ಸರ್ಕಾರದ ನಡೆ ಹಳ್ಳಿಯ ಕಡೆಗೆ ವಿನೂತನ ಕಾರ್ಯಕ್ರಮ
ಲೋಕದರ್ಶನ ವರದಿ
ರಾಣಿಬೆನ್ನೂರ 21: ವೃದ್ಧರ, ವಿಧವೆಯರ, ಅಂಗವಿಕಲರ, ಬಡ ರೈತರ, ದೀನ ದಲಿತರ ಸಮಸ್ಯೆಗಳನ್ನು ಹೊತ್ತು ಸರ್ಕಾರದ ವಿವಧ ಕಚೇರಿಗಳಿಗೆ ಅಲೆಯಬಾರದು ಎಂಬ ಸದುದ್ದೇಶದಿಂದ ಅವರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆ ಹರಿಸುವ ಸರ್ಕಾರದ ನಡೆ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ಇತ್ಯರ್ಥ ಪಡಿಸಲಾಗುವುದು. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ತಾಲೂಕಿನ ಗುಡಗೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜಿಲ್ಲಾ ಆಡಳಿತ, ತಾಲೂಕಾಡಳಿತ ಹಾಗೂ 32 ಇಲಾಖೆಗಳ ಎಲ್ಲ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆ ಹರಿಸುವ ಸರ್ಕಾರದ ನಡೆ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧಾರಕಾರ್ಡ ತಿದ್ದುಪಡಿ, ಪಡಿತರಚೀಟ ತಿದ್ದುಪಡಿ ಸರಿಪಡಿಸಿ, ವೃದ್ಧರ, ವಿಧವೆಯರ, ಅಂಗವಿಕಲರ ಮಾಶಾಸನಗಳನ್ನು ಸ್ಥಳದಲ್ಲಿಯೇ ಮಂಜೂರಾತಿ ನೀಡಲಾಗುವುದು. ಮಾಜಿ ಸಿಎಂ ಯಡಿಯೂರ್ಪನವರು ಪ್ರತಿ ತಿಂಗಳು ಮೂರನೇಯ ಶನಿವಾರ ಪ್ರತಿ ತಾಲೂಕಿನ ಒಂದು ಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳು ವಾಸ್ತವ್ಯ ಮಾಡುವ ಮೂಲಕ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದರು. ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ. ಅವರ ಆಶಾಭಾವನೆಯ ಮೂಲಕ ಇಂದು ಗುಡಗೂರ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಬಗೆ ಹರಿಸಲಾಗುವುದು ಎಂದರು.
ತಹಶೀಲ್ದಾರ ಶಂಕರ ಜಿ.ಎಸ್ ಅವರು ಸರ್ಕಾರದ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ನಗರಯೋಜನ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಗ್ರಾಪಂ ಅಧ್ಯಕ್ಷ ಅಶೋಕ ಸಾವುಕಾರ, ಉಪಾಧ್ಯಕ್ಷೆ ಶಿಲ್ಪಾ ಲಮಾಣಿ, ಸದಸ್ಯ ಧರ್ಮರಾಜ ಕುಪ್ಪೇಲೂರ, ಸಹಾಯಕ ಕೃಷಿ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ, ತಾಪಂ ಇಓ ಟಿ.ಆರ್. ಮಲ್ಲಾಡದ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ, ಪಶುಪಾಲನ ಇಲಾಖೆಯ ಡಾಽ ಪರಮೇಶ ಹುಬ್ಬಳ್ಳಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಲಿಂಗರಾಜ ಸುತ್ತಕೋಟಿ, ಪಿಡಿಓ ವಿದ್ಯಾ ಹಳಗೌಡ್ರ, ಬಿ.ಎಸ್.ಪಾಟೀಲ, ರಾಮಣ್ಣ ಬಜಾರಿ, ಮೇಡ್ಲೇರಿ ಹೊಬಳಿಯ ವ್ಯಾಪ್ತಿಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಪಿಡಿಓಗಳು 18 ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ನಂತರ ಸಾರ್ವಜನಿಕರಿಂದ ಬಂದ ಅವ್ಹಾಲಗಳನ್ನು ಸಂಬಂದಿಸಿದ ಅಧಿಕಾರಿಗಳು ಸ್ವೀಕರಿಸಿದರು. ತದನಂತರ ತಹಶೀಲ್ದಾರ ಶಂಕರ ಜಿ.ಎಸ್ ಅವರು ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸಿ ಪರಿಹಾರ ನೀಡಲು ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒಟ್ಟು ಬಂದ ಅರ್ಜಿಗಳು 150 ಅದರಲ್ಲಿ 124 ಅರ್ಜಿಗಳಿಗೆ ಸ್ಥಳದಲ್ಲಿ ಇತ್ಯರ್ಥ ಪಡಿಸಲಾಯಿತು. ಪ್ರಾದೇಶಿಕ ಅರಣ್ಯ ಇಲಾಖೆ 1, ಶಿಕ್ಷಣ ಇಲಾಖೆ 2, ಕೃಷಿ ಇಲಾಖೆ 7, ಸಣ್ಣ ನಿರಾವರಿ ಇಲಾಖೆ 4, ದೇವರಾಜ ಅರಸು ನಿಗಮ 2, ತಾಂಡಾ ಅಭಿವೃದ್ಧಿ ನಿಗಮ 4, ಸರ್ವೆ ಇಲಾಖೆ 3, ಜಿಪಂ ಇಂಜಿನಿಯರಿಂಗ್ ಉಪವಿಭಾಗ 31, ಕಂದಾಯ ಇಲಾಖೆಯ 70, ವೃಧ್ಯಾಪ್ಯ, ಸಂಧ್ಯಸುರಕ್ಷಾ, ವಿಧವೆಯರ, ಅಂಗವಿಕಲರ ಮಾಶಾಸನದ ಮಂಜುರಾತಿ ಪತ್ರವನ್ನು ಫಲಾನುಭವಿಗಳಿಗೆ ಸ್ಥಳದಲ್ಲಿಯೇ ವಿತರಿಸಲಾಯಿತು.