ಸ್ಕೌಟ್ಸ್, ಗೈಡ್ಸ್ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಬೈಲಹೊಂಗಲ 23: ವಿದ್ಯಾರ್ಥಿನಿಯರು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಲು ಸದಾ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಮೂಲಕ ಉತ್ತಮ ಶಿಸ್ತು ಮತ್ತು ಸಂಯಮ ಹಾಗೂ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಸಪ್ತ್ರಜೆಗಳಾಗಿ ದೇಶ ಕಟ್ಟಲು ಮುಂದಾಗುವಂತೆ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಕ್ರೀಡಾ, ಎನ್.ಎಸ್.ಎಸ್. ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಾಗನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮುಬಾರಕ ಹುಕ್ಕೇರಿಕರ ಮಾತನಾಡಿ, ವಿದ್ಯಾರ್ಥಿನಿಯರ ಸರ್ವತೋಮುಖ ವ್ಯಕ್ತಿತ್ವದ ಬೆಳವಣೆಗೆಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ತುಂಬಾ ಸಹಕಾರಿಯಾಗಿದೆ ಅಧ್ಯಯನದ ಜೊತೆಗೆ ಆಟೋಟಗಳ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ವೇದಿಕೆಗಳು ಪ್ರೇರಣೆಯಾಗುತ್ತವೆ ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಶೈಕ್ಷಣಿಕ ವರ್ಷದುದ್ದಕ್ಕೂ ಚಟುವಟಿಕೆಗಳಲ್ಲಿ ಭಾಗವಹಿಸಿ ಆರೋಗ್ಯದೊಂದಿಗೆ ತಮ್ಮ ಪ್ರತಿಭೆಯನ್ನು ಮೆರೆಯಲು ಮುಂದಾಗಬೇಕೆಂದರು.
ಪ್ರಾಚಾರ್ಯ ಬಿ.ಕೆ. ಮದವಾಲ ಅಧ್ಯಕ್ಷತೆ ಮಾತನಾಡಿ, ವಿದ್ಯಾರ್ಥಿನಿಯರ ಸರ್ವಾಂಗೀಣ ಅಭಿವೃದ್ದಿಯಲ್ಲಿ ವರ್ತಮಾನದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅದ್ಯಯನಶೀಲ ಗುಣವನ್ನು ಬೆಳೆಸಿಕೊಂಡಲ್ಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರಳವಾಗಿ ಜಯಶೀಲರಾಗಬಹುದು ಎಂದರು.
ವೇದಿಕೆಯ ಮೇಲೆ ಮೀನಾಕ್ಷಿ ಕುಲಕರ್ಣಿ, ವಿದ್ಯಾ ರಾಮಣ್ಣವರ, ಬಸವರಾಜ ಕುಲಕರ್ಣಿ ಡಾ. ಸಂಗೊಳ್ಳಿ, ಡಾ. ಎಫ್.ಡಿ. ಗಡ್ಡಿಗೌಡರ, ಕ್ರೀಡಾ ವಿಭಾಗದ ಬಿ.ಸಿ. ಹರ್ಲಾಪೂರ, ಎನ್.ಎಸ್.ಎಸ್. ಘಟಕದ ಅಧಿಕಾರಿಗಳಾದ ಡಾ. ಅವಿನಾಶ ಎಂ. ಮತ್ತು ಡಿ.ಎಸ್. ಹಾಡಕರ ಹಾಗೂ ಸ್ಕೌಟ್ಸ್ ಗೌಡ್ಸ್ ಅಧಿಕಾರಿಯಾದ ಡಾ. ವಿಜಯಲಕ್ಷ್ಮೀ ಡೊಂಬರ ಇದ್ದರು.
ಪೂಜಾ ಬಡಿಗೇರ, ರೂಪಾ ಪಾಟೀಲ ಸ್ವಾಗತಿಸಿದರು. ಅಶ್ವಿನಿ ಆನಿಕಿವಿ ಪರಿಚಯಿಸಿದರು. ಮುಬೀನಾ ಹೊಂಗಲ ನಿರೂಪಿಸಿದರು. ಲಕ್ಷ್ಮೀ ದಂಡು ವಂದಿಸಿದರು.