ಹೊಸಪೇಟೆ

ಆಹಾರ ಸಾಮಾಗ್ರಿಗಳಿಂದ ಪೌಷ್ಟಿಕತೆ ಹೆಚ್ಚಿಸಿಕೊಳ್ಳಿ: ವಿಶ್ವನಾಥ

ಆಹಾರ ಸಾಮಾಗ್ರಿಗಳಿಂದ ಪೌಷ್ಟಿಕತೆ ಹೆಚ್ಚಿಸಿಕೊಳ್ಳಿ: ವಿಶ್ವನಾಥ

ಹೊಸಪೇಟೆ (ವಿಜಯನಗರ) 21: ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರದಿಂದ ವಿತರಣೆಯಾಗುವ ಆಹಾರ ಸಾಮಾಗ್ರಿಗಳಿಂದ ಪೌಷ್ಠಿಕತೆಯುಕ್ತ ಆಹಾರ ತಯಾರಿಸಿ ಸೇವಿಸುವುದರ ಮೂಲಕ ಪೌಷ್ಠಿಕತೆ ಪ್ರಮಾಣ ಹೆಚ್ಚಿಸಿಕೊಳ್ಳಿ ಎಂದು ಹೊಸಪೇಟೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಅವರು ತಿಳಿಸಿದರು.

ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆಯುಷ್ ಇಲಾಖೆಗಳ ಸಹಯೋಗದೊಂದಿಗೆ ರಾಷ್ಟ್ರೀಯ ಪೋಷಣ ಮಾಸಾಚರಣೆ ಅಂಗವಾಗಿ ನಗರದ ಹೊಸಪೇಟೆಯ ರೋಟರಿಹಾಲ್‍ನಲ್ಲಿ ನಡೆದ ಪೌಷ್ಠಿಕ ಆಹಾರ ಮೇಳ ಮತ್ತು ಅಂಗನವಾಡಿ ಕೇಂದ್ರದಲ್ಲಿ ವಿತರಿಸುವ ಆಹಾರ ಪದಾರ್ಥಗಳಿಂದ ವಿವಿಧ ಬಗೆಯ ಆಹಾರವನ್ನು ತಯಾರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಿಗುವಂತ ಸೌಲಭ್ಯಗಳನ್ನು ಗರ್ಭಿಣಿ ಮತ್ತು ಬಾಣಂತಿಯರು ಹಾಗೂ ಮಕ್ಕಳು ಪಡೆದುಕೊಂಡು ಅಪೌಷ್ಠಿಕತೆಯನ್ನು ತೊಲಗಿಸಿ ಎಂದರು. ಗರ್ಭಿಣಿ ಮಹಿಳೆಯರಲ್ಲಿ ರಕ್ತಹೀನತೆ ಬಹಳ ಇರುತ್ತದೆ ಇದನ್ನು ತಡೆಗಟ್ಟಲು ಪೌಷ್ಠಿಕ ಆಹಾರ ಒಂದೇ ಪರಿಹಾರ ಎಂದು ಹೇಳಿದರು. 

ಪ್ರಾಸ್ತಾವಿಕ ಮಾತುಗಳನ್ನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ್ ಅವರು ಪೋಷಣ ಮಾಸಾಚರಣೆಯ ಉದ್ದೇಶ, 0-6 ವರ್ಷದ ಮಕ್ಕಳಿಗೆ ಪೌಷ್ಠಿಕ ಆಹಾರದ ಬಗ್ಗೆ ಹಮ್ಮಿಕೊಂಡ ಜನಾದೋಲನ ಕಾರ್ಯಕ್ರಮ ಹಾಗೂ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ವಿವರ ನೀಡಿದರು.

ಇದೇ ಸಮಯದಲ್ಲಿ 5 ಜನ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದರು. ಚಿತ್ತವಾಡ್ಗಿ-3ನೇ ವಲಯದ 8 ಜನ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊರೊನಾ ವಾರಿಯರ್ಸ್ ಎಂದು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಆಯುಷ್ ಇಲಾಖೆಯಿಂದ ಗರ್ಭಿಣಿ ಮಹಿಳೆಯರಿಗೆ ಪಿಪಿಟಿ ಪ್ರದರ್ಶನ ನೀಡಿ ಆಯುರ್ವೇದದ ಮೂಲಕ ಪೌಷ್ಠಿಕತೆ ಯಾವ ರೀತಿ ಹೆಚ್ಚಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಮೊಳಕೆಕಾಳು ಮತ್ತು ಒಣಹಣ್ಣುಗಳನ್ನು ವಿತರಣೆ ಮಾಡಿದರು. ಪೌಷ್ಠಿಕ ಮೇಳದಲ್ಲಿ ಆಹಾರ ಸಾಮಾಗ್ರಿಗಳಿಂದ ತಯಾರಿಸಬಹುದಾದ ವಿವಿಧ ಬಗೆಯ ತಿನಿಸುಗಳನ್ನು ಕಾರ್ಯಕರ್ತೆಯರು ತಯಾರಿಸಿ ಪ್ರದರ್ಶಿಸಿದರು. 

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಬಾಸ್ಕರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶಂಕರ, ಆಯುಷ್ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ.ಮುನಿ ವಾಸುದೇವರೆಡ್ಡಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳೆನಾಗಪ್ಪ, ಚಿತ್ತವಾಡ್ಗಿ-3ನೇ ವಲಯದ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಗರ್ಭಿಣಿಯರು ಹಾಜರಿದ್ದರು.

ಸುದ್ದಿ ಓದಿ