಗಲಿ ಜಿಲ್ಲೆಯ ಮೈಶಾಳ ಬ್ಯಾರೇಜ್ ಮತ್ತು ರಾಧಾನಗರಿ ಡ್ಯಾಂ ರೀಪೇರಿ ಕೆಲಸ ನಡೆದಿದ್ದು, ಅಲ್ಲಿಂದ ನೀರು ಹರಿದು ಬರುತ್ತಿದೆ. ಕರ್ನಾಟಕದ ಯಾವುದೇ ಜನಪ್ರತಿನಿಧಿಗಳು ಕೃಷ್ಣಾ ನದಿಗೆ ನೀರು ಬಿಡಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿಲ್ಲವೆಂದು ತಿಳಿಸಿದ್ದಾಗಿ ತಿಳಿಸಿದ ಅವರು, ಇಲ್ಲಿಯ ಜನಪತ್ರಿನಿಧಿಗಳು ನಿಜವಾಗಿಯೂ ಈ ಭಾಗದ ರೈತರ ಬಗ್ಗೆ ಕಾಳಜಿ ಹೊಂದಿದ್ದರೇ ತಮ್ಮ ವರ್ಚಸ್ಸು ಬಳಿಸಿಕೊಂಡು ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡಿಸಕೊಂಡು ಬರಲಿ ಎಂದು ಸವಾಲು ಹಾಕಿದ್ದಾರೆ.
ಬೇಸಿಗಯ ಬಿಸಿಲು ದಿನೆ-ದಿನೇ ಹೆಚ್ಚುತ್ತಿದ್ದು, ಕೃಷ್ಣಾ ನದಿ ಈಗಾಗಲೇ ಬತ್ತಿ ಹೋಗುತ್ತಿದ್ದರೂ ಸಹ ಇಲ್ಲಿಯ ಜನಪತ್ರಿನಿಧಿಗಳಾಗಲಿ ಅಥವಾ ನೀರಾವರಿ ಇಲಾಖೆಯ ಅಧೀಕಾರಿಗಳಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತು ಮಹಾರಾಷ್ಟ್ರ ಸರ್ಕಾರದೊಂದಿಗೆ ನೀರು ಬಿಡುಗಡೆ ಕುರಿತು ಯಾವುದೇ ಮನವಿ ಮಾಡಿಲ್ಲವೆಂದು ಪರೋಕ್ಷವಾಗಿ ಜನಪ್ರತಿನಿಧಿಗಳು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ವಿರದ್ಧ ಅಸಮಾಧಾನ ಹೊರಹಾಕಿದ್ದಾರೆ.