ಚಿಕ್ಕೋಡಿ

ಫಲಾನುಭವಿಗಳಿಗೆ ಶೀಘ್ರ ಮನೆ ಮಂಜೂರಾತಿ ಆದೇಶ ಪತ್ರ ವಿತರಣೆ

ಫಲಾನುಭವಿಗಳಿಗೆ ಶೀಘ್ರ ಮನೆ ಮಂಜೂರಾತಿ ಆದೇಶ ಪತ್ರ ವಿತರಣೆ

ಚಿಕ್ಕೋಡಿ 17: ರಾಜ್ಯ ಸರ್ಕಾರ ಮಂಜೂರು ಮಾಡಿರುವ ಐದು ಲಕ್ಷ ಮನೆಗಳಲ್ಲಿ ಚಿಕ್ಕೋಡಿ- ಸದಲಗಾ ಮತಕ್ಷೇತ್ರಕ್ಕೆ 1180 ಮನೆಗಳಿಗೆ 21.96 ಕೋಟಿ ರೂ ಅನುದಾನ ಮಂಜೂರಾತಿ ನೀಡಿದೆ. ಇದರ ಜೊತೆಗೆ ಅನ್ನಪೂರ್ಣೇಶ್ವರಿ ಫೌಂಡೇಶನ ವತಿಯಿಂದ 1.11 ಕೋಟಿ ರೂ ಸಹಾಯಧನವನ್ನು ಎಲ್ಲ ಫಲಾನುಭವಿಗಳಿಗೆ ನೀಡಲಾಗುತ್ತದೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಜಂಟಿಯಾಗಿ ತಿಳಿಸಿದರು. 

ಯಕ್ಸಂಬಾ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ, ಸದಲಗಾ ಪುರಸಭೆ ಹಾಗೂ ಯಕ್ಸಂಬಾ ಪಟ್ಟಣ ಪಂಚಾಯತಿ ಮತ್ತು 25 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಸತಿ ರಹಿತ ಕುಟುಂಬಗಳು ಸಾಕಷ್ಟು ಪ್ರಮಾಣದಲ್ಲಿದ್ದು, ಮನೆ ಇಲ್ಲದೇ ವಸತಿ ರಹಿತ ಕುಟುಂಬದವರು ಪರದಾಡುವಂತಾಗಿದೆ, ಹೀಗಾಗಿ ಕುಟುಂಬದವರು ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬಕ್ಕೆ ಸೇರಿದವರಾಗಿದ್ದು, ಸ್ವಂತ ಮನೆಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಮನೆಗಳನ್ನು ಮಂಜೂರು ಮಾಡುವಂತೆ ಸಾರ್ವಜನಿಕರು ಪುರಸಭೆ, ಪಟ್ಟಣ ಪಂಚಾಯತ, ಗ್ರಾಮ ಪಂಚಾಯತ ಅಧ್ಯಕ್ಷರು ಸದಸ್ಯರು ನಮ್ಮಲ್ಲಿ ಮೇಲಿಂದ ಮೇಲೆ ಮನವಿ ಮಾಡಿದ್ದರು ಎಂದರು. 

ಪ್ರಸಕ್ತ 2021-22ನೇ ಸಾಲಿನ ಗ್ರಾಮ ಪಂಚಾಯತಿ-ನಗರ ಸ್ಥಳೀಯ ಸಂಸ್ಥೆವಾರು ಒಟ್ಟು 5 ಲಕ್ಷಗಳ ಹೊಸ ಮನೆಗಳ ಗುರಿಯನ್ನು ನಿಗದಿ ಮಾಡಿದರು. ಚಿಕ್ಕೋಡಿ-ಸದಲಗಾ ಮತಕ್ಷೇತ್ರಕ್ಕೆ ಎಬಿಸಿ ಗ್ರಾಮ ಪಂಚಾಯತ ವರ್ಗವಾರು ಬರುವ 25 ಗ್ರಾಮ ಪಂಚಾಯತಿಗಳಿಗೆ ಬಸವ ವಸತಿಯೋಜನೆಯಡಿ 741 ಫಲಾನುಭವಿಗಳಿಗೆ ನಿಗಮದಿಂದ 11,70,78,000 ಗಳ ಅನುದಾನ ಮಂಜೂರಾತಿ ದೊರೆತಿರುತ್ತದೆ. ಅದರಂತೆ ಈ ಫಲಾನುಭವಿಗಳಿಗೆ ತಾಲ 8000ರೂ. ಗಳಂತೆ ಅನ್ನಪೂರ್ಣೇಶ್ವರಿ ಫೌಂಡೇಶನ ವತಿಯಿಂದ 59,28,000 ಗಳ ಸಹಾಯಧನವನ್ನು ನೀಡಲಾಗುವದು ಎಂದರು. 

ಅದೇ ರೀತಿ ಅಂಬೇಡ್ಕರ ನಿವಾಸ ಯೋಜನೆಯಡಿ 239 ಫಲಾನುಭವಿಗಳಿಗೆ ನಿಗಮದಿಂದ ರೂ. 4,56,49,000ಗಳ ಅನುದಾನವನ್ನು ಮಂಜೂರು ಮಾಡಿರುತ್ತಾರೆ. ಇವುಗಳಿಗೂ ಸಹ ಅನ್ನಪೂರ್ಣೇಶ್ವರಿ ಫೌಂಡೇಶನ ವತಿಯಿಂದ ತಲಾ ರೂ.5000 ರಂತೆ ರೂ.11,95,000 ಅನುದಾನವನ್ನು ಹಂಚಿಕೆ ಮಾಡಲಾಗುವುದು.  

ಚಿಕ್ಕೋಡಿ, ಸದಲಗಾ ಪುರಸಭೆ ಹಾಗೂ ಯಕ್ಸಂಬಾ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ವಾಜಪೇಯಿ ವಸತಿ ನಿಗಮ (ನಗರ) ಯೋಜನೆಯಡಿ 152 ಫಲಾನುಭವಿಗಳಿಗೆ ರೂ 4,10,40,000 ಹಾಗೂ ಅನ್ನಪೂರ್ಣೇಶ್ವರಿ ಫೌಂಡೇಶನ ವತಿಯಿಂದ 30,40,000 ಮತ್ತು ಅಂಬೇಡ್ಕರ ವಸತಿ ಯೋಜನೆಯಡಿ 48 ಫಲಾನುಭವಿಗಳಿಗೆ ನಿಗಮದಿಂದ 1,58,40,000 ಹಾಗೂ ಅನ್ನಪೂರ್ಣೇಶ್ವರಿ ಫೌಂಡೇಶನ ವತಿಯಿಂದ 9,60,000/- ಹಿಗೇ ಒಟ್ಟು 200 ಮನೆಗಳ ಗುರಿಯನ್ನು ಹಂಚಿಕೆ ಮಾಡಲಾಗಿದೆ. ನಿಗಮದಿಂದ ಹಾಗೂ ಅನ್ನಪೂರ್ಣೇಶ್ವರಿ ಫೌಂಡೇಶನ ವತಿಯಿಂದ ರೂ. 6,08,80,000 ಅನುದಾನವನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. 

ಮಂಜೂರಾದ ಮನೆಗಳ ಫಲಾನುಭವಿಗಳ ಆಯ್ಕೆಯನ್ನು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಇರುವ ಆಶ್ರಯ ಸಮೀತಿಯಲ್ಲಿ ಪಟ್ಟಿಗೆ ಅನುಮೋದನೆ ನೀಡಿ ಮಂಜೂರಾತಿಗಾಗಿ ರಾಜೀವಗಾಂಧೀ ವಸತಿ ನಿಗಮಕ್ಕೆ ಕಳುಹಿಸಿ ಮಂಜೂರಾತಿ ಪಡೆದುಕೊಂಡು ಶೀಘ್ರದಲ್ಲಿ ಮನೆ ಮಂಜೂರಾತಿ ಆದೇಶ ಪತ್ರಗಳನ್ನು ನೀಡಲಾಗುವುದು ಎಂದು ಪ್ರಕಾಶ ಹುಕ್ಕೇರಿ ತಿಳಿಸಿದರು. 


ಸುದ್ದಿ ಓದಿ