ಹೊಸಪೇಟೆ

ದಲಿತ ಹಕ್ಕುಗಳ ಕಾರ್ಯಗಾರ ಉದ್ಘಾಟನೆ : ಚಿನ್ನಸ್ವಾಮಿ ಸೋಸಲೆ

ದಲಿತ ಹಕ್ಕುಗಳ ಕಾರ್ಯಗಾರ ಉದ್ಘಾಟನೆ : ಚಿನ್ನಸ್ವಾಮಿ ಸೋಸಲೆ

ಹೊಸಪೇಟೆ 23:  ಸರಕಾರಿ ನೌಕರರ ಭವನದಲ್ಲಿ ಭಾನುವಾರ ನಡೆದ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಮಟ್ಟದ ಸಂಘಟನಾ  ಕಾರ್ಯಗಾರವನ್ನು ಉದ್ಘಾಟನೆ ಮಾಡಿ, ಮಾತನಾಡಿದ ಕ.ವಿ.ವಿ. ಪ್ರಾಧ್ಯಾಪಕರಾದ ಡಾ.ಚಿನ್ನಸ್ವಾಮಿ ಸೋಸಲೆ ಇವರು, ನಾವು ಭಾರತ ದೇಶವನ್ನು ಕಳೆದ 77 ವರ್ಷಗಳಲ್ಲಿ ಶ್ರಮ ಜೀವಿಗಳ ಶ್ರಮದ ಮೂಲಕ ಈ ದೇಶವನ್ನು ಬೃಹತ್ತಾಗಿ ಕಟ್ಟಿದ್ದೇವೆ ವಿನಹ ಯಾವುದೇ ಧಾರ್ಮಿಕ ಅಂಧಾನುಕರಣೆಯ ಮೂಲಕ ಈ ದೇಶವನ್ನು ಕಟ್ಟಲಾಗಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.  

ಎಲ್ಲರಿಗೂ ಅಕ್ಷರ ಜ್ಞಾನ ನೀಡಿದ್ದು, ನಮ್ಮ ದೇಶದ ಸಂವಿಧಾನವೇ ಹೊರತು, ಯಾವುದೇ ಧರ್ಮ, ದೇವಾನು ದೇವತೆಗಳ ಅನುಗ್ರಹದಿಂದಲ್ಲ ಎಂಬುದು ನಮಗೆ ಅರ್ಥವಾಗಬೇಕು. ನಾವು ನಮ್ಮ ದೇಶದ ಸಂವಿಧಾನವನ್ನು ವಸ್ತುನಿಷ್ಠವಾಗಿ ಅರ್ಥ ಮಾಡಿಕೊಳ್ಳದೇ ಇರುವುದರಿಂದ, ಎರಡು ಸಾವಿರ ವರ್ಷಗಳಿಂದ ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೆ ಮುಂದುವರೆದಿವೆ. ಭಾರತೀಯ ಸಂಪ್ರದಾಯದಲ್ಲಿ ದೇವರ ಲೇಪಿತ ಧರ್ಮ ಇದೆ. ಇದು ನಮ್ಮ ಮೌಢ್ಯಕ್ಕೆ ಕಾರಣವಾಗಿದೆ. ಬೌಧ್ಧ ಧರ್ಮದಲ್ಲಿ ದೇವರಿಲ್ಲ. ಶರಣರ ಲಿಂಗಾಯತ ಧರ್ಮದಲ್ಲಿ ದೇವರಿಲ್ಲ. 

 ಜೈನ ಧರ್ಮದಲ್ಲಿ ದೇವರಿಲ್ಲ ಇಂತಹ ಅನೇಕ ಧರ್ಮಗಳನ್ನು ನಾವು ಉದಾಹರಣೆಯಾಗಿ ಕೊಡಬಹುದು. ನಮ್ಮಲ್ಲಿರುವ ಅಜ್ಞಾನವೇ ಸವಣೀರ್ಯರಿಗೆ ಬಂಡವಾಳವಾಗಿದೆ. ನಾವು ಕಟ್ಟಿದ ದೇವಸ್ಥಾನಗಳಿಗೆ ನಮಗೆ ಪ್ರವೇಶ ಇಲ್ಲ, ನಾವೇ ಈ ನೆಲದ ಮೂಲ ನಿವಾಸಿಗಳು ಇದನ್ನು ಅರ್ಥ ಮಾಡಿಕೊಳ್ಳದೇ ಇರುವುದರಿಂದ ಶ್ರಮಜೀವಿಗಳ ಬೆವರಿನಿಂದ ಕಟ್ಟಿದ ಭಾರತ ಇಂದು ಸೋಲುತ್ತಿದೆ. ಮೌಡ್ಯ ಸಂಪ್ರದಾಯಗಳ ತೀರ್ಥದ ಭಾರತ ಇಂದು ಗೆಲ್ಲುತ್ತಿದೆ. ಇದನ್ನು ಬದಲಾಯಿಸಬೇಕಾಗಿದೆ.  

ಇಂತಹ ಅನ್ಯಾಯದ ವ್ಯವಸ್ಥೆಯನ್ನು ಕಿತ್ತೊಗೆಯ ಬೇಕಾಗಿದೆ, ಇದಕ್ಕಾಗಿಯೇ ನಾವು ಶಿಕ್ಷಣ ಪಡೆಯಬೇಕಾಗಿದೆ. ಸಂಘಟನೆ ಕಟ್ಟಬೇಕಾಗಿದೆ, ಸೈದ್ದಾಂತಿಕ ಹೋರಾಟ ಕಟ್ಟಬೇಕಾಗಿದೆ. ಇದು ನಮ್ಮ ಮುಂದಿರುವ ಕರ್ತವ್ಯವಾಗಿದೆ ಮತ್ತು ನಮ್ಮ ಸಂವಿಧಾನದ ಆಶಯವಾಗಿದೆ ಎಂದು ತಿಳಿಸಿದರು. ಪೆರಿಯರ್ ರಾಮಸ್ವಾಮಿ ನಾಯ್ಕ್‌ರ್ ಕುರಿತು ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ಡಾ.ವಿರುಪಾಕ್ಷ ಪೂಜಾರಳ್ಳಿ ಇವರು ದೇವರು ಧರ್ಮಗಳ ಬಗ್ಗೆ. ಜಾತಿ ಅಸಮಾನತೆ, ಗೊಡ್ಡು ಸಂಪ್ರದಾಯಗಳ ಬಗ್ಗೆ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿದರು, ಅಂತಹ ಅನಿಷ್ಠ ಶೋಷಣೆಗಳ ವಿರುದ್ದ ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲೂ ಸಹ ಹೋರಾಟ ನಡೆಸಿ, ಇಂದಿಗೂ ಕೋಟ್ಯಾಂತರ ಹೋರಾಟಗಾರರಿಗೆ ಸ್ಪೂರ್ತಿಯಾಗಿರುವ ಪರಿಯರ್ ನಮಗೆಲ್ಲಾ ಎಂದೆಂದಿಗೂ ಮರೆಯದ ಪ್ರೇರಕ ಶಕ್ತಿಯಾಗಿದ್ದಾರೆಂದು ತಿಳಿಸಿದರು.  

ಕಾರ್ಯಗಾರದಲ್ಲಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಮುಖಂಡರಾದ ಮರಡಿ ಜಂಬಯ್ಯನಾಯಕ, ಬಿ.ತಾಯಪ್ಪ ನಾಯಕ, ಬಿ.ರಮೇಶ್ ಕುಮಾರ್, ಎಂ.ಧನರಾಜ್, ಸೂರ್ಯನಾರಾಯಣ, ಹೆಚ್‌.ಡಿ.ಚಂದ್ರ​‍್ಪ, ಸಿ.ಐ.ಟಿ.ಯು ಮುಖಂಡರಾದ ಎಂ.ಗೋಪಾಲ್, ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ನಾಗರಾಜ್ ಪತ್ತಾರ್, ಡಿ.ವೈ.ಎಫ್‌.ಐ. ಮುಖಂಡರಾದ ಬಿ.ಮಹೇಶ್, ನಾಗುನಾಯ್ಕ್‌, ಶ್ರೀಧರ್ ಮುಂತಾದವರು ಉಪರಸ್ಥಿತರಿದ್ದರು. 


ಸುದ್ದಿ ಓದಿ