ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ

ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ  Installation of CCTV cameras in student hostels for backward classes

ಸಂಬರಗಿ 16: ಬೆಳಗಾವಿ ಜಿಲ್ಲೆಯ ಹಿಂದುಳಿದ ವರ್ಗಗಳ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಪ್ರತಿ ವಸತಿ ನಿಲಯಕ್ಕೂ ಕಾವಲುಗಾರರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬೆಳಗಾವಿ ಜಿಲ್ಲಾ ಅಧಿಕಾರಿ ಬಸವರಾಜ ಹುಲಿಕುರಿ ಹೇಳಿದರು.  

ಮದಭಾವಿ ಗ್ರಾಮದ ಮೂರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಪರೀಶೀಲನೆ ನಡೆಸಿದ ಬಳಿಕ ಅಥಣಿ ಹಾಗೂ ರಾಯಬಾಗ ತಾಲೂಕಿನ ವಸತಿ ನಿಲಯಗಳ ಅಧಿಕಾರಿಗಳು ಮತ್ತು ವಾರ್ಡನ್ಗಳೊಂದಿಗೆ ಪ್ರಗತಿ ಪರೀಶೀಲನಾ ಸಭೆ ನಡೆಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.  

ಸರ್ಕಾರದ ಆದೇಶದಂತೆ ಎಲ್ಲ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರತಿ ವಾರ್ಡನ್ ತಮಗೆ ನಿಯೋಜಿಸಲಾದ ವಸತಿ ನಿಲಯದಲ್ಲೇ ಕಡ್ಡಾಯವಾಗಿ ವಾಸ್ತವ್ಯ ಇರಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.  

ಜಿಲ್ಲೆಯ ಯಾವುದೇ ವಸತಿ ನಿಲಯಕ್ಕೆ ಅನೀರೀಕ್ಷಿತವಾಗಿ ಭೇಟಿ ನೀಡಿದಾಗ ಅಧಿಕಾರಿಗಳು ಅಥವಾ ವಾರ್ಡನ್ಗಳು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.  

ಜಿಲ್ಲೆಯಲ್ಲಿರುವ ವಾರ್ಡನ್ ಹುದ್ದೆಗಳ ಕೊರತೆ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದ್ದು, ಶೀಘ್ರವೇ ಅಗತ್ಯ ನೇಮಕಾತಿ ನಡೆಯುವ ನೀರೀಕ್ಷೆಯಿದೆ ಎಂದು ಹೇಳಿದರು.  ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ವೆಂಕಟೇಶ್ ಕುಲಕರ್ಣಿ, ರಾಯಬಾಗ ತಾಲೂಕು ಅಧಿಕಾರಿ ಕಲ್ಪನಾ ಕಾಂಬಳೆ, ಅಶೋಕ ಸತ್ತಿಗೌಡರ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.