ಚಿಕ್ಕೋಡಿ

ಬೀರೇಶ್ವರ ಸಂಸ್ಥೆಯ ಸಿಬ್ಬಂದಿಗಳಿಗೆ ನಿವೃತ್ತಿ ಪಿಂಚಣಿ ಯೋಜನೆ ಜಾರಿ

ಬೀರೇಶ್ವರ ಸಂಸ್ಥೆಯ ಸಿಬ್ಬಂದಿಗಳಿಗೆ ನಿವೃತ್ತಿ ಪಿಂಚಣಿ ಯೋಜನೆ ಜಾರಿ

ಚಿಕ್ಕೋಡಿ 12: ಕರ್ನಾಟಕ-ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೀರೇಶ್ವರ ಸೌಹಾರ್ದ ಸೊಸಾಯಿಟಿ ಸಿಬ್ಬಂದಿಗಳ ನಿವೃತ್ತಿ ಪಿಂಚಣಿ ಯೋಜನೆ ಜಾರಿ ಮಾಡಲಾಗಿದೆ. ಇದರಿಂದ ಸಹಕಾರಿ ಸಂಸ್ಥೆಯು ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. 

ಮಂಗಳವಾರ ಯಕ್ಸಂಬಾ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೀರೇಶ್ವರ ಸಂಸ್ಥೆಯ ಸಿಬ್ಬಂದಿಗಳಿಗೆ ಈಗಾಗಲೇ ಸಾಕಷ್ಟು ಸೌಲತ್ತುಗಳನ್ನು ಹಾಗೂ ಅವರ ಜೀವನ ನಿರ್ವಹಣೆಗಾಗಿ ಉತ್ತಮವಾದ ವೇತನವನ್ನು ನೀಡುವದರೊಂದಿಗೆ, ಸಿಬ್ಬಂದಿಗಳಿಗೆ ಯಾವದೇ ರೀತಿಯ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತಾ ಬಂದಿದೆ. ಈಗ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ ಎಂದರು. 

ಸಿಬ್ಬಂದಿಗಳು ನಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವವರೆಗೆ ಆರ್ಥಿಕವಾಗಿ ಉತ್ತಮ ರೀತಿಯಿಂದ ಕುಟುಂಬ ನಿರ್ವಹಣೆ ಮಾಡಬಹುದಾಗಿದೆ, ಆದರೆ ಸಿಬ್ಬಂದಿಗೆ ನಿವೃತ್ತಿ ನಂತರ ಭವಿಷ್ಯ ನಿಧಿ ಇಲಾಖೆಯಿಂದ ನಿವೃತ್ತಿ ವೇತನ ಬಹಳಷ್ಟು ಕಡಿಮೆ ಪ್ರಮಾಣದಲ್ಲಿ ದೊರಕುವುದರಿಂದ, ಅಲ್ಲದೆ ಸಿಬ್ಬಂದಿ ಮರಣಾನಂತರ ಅವರ ಕುಟುಂಬಕ್ಕೆ ದೊರಕುವ ಪಿಂಚಣಿ ಮೊತ್ತ ಕೂಡ ಅಲ್ಪಪ್ರಮಾಣದಲ್ಲಿ ಇರುವುದರಿಂದ, ಬಹಳಷ್ಟು ನಿವೃತ್ತಿ ಸಿಬ್ಬಂದಿಗಳಾಗಲಿ ಅವರ ಕುಟುಂಬದವರಾಗಲಿ ಕಷ್ಟಕರವಾದ ಹಣಕಾಸು ಸಮಸ್ಯೆಗಳನ್ನು ಎದುರಿಸುವಂತ ಪ್ರಸಂಗ ಉಂಟಾಗಬಹುದು. ಅಂದರೆ ಮಕ್ಕಳ ಶಿಕ್ಷಣ, ಮದುವೆ, ಆಸ್ಪತ್ರೆ ಖರ್ಚು ವೆಚ್ಚ ಇದರ ಹೊರತಾಗಿ ಇನ್ನುಳಿದ ಜೀವನ ನಿರ್ವಹಣೆಯಂತಹ ಕಷ್ಟಕರವಾದ ಸಮಸ್ಯೆಗಳನ್ನು ಅನುಭವಿಸುವಂತ ಪ್ರಸಂಗವನ್ನು ಎದುರಿಸಬೇಕಾಗಬಹುದು. ಈ ಒಂದು ಪ್ರಸಂಗವನ್ನು ಗಮನದಲ್ಲಿ ಇಟ್ಟುಕೊಂಡು, ಸಿಬ್ಬಂದಿಗಳ ಕುಟುಂಬ ನಿರ್ವಹಣೆಗಾಗಿ ಪಿಂಚಣಿ ಯೋಜನೆಯನ್ನು ಸಂಸ್ಥೆಯ ಮುಖಾಂತರ ಅಳವಡಿಸಿ ಅವರಿಗೆ ಜೀವನಾಧಾರ ಒದಗಿಸಿ ಕೊಡುವ ಉದ್ದೇಶ ಈ ಯೋಜನೆಯದ್ದಾಗಿದೆ ಎಂದರು. 

ಬೀರೇಶ್ವರ ಕೋ-ಆಪ್ ಕ್ರೇಡಿಟ್ ಸೊಸಾಯಟಿ ಯಕ್ಸಂಬಾ (ಮಲ್ಟಿ-ಸ್ಟೇಟ್) ಸಿಬ್ಬಂದಿ ಪಿಂಚಣಿ ಯೋಜನೆ ಟ್ರಸ್ಟ್‌ ಈ ಹೆಸರಿನಲ್ಲಿ ಹಣ ಸಂಗ್ರಹಿಸಲಾಗುತ್ತದೆ. ಬೀರೇಶ್ವರ ಸಂಸ್ಥೆಯ ಖಾಯಂಮಾತಿ ಹೊಂದಿದ 1006 ಸಿಬ್ಬಂದಿಗಳಿಗೆ ಪಿಂಚಣಿ ಯೋಜನೆಗೆ ಒಳಪಡಿಸಲಾಗಿದ್ದು, ಸಂಸ್ಥೆಯಿಂದ ಪ್ರತಿ ವರ್ಷ 2 ಕೋಟಿ ರೂಪಾಯಿ ಟ್ರಸ್ಟಗೆ ಪಿಂಚಣಿ ರೂಪದಲ್ಲಿ ಕಾರ​‍್ಪಸ ಫಂಡ್ ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ ಸಿಬ್ಬಂದಿಗಳ ಪ್ರತಿ ತಿಂಗಳ ವೇತನದಿಂದ ವಂತಿಗೆಯನ್ನು ಟ್ರಸ್ಟಗೆ ಪಡೆದುಕೊಳ್ಳಲಾಗುತ್ತದೆ. ಬೀರೇಶ್ವರ ಸಂಸ್ಥೆಯಲ್ಲಿ 01-04-2022 ರ ನಂತರ ನಿವೃತ್ತಿ ಹೊಂದುವ ಸಿಬ್ಬಂದಿಗಳು ಪಿಂಚಣಿ ಯೋಜನೆಯ ಲಾಭ ಪಡೆಯಲಿದ್ದಾರೆ. ಬೀರೇಶ್ವರ ಸಂಸ್ಥೆಯಲ್ಲಿ ಖಾಯಂಮಾತಿ ಹೊಂದಿದ ಸಿಬ್ಬಂದಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಯೋಜನೆಯಲ್ಲಿ ಸಿಬ್ಬಂದಿಗಳು ಆಕಸ್ಮಾತ ಮರಣ ಹೊಂದಿದ್ದಲ್ಲಿ ಸಿಬ್ಬಂದಿಗೆ ನೀಡಬೇಕಾದ ನಿವೃತ್ತಿ ಪಿಂಚಣಿಯ ಅರ್ಧ ಭಾಗವನ್ನು ಸಿಬ್ಬಂದಿಯ ಹೆಂಡತಿ-ಮಕ್ಕಳು ಹಾಗೂ ತಂದೆ-ತಾಯಿಗೆ ನೀಡಲಾಗುವದು. ಈ ಯೋಜನೆಯಲ್ಲಿ ಸಿಬ್ಬಂದಿಗಳು ಶಾಶ್ವತ ಅಂಗ ವೈಫಲ್ಯ ಹೊಂದಿದಲ್ಲಿ, ನಿವೃತ್ತಿ ನಂತರದ ಪಿಂಚಣಿಯ ಅರ್ಧ ಭಾಗದಷ್ಟು ಪಿಂಚಣಿಯನ್ನು ತಕ್ಷಣದಿಂದಲೆ ಪಡೆಯಲಿದ್ದಾರೆ.ಸಿಬ್ಬಂದಿಗಳು ನಿವೃತ್ತಿ ಸಮಯದಲ್ಲಿ ತಮ್ಮ ವಂತಿಗೆ ಸಂಪೂರ್ಣ ಭರಣಾ ಆಗದೆ ಇದ್ದಲ್ಲಿ ಅಂತಹ ಸಿಬ್ಬಂದಿಗಳು ಉಳಿದ ವಂತಿಕೆಯ ಹಣ ಒಂದೇ ಕಂತಿನಲ್ಲಿ ತುಂಬಿ ತಕ್ಷಣದಿಂದ ಪಿಂಚಣಿ ಯೋಜನೆ ಲಾಭ ಪಡೆಯಲಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ, ಉಪಾಧ್ಯಕ್ಷ ಸಿದ್ರಾಮ ಗಡದೇ, ಅಪ್ಪಾಸಾಹೇಬ ಜೊಲ್ಲೆ, ಯಶೀನ ತಾಂಬೋಳೆ, ಬಸಪ್ಪ ಗುರುವ, ಬಿಪಿನಚಂದ್ರ ದೇಶಪಾಂಡೆ, ಪ್ರಧಾನ ವ್ಯವಸ್ಥಾಪಕ ರವೀಂದ್ರ ಚೌಗಲೆ, ಎಂ.ಕೆ.ಮಂಗಾವತೆ, ರಮೇಶ ಕುಂಬಾರ, ಸುರೇಶ ಮಾನೆ, ಬಹದ್ದೂರ ಗುರುವ, ಶಿವು ಡಬ್ಬ ಮುಂತಾದವರು ಇದ್ದರು. 


ಸುದ್ದಿ ಓದಿ