ಮೋದಿ ಅವರ ನಾಯಕತ್ವದಲ್ಲಿ ಕೆಲಸ ಮಾಡುವುದೇ ಹೆಮ್ಮೆಯ ವಿಷಯ; ಶಾ
ನವದೆಹಲಿ, ಅಕ್ಟೋಬರ್ 07: ರಾಜಕೀಯ ಬದುಕಿನಲ್ಲಿ 20 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರ ವಿಶೇಷ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಹೆಮ್ಮೆಯ ವಿಷಯ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಪ್ರಧಾನಿ ಮೋದಿ ಅವರ ಆಲೋಚನೆ, ದೃಷ್ಟಿಕೋನ ಮತ್ತು ವರ್ಚಸ್ಸಿನ ವ್ಯಕ್ತಿತ್ವದಿಂದ ಪ್ರೇರಿತರಾಗಿ ಪ್ರತಿ ಭಾರತೀಯ ಕೂಡ ದೇಶವನ್ನು 'ವಿಶ್ವಗುರು'ವನ್ನಾಗಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಅವರ ವಿಶೇಷ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಹೆಮ್ಮೆಯ ವಿಷಯ" ಎಂದಿದ್ದಾರೆ.
2001ರ ಅ.7ರಂದು ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅಂದಿನಿಂದ ಅವರು ದೇಶಸೇವೆಯತ್ತ ತಮ್ಮ ಪಯಣವನ್ನು ನಿರಂತರವಾಗಿ ಸವೆಸಿದ್ದಾರೆ ಎಂದಿದ್ದಾರೆ.
ಅವರ ನೇತೃತ್ವದಲ್ಲಿ ಗುಜರಾತ್ ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ. ವಿಧ್ವಂಸಕ ಭೂಕಂಪಕ್ಕೆ ತುತ್ತಾಗಿದ್ದ ಭುಜ್ ಈಗ ಅಭಿವೃದ್ಧಿಯ ಮಾದರಿಯಾಗಿದೆ ಎಂದು ಶ್ಲಾಘಿಸಿದ್ದಾರೆ.