ಒಮಿಕ್ರಾನ್ ವೈರಸ್ ಅತ್ಯಂತ ಜಾಗೃತಿಯಿಂದ ಓಡಿಸಬೇಕು: ಶಿವಾನಂದ ಶ್ರೀ
ರಾಣೇಬೆನ್ನೂರ 04: ದೇಶದಲ್ಲಿ ವೈಭವೀಕರಿಸಿದ ಕೋವಿಡ್-19 ಸೋಂಕು ವೈರಸ್ ಪ್ರಕರಣದಿಂದ ಜನರು ಹೈರಾಣಾಗಿದ್ದಾರೆ. ಇನ್ನೇನು ಮಹಾಮಾರಿ ತೊಲಗಿತು ಎಂದು ಜನರು ನಿಟ್ಟುಸಿರು ಬಿಡುವಾಗಲೇ 3ನೇ ಅಲೆ ಒಮಿಕ್ರಾನ್ ರೂಪಾಂತರಿ ಆಕ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕರು ಎಚ್ಚೆತ್ತುಕೊಂಡು ಜಾಗೃತರಾಗಿ ಕುಟುಂಬವನ್ನು ರಕ್ಷಿಸಿಕೊಳ್ಳಲು ವಿದ್ಯಾರ್ಥಿಗಳು ಚುಚ್ಚುಮದ್ದನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಲು ಮುಂದಾಗಬೇಕು ಎಂದು ಗ್ರಾಪಂ ಅಧ್ಯಕ್ಷ ಮಹಾದೇವಗೌಡ ಜಾಪಾಳಿ ಕರೆ ನೀಡಿದರು.
ಅವರು ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪ.ಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ,ಪ್ರಾಥಮಿಕ ಆರೋಗ್ಯ ಕೇಂದ್ರವು ಸಂಯುಕ್ತವಾಗಿ ಆಯೋಜಿಸಿದ್ದ 15 ರಿಂದ 18 ವರ್ಷದ ವಿದ್ಯಾರ್ಥಿಗಳಿಗೆ ಕೋವಾಕ್ಸಿನ್ ಲಸಿಕೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಎಲ್ಲ ಹಂತದ ಇಲಾಖೆಗಳ ಅಧಿಕಾರಿಗಳು ವಿಶೇಷವಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ತಮ್ಮ ಜೀವದ ಹಂಗನ್ನು ತೊರೆದು ಎಲ್ಲರ ಸಹಕಾರದೊಂದಿಗೆ 2ನೇ ಅಲೆ ಸಂಪೂರ್ಣ ಯಶಸ್ವಿಗೊಳಿಸಿ ನಾಗರಿಕರ ಪ್ರಾಣ ಉಳಿಸಿದರು. ಅವರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ದಿವ್ಯ ಸಾನಿದ್ಯ ವಹಿಸಿದ್ದ ಗದಗ ಶಿವಾನಂದ ಬೃಹನ್ಠಠದ ಜಗದ್ಗುರು ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಬೇಕಾದರೆ ಮೊದಲು ಕನಸು ಕಾಣಬೇಕು. ಕನಸು ಸಾಕಾರಗೊಳ್ಳಬೇಕಾದರೆ ನಿರಂತರ ಪರಿಶ್ರಮ ಬೇಕು. ಅಂದಾಗ ಮಾತ್ರ ಫಲ ಸಿಗಲು ಸಾಧ್ಯ. ಕಷ್ಟಪಟ್ಟು ಓದದೆ ಬಹು ಇಷ್ಟಪಟ್ಟು ಓದಿದಾಗ ಮಾತ್ರ ಪರೀಕ್ಷೆಯಲ್ಲಿ ಯಶಸ್ಸನ್ನು ಹೊಂದಲು ಸಾಧ್ಯವಿದೆ ಎಂದ ಶ್ರೀಗಳು, ರೂಪಾಂತರಿ ವೈರಸ್ಸನಿಂದ ಪಾರಾಗಬೇಕಾದರೆ ಮೈ ಚಳಿ ಬಿಟ್ಟು ಕೈ ಕಟ್ಟಿ ಕೂರುವುದು ಸರಿಯಲ್ಲ. ಸರ್ಕಾರ ವಿಧಿಸಿರುವ ನಿಯಮಾವಳಿ ಅನುಸರಿಸಿಕೊಂಡು ಪ್ರಾಣ ರಕ್ಷಣೆಗೆ ಮುಂದಾಗಬೇಕು ಎಂದರು.
ತಾಲೂಕು ವೈಧ್ಯಾಧಿಕಾರಿ ಡಾ.ಜಿ.ಸಂತೋಶಕುಮಾರ್ ಮಾತನಾಡಿ, ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅಭಿಯಾನ ಕಾರ್ಯಕ್ರಮವನ್ನು ಮಾಡಲಾಗಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಪಡೆದುಕೊಂಡು ಜೊತೆಗೆ ಇನ್ನಿತರರಿಗೆ ಇದರ ಬಗ್ಗೆ ಅರಿವು ಮೂಡಿಸಿ ತಾವೂ ಸಹ ಸರ್ಕಾರದ ಮತ್ತು ಇಲಾಖೆಯ ಒಂದು ಭಾಗವಾಗಿ ಸಮಾಜ ರಕ್ಷಣೆಗೆ ಮುಂದಾಗಬೇಕು ಎಂದರು.
ಕಾಲೇಜು ಪ್ರಾಚಾರ್ಯ ಪಿ.ಮುನಿಯಪ್ಪ ಅವರು ಲಸಿಕಾ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಭರಮಗೌಡ ಕುಡುಪಲಿ, ಬಸಪ್ಪ ನೋಟದ, ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಆರ್.ಬಿ.ತೋಟಿಗೇರ, ಸದಸ್ಯ ಮಂಜಪ್ಪ ಲಿಂಗದಹಳ್ಳಿ, ಯೋಜನಾಧಿಕಾರಿ ಹೆಚ್.ಶಿವಾನಂದ, ಮುಖಂಡರಾದ ಪರಮೇಶಪ್ಪ ಕುಡುಪಲಿ, ಡಾ.ಉದಯಕುಮಾರ.ಎನ್.ಆರ್, ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾಕಾರ್ಯಕರ್ತೆಯರು, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.