ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ: ಸೋಂಕು ಹೆಚ್ಚಳ ಹಿನ್ನೆಲೆ ಚಿಕ್ಕೋಡಿ-ನಿಪ್ಪಾಣಿಗೆ ಭೇಟಿ
ಸೋಂಕಿತರು ತಕ್ಷಣವೇ ಕೋವಿಡ್ ಕೇರ್ ಸೆಂಟರಗೆ ದಾಖಲಾಗಿ
ಚಿಕ್ಕೋಡಿ 13: ಕೋವಿಡ್ ಎರಡನೆ ಅಲೆ ಗಡಿ ಭಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದೆ ಇರುವುದು ಗಡಿ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಒಂದು ವಾರದೊಳಗೆ ಸೋಂಕು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ರವಿವಾರ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿಗೆ ಭೇಟಿ ನೀಡಿ ಸೋಂಕಿತರು ತಕ್ಷಣವೇ ಕೋವಿಡ್ ಕೇರ್ ಸೆಂಟರಗೆ ದಾಖಲಾಗಬೇಕು ಎಂದು ಸೂಚಿಸಿದರು.
ಬೆಳಗಾವಿ ಜಿಲ್ಲೆ ಸಂಪೂರ್ಣ ಲಾಕಡೌನ ಇದ್ದರೂ ಸಹ ಗ್ರಾಮೀಣ ಪ್ರದೇಶದಲ್ಲಿ ಜನರು ಹವ್ಯಾಹತವಾಗಿ ಓಡಾಡುತ್ತಿದ್ದಾರೆ. ಇದರಿಂದ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ, ಎಚ್ಚೆತ್ತುಕೊಂಡ ಜಿಲ್ಲಾ ಮತ್ತು ತಾಲೂಕಾಡಳಿತ ಸೋಂಕು ಹೆಚ್ಚು ಇರುವ ಪ್ರದೇಶಕ್ಕೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸೋಂಕಿತರ ಮನೆ ಮನೆಗೆ ತೆರಳಿ ಕೋವಿಡ್ ಕೇರ್ ಸೆಂಟರಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ, ಚಿಕ್ಕೋಡಿ ವಾರ್ಡನಂ 23ರ ಹುಡ್ಕೋ ಕಾಲೋನಿಗೆ ಭೇಟಿ ನೀಡಿ ಸೋಂಕಿತರ ಯೋಗ ಕ್ಷೇಮ ವಿಚಾರಿಸಿದರು. ವಾರ್ಡದಲ್ಲಿ ಐದು ಜನ ಸೋಂಕಿತರು ಕಂಡು ಬಂದರೇ ಸೀಲಡೌನ್ ಮಾಡಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ನಿಪ್ಪಾಣಿ ತಾಲೂಕಿನ ಪಾಂಗೀರೆ ಗ್ರಾಮದಲ್ಲಿ ಸೋಂಕಿತರು ಹೆಚ್ಚಾಗಿರುವುದರಿಂದ ದೀಡೀರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಗ್ರಾಮದ ಜನರ ಜೊತೆ ಸೋಂಕು ಕುರಿತು ಚರ್ಚೆ ನಡೆಸಿದರು. ನಂತರ ಸೋಂಕಿತರ ಮನೆಗೆ ತೆರಳಿ ತಕ್ಷಣಾ ಕೋವಿಡ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಮನೆಯಲ್ಲಿ ಇದ್ದರೇ ಸೋಂಕು ಇಡೀ ಗ್ರಾಮಕ್ಕೆ ಹರಡುವ ಭೀತಿ ಇದೆ ತಕ್ಷಣಾ ಆಸ್ಪತ್ರೆಗೆ ಹೋಗಬೇಕು ಎಂದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ಬೆಳಗಾವಿ ಜಿಲ್ಲೆಯಲ್ಲಿ ಪಾಸಿಟಿವಿ ಶೇ7.6 ಇದೆ. ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಳ ಕಂಡು ಬರುತ್ತಿದೆ. ಇದನ್ನು ನಿಯಂತ್ರಿಸಲು ಬರುವ ಒಂದು ವಾರ ಕಠಿಣ ಕ್ರಮಕೈಗೊಳ್ಳಬೇಕಿದೆ. ಯಾವ ಗ್ರಾಮದಲ್ಲಿ 10 ಜನರಿಗೆ ಸೋಂಕು ತಗುಲಿದರೇ ಗ್ರಾಮವನ್ನು ಸೀಲಡೌನ ಮಾಡಬೇಕು. 5 ಜನರಿಗೆ ಸೋಂಕು ತಗುಲಿದರೇ ವರ್ಡ ಸೀಲಡೌನ ಮಾಡಬೇಕು ಎಂದು ಸೂಚಿಸಿದರು. ಬೆಳಗಾವಿ ಜಿಲ್ಲೆ ಅನಲಾಕ ಆಗಬೇಕಾದರೇ ಪಾಸಿಟಿವಿಟಿ ತುಂಭಾ ಕಡಿಮೆಯಾಗಬೇಕಿದೆ. ಜನರು ಎಚ್ಚರಿಕೆ ವಹಿಸಬೇಕು. ಅನಾವಶ್ಯಕ ಮನೆಯಿಂದ ಹೊರಬರಬಾರದು. ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ ಧರಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಡಿಎಚ್ಒ ಡಾ, ಎಸ್.ಎಸ್.ಗಡೇದ, ತಹಶೀಲ್ದಾರ ಪ್ರವೀನ ಜೈನ, ನಿಪ್ಪಾಣಿ ತಹಶೀಲ್ದಾರ ಪ್ರಕಾಶ ಗಾಯಕವಾಡ, ತಾಲೂಕಾ ಆರೋಗ್ಯಾಧಿಕಾರಿ ಡಾ, ವಿಠ್ಠಲ ಶಿಂಧೆ, ಆರೋಗ್ಯ ಸಹಾಯಕರ ರಾಜ್ಯ ಅಧ್ಯಕ್ಷ ಬಿ.ಎ.ಕುಂಬಾರ ಮುಂತಾದವರು ಇದ್ದರು.
ಚಿಕ್ಕೋಡಿಯಲ್ಲಿ ಕೊರೊನಾ ಟೆಸ್ಟಿಂಗ್ ಸೆಂಟರ: ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಚಿಕ್ಕೋಡಿ ನಗರದಲ್ಲಿ ಕೊರೊನಾ ಪರೀಕ್ಷಾ ಘಟಕ ಮಂಜೂರಾಗಿದೆ. ಈಗಾಗಲೇ ಸ್ಥಳ ಪರೀಶೀಲನೆ ನಡೆಸಲಾಗಿದೆ. ಶೀಘ್ರವಾಗಿ ಚಿಕ್ಕೋಡಿಯಲ್ಲಿ ಟೆಸ್ಟಿಂಗ್ ಸೆಂಟರ ಆರಂಭವಾಗುತ್ತದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಕಾಮಗಾರಿ ಆರಂಭವಾಗುತ್ತದೆ.
ಎಂ.ಜಿ.ಹಿರೇಮಠ ಜಿಲ್ಲಾಧಿಕಾರಿ.