ಚಿಕ್ಕಮಗಳೂರಿನ ನ್ಯಾಯವಾದಿ ಮೇಲೆ ಅಮಾನವೀಯ ಹಲ್ಲೆ
ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ
ಅಥಣಿ 02: ನ್ಯಾಯವಾದಿಗಳ ಹಿತರಕ್ಷಣಾ ಕಾನೂನನ್ನು ಪ್ರಸಕ್ತ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಜಾರಿಗೆ ತರಬೇಕು ಎಂದು ಅಥಣಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಎಸ್.ಹುಚಗೌಡರ ಆಗ್ರಹಿಸಿದರು.
ಅವರು ಚಿಕ್ಕಮಗಳೂರಿನ ನ್ಯಾಯವಾದಿಯೋರ್ವನ ಮೇಲೆ ಅಮಾನವೀಯ ರೀತಿ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಅಥಣಿ ನ್ಯಾಯವಾದಿಗಳ ಸಂಘದಿಂದ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿ ಆಗ್ರಹಿಸಿ ಮಾತನಾಡುತ್ತಿದ್ದರು.
ಚಿಕ್ಕಮಗಳೂರಿನ ನ್ಯಾಯವಾದಿ ಪ್ರೀತಮ ಎನ್ನುವವರ ಮೇಲೆ ಪೊಲೀಸ್ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹಲವು ದಿನಗಳೇ ಕಳೆದವು ಆದರೆ ಇಲ್ಲಿಯವರೆಗೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಇಂದಿನ ವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದ ಅವರು ನ್ಯಾಯವಾದಿಗಳ ಮೇಲೆ ಇತ್ತೀಚಿಗೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಸಕ್ತ ಅಧಿವೇಶನದಲ್ಲಿ ನ್ಯಾಯವಾದಿಗಳ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿಗಳ ಸಂಘದ ಹಿರಿಯ ಸದಸ್ಯ ಸುನೀಲ ಸಂಕ ಮಾತನಾಡಿ, ನ್ಯಾಯವಾದಿಗಳ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸದೇ ಇದ್ದುದರಿಂದಲೇ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಸಕ್ತ ಅಧಿವೇಶನದಲ್ಲಿ ನ್ಯಾಯವಾದಿಗಳ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಮ್.ಸಿ.ದುಂಡಿ ಮಾತನಾಡಿ, ಚಿಕ್ಕಮಗಳೂರಿನ ನ್ಯಾಯವಾದಿಯೋರ್ವನ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದ ಅವರು ನ್ಯಾಯವಾದಿಗಳ ಮೇಲೆ ಹಲ್ಲೆ ಆಗದಂತೆ ನೋಡಿಕೊಳ್ಳಬೇಕು ಮತ್ತು ಒಂದು ವೇಳೆ ಹಲ್ಲೆಯಂತಹ ಘಟನೆ ಸಂಭವಿಸಿದಲ್ಲಿ ಕಠಿಣ ಕ್ರಮ ಜರುಗಿಸಲು ಹಿತರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.ನ್ಯಾಯವಾದಿ ಸಂಘದ ಪಿ.ಎಸ್.ಧೋಕೆ, ಎಲ್.ಎಸ್.ಮಾಂಗ, ಎಸ್.ಎಸ್.ಪಾಟೀಲ, ಬಿ.ಬಿ.ಬಿಸಲಾಪುರ, ಮೋಹನ ದೊಡ್ಡಮನಿ, ಐ.ಎಸ್.ಪಾಟೀಲ, ಎನ್.ಬಿ.ಖೋಕಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.