ವೈದ್ಯಕೀಯ ಸಿಬ್ಬಂದಿ ಕೈಯಿಂದ ಜಾರಿ ಬಿದ್ದು ನವಜಾತ ಶಿಶು ಸಾವು
ಹೈದ್ರಾಬಾದ್, ನವೆಂಬರ್ 2: ಪ್ರಸವ ಸಮಯದಲ್ಲಿ ವೈದ್ಯಕೀಯ ಸಿಬ್ಬಂದಿ ಕೈಯಿಂದ
ಆಗ ತಾನೆ ಜನಿಸಿದ್ದ ನವಜಾತ ಶಿಶು ಕೆಳಗೆ ಜಾರಿ ಬಿದ್ದು
ಸಾವನ್ನಪ್ಪಿರುವ ಘಟನೆ ಲಾಲ್ ಬಹದ್ದೂರ್ ನಗರ ವಲಯ ವನಸ್ಥಲಿಪುರಂ ಪ್ರಾದೇಶಿಕ ಆಸ್ಪತ್ರೆಯಲ್ಲಿ ಸೋಮವಾರ ಸಂಭವಿಸಿದೆ.
ಮೀರ್ ಪೇಟೆಗೆ ಸೇರಿದ 23 ವರ್ಷದ ಗರ್ಭಿಣಿ ಮಹಿಳೆಯನ್ನು ಶುಕ್ರವಾರ ರಾತ್ರಿ ಹೆರಿಗೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಸೋಮವಾರ ಬೆಳಗಿನ ಜಾವ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ಸಮಯದಲ್ಲಿ ನವಜಾತ ಶಿಶು ವೈದ್ಯಕೀಯ ಸಿಬ್ಬಂದಿ ಕೈಯಿಂದ ಆಕಸ್ಮಿಕವಾಗಿ ಕೆಳಗೆ ಜಾರಿ ಬಿದ್ದು ತಲೆಗೆ ಗಾಯಗೊಂಡಿತ್ತು, ಮಗುವನ್ನು ತಕ್ಷಣವೇ ಚಿಕಿತ್ಸೆಗಾಗಿ ನಿಲೋಫಾರ್ ಆಸ್ಪತ್ರೆಗೆ ಸಾಗಿಸಲಾಯಿತು. ಶಿಶುವನ್ನು ಪರೀಕ್ಷಿಸಿದ ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ತಮ್ಮ ಮಗು ಮೃತಪಟ್ಟಿದೆ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿದರು.