ಸ್ವಾತಂತ್ರ್ಯೋತ್ಸವ: ಹಳೆ ವಿದ್ಯಾರ್ಥಿಗಳಿಂದ ರಸಪ್ರಶ್ನೆ ಸ್ಪರ್ಧೆ
ದೇವರಹಿಪ್ಪರಗಿ: 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಾಲೂಕಿನ ಜಾಲವಾದ ಗ್ರಾಮದ ಕೆ.ಪಿ.ಎಸ್ ಪ್ರೌಢಶಾಲೆಯ 2020-21ನೇ ಸಾಲಿನ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ 50ಅಂಕಗಳ ಲಿಖಿತ ಮತ್ತು ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು.
ಶಾಲೆಯ ಪ್ರಸಕ್ತ ಸಾಲಿನ ಸುಮಾರು 84ವಿದ್ಯಾರ್ಥಿಗಳಲ್ಲಿ 10 ಜನರನ್ನು ಆಯ್ಕೆ ಮಾಡಲಾಯಿತು. ಶಾಲೆಯ ಉಪ ಪ್ರಾಂಶುಪಾಲ ಎ.ಎಂ.ಹೊಸಗೌಡರ ಮಾತನಾಡಿ, ಸ್ವಾತಂತ್ರೋತ್ಸವದ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ದೇಶಭಕ್ತಿ, ರಾಷ್ಟ್ರೀಯ ಚೇತನ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಭಾರತದ ಸ್ವಾತಂತ್ರ್ಯ ಚಳವಳಿ, ರಾಷ್ಟ್ರೀಯ ನಾಯಕರು, ರಾಷ್ಟ್ರಧ್ವಜ, ಸಂವಿಧಾನ ಮತ್ತು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕೇಳಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರಾಸ್ತಾವಿಕವಾಗಿ ಎಚ್.ಎಂ.ಬಗಲಿ ಶಿಕ್ಷಕರು ಮಾತನಾಡಿದರು. ನಿರೂಪಣೆ ಬಿ.ಎಸ್.ಅಗಬಾಳ ಹಾಗೂ ಆರ್.ಎಫ್.ನದಾಫ, ದೈ.ಶಿ ಎಸ್.ಎಸ್.ಮಲ್ಲೇದ ಸ್ವಾಗತಿಸಿದರು. ಎ.ಎಸ್.ಪತ್ತಾರ ವಂದಿಸಿದರು. ಶಾಲೆಯ 2020-21ನೇ ಸಾಲಿನ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.