ನಿರಂತರ ಮಳೆ ಜನ ಜೀವನ ಅಸ್ತವ್ಯಸ್ತ
ತಾಳಿಕೋಟಿ: ಪಟ್ಟಣ ಹಾಗೂ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆ ಇಂದು ಕೂಡಾ ಮುಂದುವರೆದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಳೆಯ ಅಬ್ಬರ ತಾಳಿಕೋಟಿ ತಾಲೂಕಿನಾದ್ಯಂತ ಬಹಳಷ್ಟು ಜೋರಾಗಿದ್ದು ಹಗಲು-ರಾತ್ರಿ ನಿರಂತರವಾಗಿ ಮಳೆ ಸುರಿಯುತ್ತಿದೆ. ನಿನ್ನೆ ರಾತ್ರಿಯಿಂದ ಮಳೆಯ ರಭಸದ ವೇಗ ಹೆಚ್ಚಾಗಿದ್ದು ಸುಮಾರು 24 ಗಂಟೆಗಳಿಂದ ಎಡಬಿಡದೆ ಮಳೆಯಾಗುತ್ತಿದೆ.
ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಆಗಸದಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದ್ದು ಎಲ್ಲಡೆ ಮಳೆರಾಯನ ಅಬ್ಬರ ಎದ್ದು ಕಾಣುತ್ತಿದೆ. ವಾರದಲ್ಲಿ ಒಂದು ಬಾರಿ ಸೂರ್ಯನ ಸಂಪೂರ್ಣ ಬೆಳಕು ಕಂಡುಬಂದಿರುವುದು ಬಿಟ್ಟರೆ ಮೋಡ ಕವಿದ ವಾತಾವರಣದಿಂದ ಪಟ್ಟಣದ ಸ್ಥಿತಿ ಮಲೆನಾಡಿನಂತಾಗಿದೆ.
ರೈತರ ಚಟುವಟಿಕೆಗೆ ಹಿನ್ನಡೆ: ಈ ಬಾರಿಯ ಮುಂಗಾರು ಮಳೆಗಳಾದ ರೋಹಿಣಿ, ಮೃಗಶಿರಾ, ಮಳೆ ಕೈಕೊಟ್ಟಿದ್ದರಿಂದ ರೈತರಿಗೆ ಭಾರಿ ಹಿನ್ನಡೆಯಾಗಿತ್ತು. ಆದರೀಗ ಅಲ್ಪಸ್ವಲ್ಪ ಸುರಿದ ಮಳೆಯಿಂದಾಗಿ ಭೂಮಿಗೆ ಜೀವಕಳೆ ಬಂದಿತ್ತು. ಇದರಿಂದ ರೈತರು, ತೊಗರಿ, ಬಿತ್ತಿ ಸ್ವಲ್ಪ ಅನುಕೂಲ ಮಾಡಿಕೊಳ್ಳಬೇಕು ಎನ್ನುತ್ತಿರುವಾಗಲೇ ಮಳೆ ನಿರಂತರ ಬರುತ್ತಿರುವುದರಿಂದ ಬಿತ್ತುವುದು ಅಸಾಧ್ಯವಾಗಿದೆ ಇದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.
ಪಟ್ಟಣದಲ್ಲಿ ಶಾಲಾ ಕಾಲೇಜ ವಿದ್ಯಾರ್ಥಿಗಳ ಓಡಾಟಕ್ಕೆ, ವಾಹನ ಸಂಚಾರಕ್ಕೆ, ಬೀದಿ ಬದಿ ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗಿದೆ. ಗ್ರಾಮೀಣ ಭಾಗದಿಂದ ಬರುವ ಜನರಿಗೆ ಮಳೆ ಸಮಸ್ಯೆಯನ್ನು ತಂದೊಡ್ಡಿದೆ. ತಾಲೂಕಿನಾದ್ಯಾಂತ ಹಗಲು-ರಾತ್ರಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳೆಲ್ಲ ಕೆಸರುಗದ್ದೆಯಂತಾಗಿವೆ. ಈಟಿಜಿಟಿ ಮಳೆಯಿಂದಾಗಿ ಹಳೆಯ ಮನೆಗಳು ಸೋರುತ್ತಿವೆ. ಇದರಿಂದ ಅಪಾರ ಹಾನಿ ಆಗುವ ಸಾಧ್ಯತೆಗಳೂ ಇವೆ. ಇದೇ ರೀತಿ ಈ ಜಿಟಿಜಿಟಿ ಮಳೆ ಇನ್ನೂ ಕೆಲವು ದಿನಗಳವರೆಗೆ ಮುಂದುವರೆದಲ್ಲಿ ಇದರಿಂದ ಎಲ್ಲರಿಗೂ ತೀವ್ರ ತೊಂದರೆಯಾಗಲಿದೆ. ತಾಲೂಕಾ ಆಡಳಿತ ಈ ದಿಸೆಯಲ್ಲಿ ಸರ್ವಸನ್ನದ್ಧರಾಗಿರಬೇಕಾಗಿದೆ