ಎಲ್ಲ ಮೂಲಭೂತ ಸೌಕರ್ಯಗಳ ಅನುಷ್ಠಾನಕ್ಕೆ ಆದ್ಯತೆ
ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ಜಲಜೀವನ ಮಿಶನ್ ಯೋಜನೆ ಕಾಮಗಾರಿಗೆ ಭೂಮಿ ಪೂಜೆ
ಅಥಣಿ 06: ಕಾಗವಾಡ ಮತಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ನೀರಾವರಿ, ಶಿಕ್ಷಣ, ಆರೋಗ್ಯ, ವಿದ್ಯುತ್ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆದ್ಯತೆ ನೀಡುತ್ತಿರುವೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಅವರು ಪಾಂಡೆಗಾಂವ ಗ್ರಾಮದಲ್ಲಿ 1 ಕೋಟಿ 9 ಲಕ್ಷ ರೂ ಗಳ ಜಲಜೀವನ ಮಿಶನ್ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಗ್ರಾಮದ ವಿಠ್ಠಲ್ ಮಂದಿರದಲ್ಲಿ ಗ್ರಾಮಸ್ಥರ ಸಭೆಯಲ್ಲಿ ಮಾತನಾಡುತ್ತಿದ್ದರು. ಕಾಗವಾಡ ಮತಕ್ಷೇತ್ರದ ಎಲ್ಲ ಗ್ರಾಮಗಳ ಮನೆಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಜಲಜೀವನ್ ಯೋಜನೆಯಡಿ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ ಎಂಧ ಅವರು ಕಾಗವಾಡ ಮತಕ್ಷೇತ್ರದ ಗಡಿ ಭಾಗದ ಅಭಿವೃದ್ಧಿಗಾಗಿ 170 ಕೋಟಿ ರೂ ಗಳ ಅನುದಾನದಲ್ಲಿ ರಸ್ತೆ ಕಾಮಗಾರಿಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಈ ಭಾಗದ ಅತ್ಯಂತ ಮಹತ್ವದ ಯೋಜನೆಯಾದ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಇದೇ ಡಿಸೆಂಬರ್ ತಿಂಗಳ ಅಂತ್ಯದವರೆಗೆ ಮುಕ್ತಾಯಗೊಳ್ಳಲಿದ್ದು, ಪೂರ್ಣಗೊಂಡ ಈ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಮಹಾದೇವ ಕೋರೆ ಮಾತನಾಡಿ, ಕಾಗವಾಡ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಶ್ರೀಮಂತ ಪಾಟೀಲರಂತಹ ಅಭಿವೃದ್ಧಿಯ ಹರಿಕಾರರೊಬ್ಬರು ಶಾಸಕರಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರ ಭಾಗ್ಯ ಎಂದ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರೂ ಕೂಡ ತಮ್ಮ ಅಧಿಕಾರಾವಧಿಯನ್ನು ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಡದೆ ವಿನಾಕಾರಣ ಕಾಲಹರಣ ಮಾಡಿರುವ ಉದಾಹರಣೆ ನಮ್ಮ ಮುಂದೆಯೇ ಇದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಯುವ ಮುಖಂಡ ಅಶೋಕ ಗಡದೆ ಮಾತನಾಡಿ, ಕಳೆದ 20 ವರ್ಷಗಳ ಅವಧಿಯಲ್ಲಿ ಆಗದೇ ಇರುವ ಅಭಿವೃದ್ಧಿ ಕಾಮಗಾರಿಗಳನ್ನು ಕೇವಲ 2 ವರ್ಷಗಳಲ್ಲಿಯೇ ಶಾಸಕ ಶ್ರೀಮಂತ ಮಾಟೀಲ ಪೂರ್ಣಗೊಳಿಸಿದ್ದಾರೆ ಎಂದ ಅವರು ಕಾಗವಾಡ ಮತಕ್ಷೇತ್ರದ ಅತ್ಯಂತ ಹಿಂದುಳಿದ ಪಾಂಡೆಗಾಂವ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳನ್ನು ಇದೇ ಮೊದಲ ಬಾರಿಗೆ ಶಾಸಕ ಶ್ರೀಮಂತ ಪಾಟೀಲ ಅಭಿವೃದ್ಧಿ ಪಡಿಸಿದ್ದಾರೆ ಎಂದರು.
ಗ್ರಾಮ ಪಂಚಾಯತ ಅಧ್ಯಕ್ಷ ಬಾಳು ಹಜಾರೆ, ಧುರೀಣರಾದ ಡಿ.ಕೆ.ಪವಾರ, ಮಹಾದೇವ ಪಾಟೀಲ, ರಮೆಶ ಕುರುಂದವಾಡೆ, ಕುಡಿಯುವ ನೀರು ವಿಭಾಗದ ರವೀಂದ್ರ ಮೂರ್ಗಾಲಿ, ವಿವೇಕ ಹಳ್ಳೂರ, ಬಿ.ಎಸ್.ಮುಸಲ್ಮಾರಿ, ಗುತ್ತಿಗೆದಾರರಾದ ತಿಪ್ಪಣ್ಣ ಬಜಂತ್ರಿ, ಬಸವರಾಜ ಮಗದುಮ್, ಶಿವಪುತ್ರ ನಾಯಿಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.