ಭಾರತ ಚುನಾವಣಾ ವ್ಯವಸ್ಥೆ ಇಡೀ ಜಗತ್ತಿಗೆ ಮಾದರಿ: ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್
ಹೊಸಪೇಟೆ (ವಿಜಯನಗರ) 01: ಭಾರತ ದೇಶದಲ್ಲಿರುವ ಚುನಾವಣಾ ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿದ್ದು,ಇಡೀ ಜಗತ್ತಿಗೆ ಮಾದರಿಯಾಗಿದೆ. ನಮ್ಮ ಚುನಾವಣಾ ನಿಯಮಗಳು ಮತ್ತು ಚುನಾವಣಾ ವ್ಯವಸ್ಥೆ ಬಗ್ಗೆ ಹೆಮ್ಮೆ ಪಡಬೇಕು ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಹೇಳಿದರು.
ವಿಜಯನಗರ ಜಿಲ್ಲಾಡಳಿತ ವತಿಯಿಂದ ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಚುನಾವಣಾ ಸುಧಾರಣೆಗಳು ಮತ್ತು ಆಧಾರ್ಸಂಖ್ಯೆ ಜೋಡಣೆ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ವರ್ಷದ ಹಿಂದೆ ಅಮೆರಿಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಗೊಂದಲವಾಗಿತ್ತು;ಅದೆಲ್ಲವನ್ನು ನೋಡಿದರೇ ನಮ್ಮಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದರು.
ಮತದಾರರ ಗುರುತಿನ ಚೀಟಿ ಜೊತೆಗೆ ಆಧಾರ್ ಕಾರ್ಡ್ನೊಂದಿಗೆ ಜೋಡಣೆ ಹಾಗೂ ಆಧಾರ್ಕಾರ್ಡ್ ಇಲ್ಲದಿದ್ದಲ್ಲಿ ಪರಿರ್ಯಾಯವಾಗಿ 11 ಗುರಿತಿನ ಚೀಟಿಗಳೊಂದಿಗೆ ಜೋಡಣೆಯನ್ನು ಮಾಡಿಸಬಹುದಾಗಿದ್ದು, ಅದಕ್ಕೆ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಅದಕ್ಕೆ ಫಾರಂ-06ಬಿ ಯನ್ನು ಬಳಸಿ ಜೋಡಣೆ ಮಾಡಿಕೊಳ್ಳಬಹುದು ಎಂದರು.
ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಒಬ್ಬರು ಎರಡೆರಡು ಕಡೆ ವೋಟರ್ ಐಡಿ ಮಾಡಿಸಿಕೊಂಡು ಮತದಾನ ಮಾಡುವುದು ತಪ್ಪಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ ಅವರು ಬಳ್ಳಾರಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಆಂಧ್ರ್ರದೇಶದೊಂದಿಗೆ ಗಡಿ ಹಂಚಿಕೊಂಡಿರುವ ಬಳ್ಳಾರಿಯಲ್ಲಿ ಒಬ್ಬೊಬ್ಬರು ಎರಡೆರಡು ವೋಟರ್ಐಡಿಗಳನ್ನು ಹೊಂದಿರುವುದು ನೋಡಿದ್ದೇನೆ ಎಂದರು.ಎರಡೆರಡು ರಾಜ್ಯಗಳಲ್ಲಿ ಮತ ಚಲಾಯಿಸುವುದು ತಪ್ಪಲಿದೆ ಎಂದರು.
ಕಳೆದ ನಾಲ್ಕೈದು ವರ್ಷಗಳಿಂದ ಚುನಾವಣೆಯ ನೋಂದಣಿ ಪದ್ದತಿಯಲ್ಲಿ ಬಹಳಷ್ಟು ಬದಲಾವಣೆಗಳು ಮಾಡಲಾಗಿದ್ದು, ಈಗ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಇದರ ಉಪಯೋಗವನ್ನು 18 ವರ್ಷ ಮೇಲ್ಪಟ್ಟ ಎಲ್ಲರೂ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಮತದಾರರು ಸ್ವಯಂ ದೃಢೀಕರಣವನ್ನು ಎನ್ವಿಎಸ್ಪಿ,ವಿಎಚ್ಎ ಮತ್ತು ಇಆರ್ಒಎನ್ಇಟಿ ಹಾಗೂ ಜಿಎಆರ್ಯುಡಿಎ ಪೋರ್ಟಲ್/ಆ್ಯಪ್ಗಳನ್ನು ಮುಖಾಂತರ ಫಾರ್ಮ್-6ಬಿ ಭರ್ತಿಮಾಡಿಬೇಕು ನಂತರ ಯುಐಡಿಎಐನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದ್ದು, ಅದನ್ನು ಬಳಸಿಕೊಂಡು ಆಧಾರ್ ಅನ್ನು ದೃಢೀಕರಿಸಬಹುದು. ಮತದಾರರು ಸ್ವಯಂ ದೃಢೀಕರಣ ಬಯಸದಿದ್ದಲ್ಲಿ ಅಥವಾ ಸ್ವಯಂ ದೃಢೀಕರಣ ವಿಫಲವಾದಲ್ಲಿ, ಮತದಾರರು ದೃಢೀಕರಣ ವಿಲ್ಲದೆ ಆನ್ಲೈನ್ನಲ್ಲಿ ಅಗತ್ಯ ಲಗತ್ತುಗಳೊಂದಿಗೆ ಫಾರಂ-6ಬಿಅನ್ನು ಸಲ್ಲಿಸಬಹುದು ಎಂದು ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಎನ್.ಮಹೇಶ್ಬಾಬು ಅವರು ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಚುನಾವಣೆ ಅನ್ನೋದು ಒಂದು ಕಾರ್ಯಾಚರಣೆಯ ಭಾಗ, ಇದರಲ್ಲಿ ಮತದಾರರೇ ಪ್ರಮುಖ ಅಸ್ತ್ರ ಎಂದು ಹೇಳಿದರು.
ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಚುನಾವಣೆಗಳು ಒಂದು ಚೌಕಟ್ಟಿನಲ್ಲಿ ಗೊಂದಲಗಳು ಹಾಗೂ ಸಮಸ್ಯೆಗಳಿಲ್ಲದೆ ನಡೆಯಲು ಸಂವಿಧಾನದಲ್ಲಿ ಇರುವ ಚುನಾವಣಾ ನಿಯಮಗಳು ಮತ್ತು ಕಾಯಿದೆಗಳೆ ಪ್ರಮುಖ ಕಾರಣ ಎಂದು ಅವರು ಹೇಳಿದರು.
2022ರ ಪಾರ್ಲಿಮೆಂಟ್ನಲ್ಲಿ ಆಧಾರ್ ಜೋಡಣೆ ಪ್ರಮುಖವಾದ ತಿದ್ದುಪಡಿಯಾಗಿದ್ದು, ಮೊದಲು 18ವರ್ಷ ಆದವರಿಗೆ ಚುನಾವಣಾ ಗುರುತಿನ ಚೀಟಿ ಮಾಡಿಸಲು ಪ್ರತಿ ಜನವರಿ ತಿಂಗಳಲ್ಲಿ ಮಾತ್ರ ಅವಕಾಶ ಇತ್ತು, ಆದರೆ ಈಗ 2022ರ ತಿದ್ದುಪಡಿಯಾದ ನಂತರ ಪ್ರತಿ ವರ್ಷ ಜನವರಿ1, ಏಪ್ರಿಲ್1, ಜುಲೈ1 ಹಾಗೂ ಅಕ್ಟೋಬರ್1ರಂದು ನೋಂದಣಿ ಮಾಡಿಸಿಕೊಳ್ಳಲು ದಿನಾಂಕಗಳಂದು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಎಪಿಲ್ ಹಾಗೂ ಬಿಪಿಎಲ್ ರೇಷನ್ಕಾರ್ಡ್ ಹೊಂದಿರುವ ಶೇ.85ರಷ್ಟು ಜನರ ವೋಟರ್ಕಾರ್ಡ್ ಆಧಾರ್ ಜೋತೆ ಜೋಡಣೆಯಾಗಿದ್ದು, ಆಧಾರ್ ಕಾರ್ಡ್ ಇಲ್ಲದವರು ನಮೂನೆ-6ಬಿ ನೊಂದಿಗೆ ಪರ್ಯಾಯವಾಗಿ ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್ಬುಕ್ಗಳು, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಿಗೆ, ಪ್ಯಾನ್ ಕಾರ್ಡ್, ಎನ್ಪಿಆರ್ ಅಡಿಯಲ್ಲಿ ಆರ್ಜಿಐ ನೀಡಿದ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್ಪೋರ್ಟ್, ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ, ಕೇಂದ್ರ/ರಾಜ್ಯ ಸರ್ಕಾರ/ಪಿಎಸ್ಯು/ಸಾರ್ವಜನಿಕರಿಂದ ಉದ್ಯೋಗಿಗಳಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ ಸೀಮಿತ ಕಂಪನಿಗಳು, ಸಂಸದರು/ಶಾಸಕರು/ಎಂಎಲ್ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ, ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ನೀಡಲಾದ ವಿಶಿಷ್ಟ ಗುರುತಿನ ಕಾರ್ಡ್ಗಳಲ್ಲಿ ಯವುದಾದರೂ ಒಂದು ದಾಖಲಾತಿಯನ್ನು ಬಳಸಿ ಜೋಡಣೆ ಮಾಡಬಹುದು ಎಂದು ಅವರು ತಿಳಿಸಿದರು.
ಬಹುತೇಕರು ಆಂಡ್ರಾಯ್ಡ್ ಮೊಬೈಲ್ ಪೋನ್ಗಳನ್ನು ಹೊಂದಿದ್ದು ಅವರು ಮನೆಯಲ್ಲಿಯೇ ಕುಳಿತು ಸ್ವಯಂಪ್ರೇರಿತರಾಗಿ ತಮ್ಮ ಕುಟುಂಬ ಸದಸ್ಯರ ಆಧಾರ್ ನೋಂದಣಿಯನ್ನು ಮಾಡಿಕೊಳ್ಳಬಹುದು ಎಂದರು.
ಪಿಯು ಕಾಲೇಜುಗಳಲ್ಲಿ ಮತದಾರರ ಸಾಕ್ಷರತಾ ಕ್ಲಬ್ಗಳನ್ನು ಕಡ್ಡಾಯವಾಗಿ ಮಾಡುವಂತೆ ಸ್ಥಳದಲ್ಲಿದ್ದ ಪ್ರಾಂಶುಪಾಲರಿಗೆ ಅಪರ ಜಿಲ್ಲಾಧಿಕಾರಿ ಮಹೇಶಬಾಬು ಅವರು ಸೂಚನೆ ನೀಡಿದರು.
ಪ್ರಜಾಪ್ರಭುತ್ವದಲ್ಲಿ ಚುನಾವಣೆಯು ತುಂಬಾ ಮಹತ್ವದಾಗಿದ್ದು, 18ವರ್ಷ ಮೇಲ್ಪಟ್ಟ ಯುವಕರು ಕೇವಲ ಮತದಾನ ಮಾಡುವುದಕ್ಕೆ ಸೀಮಿತವಾಗದೇ ಸಂಪೂರ್ಣ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದೇಶದ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸಬೇಕು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹೆಚ್ಚು ಜನ ಧರ್ಮದ ಕಡೆ ನಡೆದಾಗ ಅಧರ್ಮ ತಾನಗಿಯೇ ನಾಶವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಕೆ.ಅರುಣ್, ಹೊಸಪೇಟೆ ತಹಶೀಲ್ದಾರ್ ವಿಶ್ವಜಿತ್ ಮೆಹತಾ, ಹಡಗಲಿ ತಹಶೀಲ್ದಾರ್ ಪ್ರತಿಭಾ ಸೇರಿದಂತೆ ವಿಜಯನಗರ ಕಾಲೇಜಿನ ಅಧ್ಯಕ್ಷ ಅಸುಂಡಿ ನಾಗರಾಜ, ಪ್ರಾಂಶುಪಾಲರಾದ ವಿ.ಎಸ್.ಪ್ರಭಯ್ಯ,ಕಾಲೇಜಿನ ಅಧ್ಯಾಪಕ ವರ್ಗ,ಸಿಬ್ಬಂದಿ ಹಾಗೂ ಇತರರು ಇದ್ದರು.