ಕೆನರಾ(ಸಿಂಡಿಕೇಟ್)ಬ್ಯಾಂಕ್ ಎದುರು ವಾಹನಗಳ ನಿಲುಗಡೆ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ
ಮುಂಡಗೋಡ:ಪಟ್ಟಣದ ಬಂಕಾಪುರ ರಸ್ತೆಯಲ್ಲಿರುವ ಕೆನರಾ(ಸಿಂಡಿಕೇಟ್)ಬ್ಯಾಂಕ್ ಎದುರು ಬೈಕ್ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವದರಿಂದ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಅಲ್ಲದೆ ಬ್ಯಾಂಕ್ಗೆ ಹೋಗುವ, ಬರುವ ಗ್ರಾಹಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು ಈ ಜಾಗದಲ್ಲಿ ಸೂಕ್ತವಾದ ವಾಹನಗಳ ನಿಲುಗಡೆ ವ್ಯವಸ್ಥೆ ಆಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೆನರಾ(ಸಿಂಡಿಕೇಟ್)ಬ್ಯಾಂಕ್ಗೆ ಪ್ರತಿನಿತ್ಯ ಪಟ್ಟಣ ಮತ್ತು ಗ್ರಾಮೀಣ ಭಾಗದಿಂದ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಬಂದು ಹೋಗುತ್ತಾರೆ. ಬ್ಯಾಂಕ್ ಮೆಟ್ಟಿಲು ಏರುವ ಜಾಗದ ಎದುರಿನಲ್ಲಿಯೇ ಬೈಕ್ಗಳನ್ನು ಮನಬಂದಂತೆ ನಿಲ್ಲಿಸಿ ಇಟ್ಟಿರುತ್ತಾರೆ. ಕೆಲವೊಮ್ಮೆ ಅಲ್ಲಿಯೂ ಜಾಗ ಸಿಗದೇ ಇದ್ದಾಗ ರಸ್ತೆಗೆ ಅಡ್ಡಲಾಗಿಯೇ ಬೈಕ್ ಇಡುತ್ತಾರೆ. ಇದರಿಂದ ಗ್ರಾಹಕರಿಗೆ ಬ್ಯಾಂಕ್ ಮೆಟ್ಟಿಲು ಏರಿ ಮೇಲೆ ಹೋಗಲು ಸ್ಥಳಾವಕಾಶ ಸಿಗದೇ ಸ್ವಲ್ಪವೇ ಜಾಗದಲ್ಲಿ ನುಸುಳಿಕೊಂಡು ಹೋಗಬೇಕಾಗುತ್ತದೆ. ರಸ್ತೆಗೆ ಅಡ್ಡವಾಗಿ ಬೈಕ್ ಇಡುವುದರಿಂದ ವಾಹನ ಸವಾರರಿಗೆ ವಾಹನ ಚಲಾಯಿಸಲು ತೊಂದರೆ ಉಂಟಾಗುತ್ತದೆ. ಅಲ್ಲದೆ ಕೆಲವು ಅಪಘಾತಗಳೂ ಸಂಭವಿಸಿವೆ.
ಸಂಬಂಧಪಟ್ಟ ಪೊಲೀಸ್ ಇಲಾಖೆಯವರು ಬ್ಯಾಂಕ್ ಗ್ರಾಹಕರ ಸಮಸ್ಯೆ ನೀಗಿಸಲು ಆದಷ್ಟು ಬೇಗ ಕೆನರಾ(ಸಿಂಡಿಕೇಟ್)ಬ್ಯಾಂಕ್ ಎದುರು ವಾಹನಗಳ ನಿಲುಗಡೆ ವ್ಯವಸ್ಥೆ ಕಲ್ಪಿಸಿ ಕೊಟ್ಟು ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು ವೆಂಕಟೇಶ ಚವ್ಹಾಣ, ಮಾಬೂಲಿ ಮಿಠಾಯಿಗಾರ, ರವಿ ಓಣಿಕೇರಿ ಮುಂತಾದವರು ಆಗ್ರಹಿಸಿದ್ದಾರೆ.
ಹೇಳಿಕೆ: ಕೆನರಾ(ಸಿಂಡಿಕೇಟ್)ಬ್ಯಾಂಕ್ ಎದುರು ವಾಹನಗಳ ಅವ್ಯಸ್ಥಿತ ನಿಲುಗಡೆ ಬಗ್ಗೆ ಗಮನಕ್ಕೆ ಬಂದಿದ್ದು ಇನ್ನು ಮುಂದೆ ತೊಂದರೆ ಆಗದಂತೆ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಿ ಕೊಡಲಾಗುವುದು ಎಂದು ಸಿಪಿಐ ಸಿದ್ದಪ್ಪ ಸಿಮಾನಿ ತಿಳಿಸಿದರು.