ರಾಣೆಬೆನ್ನೂರ

ಸಮಗ್ರ ನಗರ ನೀರು ನಿರ್ವಹಣೆ: ಜಲಸಿರಿ ಯೋಜನೆ ಮಹತ್ವದ ಸಭೆ

ಸಮಗ್ರ ನಗರ ನೀರು ನಿರ್ವಹಣೆ: ಜಲಸಿರಿ ಯೋಜನೆ ಮಹತ್ವದ ಸಭೆ


ಲೋಕದರ್ಶನ ವರದಿ 

ರಾಣೇಬೆನ್ನೂರು 10: ವಾಣಿಜ್ಯ  ನಗರವು ಕಳೆದ 2 ದಶಕಗಳ ಅವದಿಯಲ್ಲಿ ನಾಗಾಲೋಟದಲ್ಲಿ ಸಾಗಿ ಬೆಳವಣಿಗೆ ಕಾಣುತ್ತಲಿದೆ ಜನಸಂಖ್ಯೆ ಬೆಳೆದಂತೆ ತಂತ್ರಜ್ಞಾನವು ಬೆಳೆದಿದೆ.ಅದಕ್ಕೆ ಅನುಗುಣವಾಗಿ ಮೂಲಭೂತ ಸೌಲಭ್ಯಗಳು ದೊರಕಿಸಬೇಕಾಗುತ್ತದೆ. ಅಮೃತ್ ಸಿಟಿ ಯೋಜನೆಯಲ್ಲಿ ನಿರಂತರ ನೀರು ಸರಬರಾಜು ಜಾರಿಗೆ ಬಂದಿದೆ. ಪ್ರತಿಯೊಬ್ಬರು ಅದರ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದು ನಗರಸಭಾ ಸದಸ್ಯ ಪ್ರಕಾಶ ಪೂಜಾರ ಹೇಳಿದರು. 

ಅವರು ಇಲ್ಲಿನ ಅಂಬೇಡ್ಕರ ನಗರದ ಕೂನಬೇವು ರಸ್ತೆಯಲ್ಲಿ ನೀಡ್ಸ್‌ ಸಂಸ್ಥೆ ಆಯೋಜಿಸಿದ್ದ  ಕರ್ನಾಟಕ ಸರ್ಕಾರ ನಗರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಜಲಸಿರಿ ಯೋಜನೆಯ ಕುರಿತು ನಡೆದ ವಾರ್ಡ್‌ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರ  ಸಮಗ್ರ ಅಭಿವೃದ್ಧಿಗಾಗಿ ನಗರಸಭೆಯ ತಮ್ಮ ತಮ್ಮ ವಾರ್ಡಗಳ ಸದಸ್ಯರು ನಿರಂತರವಾಗಿ ಶ್ರಮಿಸುತ್ತಿದ್ದಾರೆ, ಅಮೃತ್ ಸಿಟಿ ಯೋಜನೆಯಿಂದ ನಗರ ಸಂಪೂರ್ಣ ಸ್ವಚ್ಚ  ಮತ್ತು ಸುಂದರ ನಗರವಾಗಲಿದೆ ಎಂದರು.  

  ಇಂದಿನ ಬದಲಾದ ವಾತಾವರಣದಲ್ಲಿ ಎಲ್ಲರೂ ಹೊಸಹೊಸ ಯೋಜನೆಗಳನ್ನು ಸ್ವಾಗತಿಸಬೇಕು ಇದರಿಂದ ಕುಟುಂಬದಲ್ಲಿ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳು ಪಡೆಯಲು ಸಾಧ್ಯವಾಗುವುದು. ಮಹಿಳೆಯರು 24 ತಾಸುಗಳ ಕಾಲ ದೊರೆಯುವ ನೀರನ್ನು ಬೇಕಾಬಿಟ್ಟಿಯಾಗಿ ಪೋಲು ಮಾಡದೆ ಅಗತ್ಯಕ್ಕೆ ತಕ್ಕಂತೆ ಹಿತ ಮತ್ತು ಮಿತವಾಗಿ ಬಳಸಿಕೊಳ್ಳಬೇಕು. ಇದರಿಂದ ಯಾವುದೇ ಆರ್ಥಿಕ ಭಾರವನ್ನು ಬರಲಾರದು. ಯಾರೂ ಈ ಯೋಜನೆಯ ಬಗ್ಗೆ ತಪ್ಪು ಕಲ್ಪನೆ ಇಟ್ಟುಕೊಳ್ಳಬಾರದು. ಸಂಬಂಧಿಸಿದ ಅಧಿಕಾರಿಗಳು ವಾರ್ಡ್‌ಮಟ್ಟದಲ್ಲಿ ಜಾಗೃತಿ ಕುರಿತು ಸಭೆ ನಡೆಸುತ್ತಿದ್ದಾರೆ. ಪಾಲ್ಗೊಂಡು ಸಹಕಾರ ನೀಡಬೇಕು ಎಂದು ಹೊಸಗೌಡ್ರ ಕರೆ ನೀಡಿದರು.  

  ಪ್ರಾಸ್ತಾವಿಕವಾಗಿ ಮಾತನಾಡಿದ ಜಲಸಿರಿ ಯೋಜನೆಯ ಮುಖ್ಯ ಅಭಿಯಂತರ ಉಮೇಶ ಮುತ್ತಪ್ಪನವರ ಅವರು ನಗರದಲ್ಲಿ ಈ ಯೋಜನೆಯ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಸಾಗಿದ್ದೇವೆ. ಆದಷ್ಟು ಬೇಗನೇ ಪೂರ್ಣಗೊಳಿಸಿ ಪರಿಪೂರ್ಣವಾಗಿ ದಿನದ 24ತಾಸು ನೀರು ಸರಬರಾಜು ಆಗಲಿದೆ. ನೀರಿಗಾಗಿ ಕಾಯಬೇಕಾಗಿಲ್ಲ. ನಿತ್ಯ ಹಗಲು ರಾತ್ರಿ ಎನ್ನದೆ ನೀರು ನಳದಲ್ಲಿ ದಾಸ್ತಾನು ಇರುತ್ತದೆ. ಮನೆಯಲ್ಲಿ ಸಂಗ್ರಹಿಸುವ ಅಗತ್ಯವಿಲ್ಲ. ಇದರಿಂದ ಸಮಯದ ಉಳಿತಾಯವಾಗುವುದು ಎಂದರು.  

  ನಳಕ್ಕೆ ಮೀಟರ್ ಅಳವಡಿಸಲಾಗಿದೆ. ಬಳಸಿದ ನೀರಿಗೆ ಮಾತ್ರ ಶುಲ್ಕ ಆಕರಣೆಯಾಗುತ್ತದೆ. ಶುದ್ದ ಕುಡಿಯುವ ನೀರು ಇದಾಗಿದ್ದರಿಂದ ಯಾವುದೇ ರೋಗ ರುಜಿನಗಳು ಬರುವುದಿಲ್ಲ. ಆರೋಗ್ಯಯುತ ಬದುಕು ಸಾಗಿಸಬಹುದು. ಇದರಿಂದ ವಿದ್ಯುತ್ ವೆಚ್ಚವನ್ನೂ ಸಹ ಉಳಿಸಬಹುದು. ಎಂದು ಸಾಧ್ಯಾಂತವಾಗಿ ವಿವರಿಸಿ ಮಾತನಾಡಿದರು. ಸಹಾಯಕ ಅಭಿಯಂತರ ಶೇಖರ ಹಾದಿಮನಿ ಅವರು ಯಾವುದೇ ಸಮಸ್ಯೆಗಳೂ ಬಂದರೂ ಗ್ರಾಹಕರ ಸೇವಾಕೇಂದ್ರಕ್ಕೆ ದೂರು ಸಲ್ಲಿಸಬೇಕು. (8373297359-ಮೊ. 7795333313) ತಕ್ಷಣವೇ ಸಿಬ್ಬಂದಿ ಧಾವಿಸಿ ಸಮಸ್ಯೆಗೆ  ಪರಿಹಾರ ನೀಡುವರು ಎಂದರು.  

  ಮುಖ್ಯ ಅಥಿತಿಯಾಗಿದ್ದ ನೀಡ್ಸ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್ . ಎಫ್‌. ಅಕ್ಕಿ ಅವರು ಮಾತನಾಡಿ ಈ ಯೋಜನೆಯ ಪರಿಪೂರ್ಣ ಜಾರಿಗಾಗಿ ಹರಿಹರ, ಬ್ಯಾಡಗಿ ಮತ್ತು ರಾಣೇಬೆನ್ನೂರು ಆಯ್ಕೆಮಾಡಿಕೊಂಡಿದ್ದು ಕಾಮಗಾರಿ ಅನುಷ್ಠಾನದ ಪೂರ್ಣತೆಯಲ್ಲಿ ಸಾಗಿದ್ದೇವೆ. ಮಹಿಳೆಯರಿಗಾಗಿ ಸ್ವಸಹಾಯ ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯು 12 ಜಿಲ್ಲೆಯಲ್ಲಿ ಇಂತಹ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿದೆ. ಹಿಂದುಳಿದ ತಾಲೂಕು  ಮತ್ತು ಗ್ರಾಮೀಣ ಪ್ರದೇಶಗಳನ್ನು ಆಯ್ಕೆಮಾಡಿಕೊಂಡು ಜನರಲ್ಲಿ ಅರಿವು ಜಾಗೃತಿ ಮೂಡಿಸಲಾಗುತ್ತಿದೆ. ಶೀಘ್ರದಲ್ಲಿಯೇ ಮಹಿಳಾ ಬ್ಯಾಂಕ್ ಪ್ರಾರಂಭಿಸುವ ಮಹದಾಸೆ ಹೊಂದಿದೆ ಎಂದರು. 

 ಯೋಜನೆ ಕುರಿತು ಮಾಹಿತಿ ನೀಡಿದ ಜಲಸಿರಿ ಯೋಜನೆಯ ಸಮುದಾಯ ಅಭಿವೃದ್ದಿ ಸಹಾಯಕ  ಮಾರುತಿ ಪಾಟೀಲ್ ಅವರು  

ಸರ್ಕಾರದ ಪುರಸ್ಕಾರ ಯೋಜನೆಯಲ್ಲಿ ಬಡವರಿಗೆ 475 ಶೌಚಾಲಯಗಳು ನಿರ್ಮಿಸಲಾಗಿವೆ. ಭವಿಷ್ಯದ ಫಲಾನುಭವಿಗಳನ್ನು ಆಯ್ಕೆಮಾಡಲಾಗಿದ್ದು ಅತೀ ಶೀಘ್ರದಲ್ಲಿಯೇ ಅವರಿಗೂ ಸಹ ಹಣ ಬಿಡುಗಡೆಯಾಗಲಿದೆ. ನೀರು ಸರಬರಾಜು ಬಹುನೀರೀಕ್ಷಿತ ಯೋಜನೆ ಸಂಪೂರ್ಣ ಅನುಷ್ಠಾನಗೊಳ್ಳಲಿದೆ. ಮಹಿಳೆಯರು ಅದರ ಬಗ್ಗೆ ಸಮಗ್ರವಾಗಿ ತಿಳಿದುಕೊಂಡರೆ ಯಾವುದೇ ಶುಲ್ಕ ವೆಚ್ಚ ಭಾರವಾಗುವುದಿಲ್ಲ. ಇತಿಮಿತಿಯಲ್ಲಿ ನೀರು ಬಳಸಿ ಅದಕ್ಕೆ ತಕ್ಕಂತೆ ವೆಚ್ಚವನ್ನುಭರಿಸಬೇಕಾಗುತ್ತದೆ. ತಪ್ಪು ಕಲ್ಪನೆ ಯಾರೂ ಮಾಡಿಕೊಳ್ಳಬಾರದು. ಎಲ್ಲವೂ ಸರಳವಾಗಿದೆ ಎಂದು ವಿವರಿಸಿದರು.  

ಕಾರ್ಯಕ್ರಮದಲ್ಲಿ  ನೀಡ್ಸ್‌ ಸಂಸ್ಥೆಯ ಎಮ್‌. ಕರಬಸಪ್ಪ, ಹೆಚ್‌. ಉಮೇಶ್, ನಗರಸಭಾ ಮಾಜಿ ಸದಸ್ಯೆ ಪ್ರೇಮಾ ಅಟವಾಳಗಿ,  ಸಂತೋಷ್ ವರವಜ್ಜಿ, ಮನೋಹರ  ಪತ್ರಕರ್ತ ಕೆ. ಎಸ್‌. ನಾಗರಾಜ್ ಸೇರಿದಂತೆ ಮತ್ತಿತರ ಗಣ್ಯರು ಅಂಬೇಡ್ಕರ ನಗರದ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ