ವೈದ್ಯರ ಬಗ್ಗೆ ಅವಹೇಳನಕಾರಿ ಸುದ್ದಿ ಬಿತ್ತರಿಸುವುದು ಸರಿಯಲ್ಲ: ಡಾ ಖನ್ನೂರ
ರಾಣೇಬೆನ್ನೂರು 19: ಕೋವಿಡ್ ಸೋಂಕು ರೋಗ ಹರಡುತ್ತಿರುವ ಕಳೆದ ವರ್ಷದಿಂದ ವೈದ್ಯರು ತಮ್ಮ ಪ್ರಾಣವನ್ನು ಪಣಕಿಟ್ಟು ಅತ್ಯಂತ ಪ್ರಾಮಾಣಿಕವಾಗಿ ತಮ್ಮ ವೃತ್ತಿ ಧರ್ಮವನ್ನು ಪರಿಪಾಲಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಕೆಲ ಟಿವಿ-ಮುದ್ರಣ ಮಾದ್ಯಮದವರು ವೈದ್ಯರು ಮತ್ತು ವೈದ್ಯ ವೃತ್ತಿ ಕುರಿತಂತೆ ರಕ್ತ ಹೀರುವವರು, ದುಡ್ಡು ಹೊಡೆಯುವವರು, ವೈದ್ಯಕೀಯ ದೆವ್ವಗಳು, ದರೋಡೆಕೋರರು, ಲೂಟಿ ಮಾಡುವವರು ಎಂಬಿತ್ಯಾದಿ ಅವಹೇಳನಕಾರಿ ಸುದ್ದಿ ಬಿಂಬಿಸುತ್ತಿರುವುದರಿಂದ ಪ್ರಾಮಾಣಿಕ ಸೇವೆ ಸಲ್ಲಿಸುವ ವೈದ್ಯರಿಗೆ ಅತೀವ ಮಾನಸಿಕ ವೇದನೆ ಉಂಟಾಗುತ್ತಲಿದೆ. ನಿಜವಾಗಿ ಪರಾಮರ್ಶಿಸಿ ಸುದ್ದಿ ಮಾಡುವುದರಿಂದ ಯಾರಿಗೂ ಯಾವುದೇ ರೀತಿಯಲ್ಲಿ ನೋವುಂಟಾಗುವುದಿಲ್ಲ. ಮಾಧ್ಯಮಗಳು ವೈದ್ಯರ ಹಾಗೂ ರೋಗಿಗಳ ಮಧ್ಯ ಬಾಂದವ್ಯ ಬೆಸೆಯ ಬೇಕೆ ಹೊರತು ವಿರಸಮೂಡಿಸುವಂತಾಗಬಾರದು. ಸಮಾಜದ ವಾರಿಯರ್ಸಗಳಾಗಿ ಸಮಸ್ತ ಜನ ಸಮೂಹದ ಆರೋಗ್ಯ ರಕ್ಷಿಸುವಲ್ಲಿ ವೈದ್ಯರು ನಿರ್ವಹಿಸುತ್ತಿರುವ ಕಾರ್ಯಕ್ಕೆ ಸಹಕಾರಿಗಳಾಗಬೇಕು ಎಂದು ನಗರದ ಖ್ಯಾತ ಮಕ್ಕಳ ತಜ್ಞ ಮತ್ತು ಭಾರತೀಯ ವೈದ್ಯಕೀಯ ಸಂಘದ ತಾಲೂಕಾ ಅಧ್ಯಕ್ಷ ಡಾಽಽ ಪ್ರವೀಣ ಎಂ. ಖನ್ನೂರ ಮನವಿ ಮಾಡಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮ ಪ್ರಕಟಣೆ ನೀಡಿರುವ ಡಾಽಽ ಖನ್ನೂರ ಅವರು ಸಮಸ್ತ ಕರ್ನಾಟಕದ ಖಾಸಗಿ ಹಾಗೂ ಸರ್ಕಾರಿ ವೈದ್ಯರು ಕೋವಿಡ್-19 ಆರೋಗ್ಯ ಸಮಸ್ಯೆಯ ಉಪಾಯ ಮತ್ತು ಬಿಕ್ಕಟ್ಟಿನಿಂದ ಜನ ಸಾಮಾನ್ಯರನ್ನು ರಕ್ಷಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಪ್ರಯತ್ನಕ್ಕೆ ಸಾಕಷ್ಟು ವೈದ್ಯಕೀಯ ಸಲಕರಣೆ ಹಾಗೂ ಓಷಧಿಗಳ ಕೊರತೆ ಮೀರಿ ರೋಗಿಗಳನ್ನು ಗುಣಪಡಿಸಲು ಹೋರಾಡುತ್ತಿದ್ದಾರೆ. ಈಗಾಗಲೆ ಮೊದಲನೇ ಮತ್ತು 2ನೇ ಅಲೆಯಲ್ಲಿ ರಾಜ್ಯಾದ್ಯಂತ ಹಿರಿಯ ಮತ್ತು ಕಿರಿಯ ವೈದ್ಯರುಗಳನ್ನು ಕಳೆದುಕೊಂಡಿದ್ದೇವೆ. ಇಷ್ಟಾದರೂ ವೃತ್ತಿ ಧರ್ಮಕ್ಕೆ ಚ್ಯುತಿಬಾರದ ರೀತಿಯಲ್ಲಿ ವೈದ್ಯ ವೃಂದ 24/7 ಕಲ ಪಿಪಿಇ ಕಿಟ್ ಧರಿಸಿ ಶ್ರಮಿಸುತ್ತಿದ್ದಾರೆ. ಹೀಗಿದ್ದಾಗ್ಯೂ ವೈದ್ಯರ ಮೇಲೆ ಮಾನಸಿಕ-ಭೌತಿಕವಾಗಿ ಹಲ್ಲೆ ನಡೆಸುವುದು ಎಷ್ಟು ಸಮಂಜಸ ಎಂದು ಅವರು ನಾಗರೀಕ ಸಮುದಾಯವನ್ನು ಪ್ರಶ್ನಿಸಿದ್ದಾರೆ.
ಸರ್ಕಾರ ಈಗಾಗಲೇ ಇಂತಹ ಘಟನೆ ನಡೆದಾಗ ಅವರ ಮೇಲೆ ಸೂಕ್ತ ಕ್ರಮ ಜರುಗಿಸಲು ಕಠಿಣ ಕ್ರಮ ಕೈಗೊಂಡಿದ್ದು ಎಲ್ಲ ಇಲಾಖೆಗಳಿಗೂ ಸೂಚಿಸಿದೆ. ಸಾರ್ವಜನಿಕರು ಮತ್ತು ಮಾಧ್ಯಮದವರು ವೈದ್ಯರಿಗೆ ಮಾನಸಿಕ ಹಿಂಸೆಯಾಗುವಂತಹ ವರದಿಗಳನ್ನು ಪ್ರಕಟಿಸದೇ ಸಹಾನುಭೂತಿಯಿಂದ ಪರೀಶೀಲಿಸಿ ನಾಗರೀಕ ಸೇವೆಯಲ್ಲಿ ತೊಡಗಿರುವ ವೈದ್ಯರೊಂದಿಗೆ ಸಹಕರಿಸಿ ತಾವು ಸಹ ಕೋವಿಡ್ ಸಂಪೂರ್ಣ ನಿರ್ಮೂಲನೆಗೆ ಮುಂದಾಗಬೇಕೆಂದು ಡಾ.ಖನ್ನೂರ ಕೋರಿದ್ದಾರೆ.