ತಾಳಿಕೋಟಿ

ಅಭಿವೃದ್ಧಿ ಕಾರ್ಯವನ್ನು ಅನುಷ್ಠಾನ ಮಾಡಿ: ಶಾಸಕ ಸಿ.ಎಸ್‌.ನಾಡಗೌಡ

ಅಭಿವೃದ್ಧಿ ಕಾರ್ಯವನ್ನು ಅನುಷ್ಠಾನ ಮಾಡಿ: ಶಾಸಕ ಸಿ.ಎಸ್‌.ನಾಡಗೌಡ

ತಾಳಿಕೋಟೆ 09: ಎಲ್ಲ ಇಲಾಖೆಗಳಿಗೂ ನಂಜುಂಡಪ್ಪ ವರದಿ ಅನ್ವಯ ಸಾಕಷ್ಟು ಅನುದಾನ ನೀಡಿದರೂ ಸಹ ತಾಳಿಕೋಟೆ ತಾಲೂಕು ಹಿಂದುಳಿದ ತಾಲೂಕು ಅಂತಾ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವದು ದುರಂತವಾಗಿದೆ. ಆಡಳಿತದಿಂದ ಎಲ್ಲಿ ತಪ್ಪಾಗಿದೆ ಎನ್ನುವದನ್ನು ಅರ್ಥೈಸಿಕೊಂಡು ಮುಂದಿನ ಎರಡು ವರ್ಷದಲ್ಲಿ ಅಭಿವೃದ್ಧಿ ಕಾರ್ಯವನ್ನು ಅನುಷ್ಠಾನ ಮಾಡಿ ಮಾದರಿ ತಾಲೂಕನ್ನಾಗಿ ಪುನರ ನಿರ್ಮಾಣ ಮಾಡೋಣ ಎಂದು ಮಾಜಿ ಸಚಿವ, ಮುದ್ದೇಬಿಹಾಳ ಶಾಸಕ ಸಿ.ಎಸ್‌.ನಾಡಗೌಡ(ಅಪ್ಪಾಜಿ) ಹೇಳಿದರು. 

ಅವರು ಸೋಮವಾರ ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ನಡೆದ ಕೇಂದ್ರ ಹಾಗೂ ರಾಜ್ಯ ಸರಕಾರ, ನೀತಿ ಆಯೋಗ ಅಡಿಯಲ್ಲಿ ನಡೆದ ಜಿಪಂ, ತಾಪಂ ಸಹಯೋಗದಲ್ಲಿ ನಡೆದ ಸಂಕಲ್ಪ ಸಪ್ತಾಹದ ಸಮಾರೋಪ ಸಮಾರಂಭವನ್ನು ಉಧ್ಘಾಟಿಸಿ ಮಾತನಾಡಿದರು. 

ಪ್ರತಿಯೊಂದು ಇಲಾಖೆಯ ಯೋಜನೆಗಳು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಿದಾಗ ಮಾತ್ರ ಅಭಿವೃದ್ದಿ ಸಾಧ್ಯವಾಗಲಿದೆ. ರಾಜ್ಯ ಹಾಗೂ ಕೇಂದ್ರ ಅಭಿವೃದ್ಧಿ ಸೂಚ್ಯಂಕಕ್ಕಿಂತ ನಾವು ಬಹಳ ಹಿಂದುಳಿದಿದ್ದೇವೆ. ಬೇರು ಮಟ್ಟದಲ್ಲಿ ನಾವು ಯಾಕೆ ಹಿಂದುಳಿದಿದ್ದೇವೆ ಅನ್ನುವದನ್ನ ಅರಿತುಕೊಳ್ಳಬೇಕು. ಅಭಿವೃದ್ದಿ ಕಾರ್ಯಗಳು ಮನೆ ಮನೆಗೆ ತಲುಪಿಸಬೇಕು. ಜನರು ತಮ್ಮ ಕರ್ತವ್ಯಗಳನ್ನು ಅರಿತುಕೊಳ್ಳಬೇಕು. ಹಿಂದುಳಿದ ವರ್ಗದವರನ್ನು ಮೇಲೆತ್ತಲು ಆಸರೆ, ಆಹಾರ ಮತ್ತು ಉದ್ಯೋಗ ಮುಖ್ಯವಾಗಿದೆ. ಬ್ರಷ್ಟಾಚಾರ ಎನ್ನುವ ರೋಗವನ್ನು ಹೊಡೆದು ಹಾಕಿ ರಾಷ್ಟ್ರ ಮೊದಲು ಎನ್ನುವದನ್ನು ಅಳವಡಿಸಿಕೊಂಡಾಗ ಮಾತ್ರ ಅಭಿವೃದ್ದಿ ಸಾಧ್ಯವಾಗಲಿದೆ. ಮಹಿಳೆಯರನ್ನು ಪ್ರೋತ್ಸಾಹಿಸುವ ಕಾರ್ಯ ಪ್ರತಿ ಪಂಚಾಯತದಲ್ಲಿಯೂ ಆಗಲಿ. ಮಹಿಳೆಯರಿಗೆ ಕೆಲಸ ನೀಡುವ ಮೂಲಕ ಭದ್ರತೆ ಕೊಡುವ ಕಾರ್ಯ ಆಗಲಿ. ಸರಕಾರದ ಯೋಜನೆಗಳು ಗ್ರಾಮೀಣ ಜನರ ಜೀವನಕ್ಕೆ ದಾರಿಯಾಗಲಿ. ಪ್ರತಿ ಗ್ರಾಮ ಪಂಚಾಯತದಲ್ಲಿ ಶಾಸ್ವತ ಯೋಜನೆಗಳು ಜಾರಿಯಾಗಬೇಕು. ಒಬ್ಬ ವ್ಯಕ್ತಿಯಿಂದ ಸಮಾಜ ಸುಧಾರಣೆ ಸಾಧ್ಯವಿಲ್ಲ. ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು. 

ಬೇಸರ ಹೊರಹಾಕಿದ ಅಪ್ಪಾಜಿ ನಾಡಗೌಡ :- ತಾಲೂಕಿನ ಹರನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಮಲೀನತೆಯಿಂದ ಮೂರು ಬಾರಿ ವಾಂತಿ ಭೇದಿ ಉಂಟಾಗಿ ಸಾವು ನೋವು ಸಂಭವಿಸಿತ್ತು. ಇದನ್ನು ಅರಿತು ಶುದ್ದ ಕುಡಿಯುವ ನೀರಿನ್ನು ಒದಗಿಸುವ ಉದ್ದೇಶದಿಂದ ಮೂಕಿಹಾಳ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಜಾರಿಗೊಳಿಸಲಾಗಿತ್ತು. ಆದರೆ ಈ ವರೆಗೂ ಹರನಾಳ ಗ್ರಾಮಕ್ಕೆ ಸಮರ್ಪಕ ನೀರು ಹರಿಯದಿರುವದು ಬೇಸರ ಮೂಡಿಸಿದೆ. ಅಧಿಕಾರಿಗಳು ಯೋಜನೆಯ ಉದ್ದೇಶ ಈಡೇರಿಸುವಲ್ಲಿ ವಿಫಲವಾಗಬಾರದು. ಇಂತಹ ಸಣ್ಣ ಸಣ್ಣ ಘಟನೆಗಳೇ ಹಿಂದುಳಿಯಲು ಕಾರಣವಾಗಿವೆ ಎಂದು ತಮ್ಮ ಬೇಸರವನ್ನು ತುಂಬಿದ ಸಭೆಯಲ್ಲಿಯೇ ಹೊರಹಾಕಿದರು.  

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಮಾತನಾಡಿ, ಅಭಿವೃದ್ದಿಯಲ್ಲಿ ಜನರ ಸಹಕಾರ ಮುಖ್ಯವಾಗಿದೆ. ಹಿಂದುಳಿದ ತಾಲೂಕುಗಳ ಅಭಿವೃದ್ದಿಗೆ ನೀತಿ ಆಯೋಗ ಮಹತ್ವಕಾಂಕ್ಷೆ ಹೊಂದಿದ್ದು ಸರಕಾರದ ಯೋಜನೆಗಳ ಲಾಭವನ್ನು ಪಡೆದುಕೊಂಡು ಮುಂದಿನ 2 ರ್ಷದಲ್ಲಿ ಸ್ಪೂರ್ತಿಧಾಯಕ ತಾಲೂಕು ನಿರ್ಮಾಣ ಮಾಡೋಣ ಅಂದರು. 

ಪ್ರಾಸ್ತಾವೀಕವಾಗಿ ಮಾತನಾಡಿದ ಜಿಪಂ ಮುಖ್ಯ ಯೋಜಾಧಿಕಾರಿ ನಿಂಗಪ್ಪ ಗೋಠೆ, ದೇಶದಲ್ಲಿ 39 ಬಹು ಆಯಾಮದ ಸೂಚ್ಯಾಂಕಗಳಲ್ಲಿ ರಾಜ್ಯ ಹಾಗೂ ಕೆಂದ್ರ ಮಟ್ಟದ ಸರಾಸರಿ ಅಭಿವೃದ್ಧಿಗಿಂತ ಕಡಿಮೆ ಇರುವ 500 ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ತಾಳಿಕೋಟೆ ತಾಲೂಕು ಒಂದಾಗಿದೆ. ಆರೋಗ್ಯ, ಪೌಷ್ಠಿಕತೆ, ಶಿಕ್ಷಣ, ಕುಡಿಯುವ ನೀರು ಮತ್ತು ನೈರ್ಮಲ್ಯ, ಕೃಷಿ, ಜಲ ಸಂಪನ್ಮೂಲಗಳು, ಆರ್ಥಿಕ ಸೇರೆ​‍್ಡ ಮತ್ತು ಮೂಲಭೂತ ಸೌಕರ್ಯಗಳನ್ನು 2 ವರ್ಷಗಳಲ್ಲಿ ಒದಗಿಸಿ ಜನರ ಜೀವನ ಮಟ್ಟವನ್ನು ಸುಧಾರಿಸಿ ರಾಜ್ಯ ಅಭಿವೃದ್ಧಿ ಸೂಚ್ಯಾಂಕಗಳಿಗೆ ಸರಿಸಮನಾಗಿ ಪ್ರಗತಿ ಸಾಧಿಸುವ ಉದ್ದೇಶ ಹೊಂದಲಾಗಿದೆ ಎಂದರು. 

ವಿವಿಧ ಇಲಾಖೆಗಳ ಅಡಿಯಲ್ಲಿ ಸರಕಾರದ ಯೋಜನೆಗಳ ಮಳಿಗೆಗಳನ್ನು ತೆರೆದು ಯೋಜನೆಗಳ ಮಾಹಿತಿಯನ್ನು ನೀಡಲಾಯಿತು. 

ಜಿಲ್ಲಾ ಮಟ್ಟದ ಅಧಿಕಾರಿಗಳಾಧ ಸಿ.ಬಿ.ದೇವರಮನಿ, ಎ.ಬಿ.ಅಲ್ಲಾಪೂರ, ಕೆ.ಕೆ.ಚವ್ಹಾಣ, ಎನ್‌.ಎಚ್‌.ನಾಗೂರ, ಸಿ.ಬಿ.ಕುಂಬಾರ, ಡಾ.ಸತೀಶ ತಿವಾರಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರುಗಳು, ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು. ಖಾಸ್ಗತೇಶ್ವರ ಸಂಗೀತ ಶಾಲೆಯ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ಪ್ರತಿಜ್ಞಾ ವಿಧಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಿ.ಧರಿಕಾರ ಬೋಧಿಸಿದರು. ಡಿಡಿಡಬ್ಲೂಓ ರಾಜಶೇಖರ ಧೈವಾಡಿ ಸ್ವಾಗತಿಸಿದರು. ಶಿಕ್ಷಕ ಎಸ್‌.ಎಮ್‌.ಜಾಮಗೊಂಡಿ ನಿರೂಪಿಸಿದರು. ತಾಪಂ ಇಓ ಬಿ.ಆರ್‌.ಬಿರಾದಾರ ವಂದಿಸಿದರು. 


ಸುದ್ದಿ ಓದಿ