ಐಎಂಡಿಬಿ ರೇಟಿಂಗ್ ನಲ್ಲಿ ಗಾಡ್ ಫಾದರ್ ಚಿತ್ರವನ್ನು ಹಿಂದಿಕ್ಕಿದ ಭಾರತೀಯ ಸಿನಿಮಾ
ಚೆನ್ನೈ, ನ 18 ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಿರುವ "ಜೈ ಭೀಮ್" ಸಿನಿಮಾ ಐ ಎಂ ಡಿ ಬಿ ರೇಟಿಂಗ್ ನಲ್ಲಿ 'ಶಶಾಂಕ್ ರಿಡೆಂಪ್ಶನ್' ಹಾಗೂ 'ದಿ ಗಾಡ್‌ಫಾದರ್' ನಂತಹ ಕ್ಲಾಸಿಕ್ ಚಿತ್ರಗಳನ್ನು ಹಿಂದಿಕ್ಕಿದೆ.
'ಜೈ ಭೀಮ್' ಹಿಂದೂ ಜಾತಿ ವ್ಯವಸ್ಥೆಯ ತಳಮಟ್ಟದಲ್ಲಿರುವ ದಲಿತರ ಮೇಲೆ ನಡೆಯುವ ದೌರ್ಜನ್ಯಗಳನ್ನು ಬಲವಾಗಿ ಬಿಂಬಿಸುವ ಚಿತ್ರ ಎಂದು ಹೇಳಿತ್ತಾರೆ ಚಲನಚಿತ್ರ ಪತ್ರಕರ್ತ ಅಸೀಮ್ ಚಾಬ್ರಾ
ಚಿತ್ರದ ಆರಂಭದಲ್ಲಿಯೇ ಜೈಲಿನ ಹೊರಗೆ ಪೊಲೀಸ್ ಅಧಿಕಾರಿಗಳು ಜಾತಿಯ ಆಧಾರದ ಮೇಲೆ ಕೈದಿಗಳನ್ನು ಪ್ರತ್ಯೇಕಿಸುವುದನ್ನು ತೋರಿಸಲಾಗಿದೆ.
ಮೇಲ್ವರ್ಗಕ್ಕೆ ಸೇರಿದ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ, ಆದರೆ, ದಲಿತರು ಅಥವಾ ಆದಿವಾಸಿಗಳನ್ನು ಬದಿಗೆ ನಿಲ್ಲಿಸಿ ಅವರ ಮೇಲೆ ಸುಳ್ಳು ಪ್ರಕರಣಗಳನ್ನು ಹಾಕಲಾಗುತ್ತದೆ.
ಇದು ತುಂಬಾ ಕಳವಳಕಾರಿ ದೃಶ್ಯವಾಗಿದೆ. ಪ್ರತ್ಯೇಕವಾಗಿ ನಿಂತವರಿಗೆ ತಮ್ಮ ಮುಂದಿನ ಭವಿಷ್ಯ ಏನಾಗಲಿದೆ ಎಂಬುದು ಸ್ವಲ್ಪ ಮಟ್ಟಿಗೆ ಗೊತ್ತು. ಭಯದಿಂದ, ದೈನ್ಯತೆಯಿಂದ ನಿಂತಿರುವವರನ್ನು ನೋಡಿದರೆ ಇಂತಹ ಘಟನೆಗಳು ಆಗಾಗ ನಡೆಯುತ್ತಿರುವುದು ಸ್ಪಷ್ಟವಾಗುತ್ತದೆ.
ದೇಶದ ಜನಸಂಖ್ಯೆಯ ಶೇ.20ರಷ್ಟು ದಲಿತರಿದ್ದಾರೆ. ಕಠಿಣ ಕಾನೂನುಗಳ ಹೊರತಾಗಿಯೂ, ಅವರು ತಾರತಮ್ಯ ಹಾಗೂ ಹಿಂಸೆಯನ್ನು ಎದುರಿಸುತ್ತಲೇ ಇದ್ದಾರೆ.
ತಮಿಳು ನಟ ಸೂರ್ಯ ನಿರ್ಮಾಣದ, ಟಿ.ಜೆ.ಜ್ಞಾನವೇಲ್ ನಿರ್ದೇಶನದ ಈ ಚಿತ್ರವು ನೈಜ ಘಟನೆಗಳ ಸಂಗ್ರಹವಾಗಿದೆ.
ಪೊಲೀಸರು ಅನ್ಯಾಯವಾಗಿ ತನ್ನ ಪತಿಯ ಮೇಲೆ ಕೇಸು ದಾಖಲಿಸಿ ಬಂಧಿಸಿ ನಂತರ ಜೈಲಿನಿಂದ ಪರಾರಿಯಾಗಿದ್ದಾನೆ ಎಂದು ಹೇಳುತ್ತಿದ್ದಾರೆ ಎಂದು ಆದಿವಾಸಿ ಗರ್ಭಿಣಿ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ ನಂತರ ವಕೀಲ ಚಂದ್ರು (ಸೂರ್ಯ) ಆಕೆಯ ಪರವಾಗಿ ನ್ಯಾಯಕ್ಕಾಗಿ ಹೋರಾಡುತ್ತಾರೆ. ಇದು ಜೈ ಭೀಮ್ ಕಥೆ.