ಅಕ್ರಮ ಮರಳು ದಂಧೆ: ಬಡವರ ಗಾಯದ ಮೇಲೆ ಬರೆ
ರಾಣೇಬೆನ್ನೂರು 27: ವಾಣಿಜ್ಯ ನಗರಿ ಎಂದೇ ಪ್ರಖ್ಯಾತಿ ಪಡೆದ ಮತ್ತು ಆದಾಯ ತುಂಬುವಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿರುವ ರಾಣೇಬೆನ್ನೂರು ನಗರದಲ್ಲಿನ ಜನತೆ ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ನಿತ್ರಾಣರಾಗಿರುವುದು ಒಂದೆಡೆಯಾದರೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎಗ್ಗಿಲ್ಲದೇ ಮಟ್ಕಾ, ಇಸ್ಪೀಟ್ ಮತ್ತು ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿರುವುದು ಬಡವರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಆಕ್ರೋಶ ವ್ಯಕ್ತ ಪಡಿಸಿದರು.
ನಗರದ ಪರೀವೀಕ್ಷಣಾ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ತಮ್ಮ ಆಡಳಿತದ ಅವಧಿಯಲ್ಲಿ ಸಾಕಷ್ಟು ಭ್ರಷ್ಠಾಚಾರ ಆಗುತ್ತಿದ್ದರೂ ಕೂಡಾ ನೋಡಿ ನೋಡಿಲ್ಲದೇ ಹಾಗೆ ನಟನೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಇದಕ್ಕೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲಾ. ತಾಲೂಕಾ ಆಡಳಿತ ಸಂಪೂರ್ಣ ವಿಫಲವಾಗಿದೆ. ಕೂಡಲೇ ಶಾಸಕರು, ಸಂಬಂಧಿಸಿದ ಅಧಿಕಾರಿಗಳು ಒಂದು ವಾರದೊಳಗೆ ತಾವು ಅಕ್ರಮ ದಂಧೆಗೆ ಕಡಿವಾಣ ಹಾಕದೇ ಹೋದಲ್ಲಿ ಸಂಬಂಧಪಟ್ಟ ದಾಖಲೆಯೊಂದಿಗೆ ಸಿಡಿ ಸಮೇತ ಮೇಲಾಧಿಕಾರಿಗಳಿಗೆ ದೂರು ನೀಡಿ ಕಾನೂನು ರೀತಿ ಹೋರಾಟ ಮಾಡಲಾಗುವುದು ಎಂದು ಹನುಮಂತಪ್ಪ ಕಬ್ಬಾರ ಎಚ್ಚರಿಸಿದ್ದಾರೆ.
ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಈಗಾಗಲೇ ಗ್ರಾಮೀಣ ಭಾಗದಲ್ಲಿ ಕೂಲಿ ನಾಲಿ ಮಾಡಿ ಒಪ್ಪತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿಯಲ್ಲಿ ಇರುವಾಗ ಗ್ರಾಮೀಣ ಭಾಗದ ಯುವಕರು ಅಕ್ರಮ ಚಟುವಟಿಕೆಗಳಿಗೆ ಮಾರು ಹೋಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದರ ಜೊತೆಗೆ ಶಿಕ್ಷಣದಿಂದ ವಂಚಿತರಾಗುತ್ತಿರುವುದು ವಿಷಾಧನೀಯ ಸಂಗತಿ.
ತಾಲೂಕಿನ ಗ್ರಾಮೀಣ ಭಾಗದ ಪಾನಶಾಪ್, ಚಹದಂಗಡಿ, ಕಿರಾಣಿ ಅಂಗಡಿಗಳಲ್ಲಿ ಮಟ್ಕಾ, ಇಸ್ಪೀಟ ಮತ್ತು ಕೆಲವು ಮನೆಗಳಲ್ಲಿಯೂ ಅಕ್ರಮ ಮದ್ಯ ಮಾರಾಟದಿಂದ ಬಡ ಕುಟುಂಬಗಳು ಬೀದಿಗೆ ಬರುತ್ತಿವೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಪೋನ ಮೂಲಕ, ಖುದ್ದಾಗಿ ಭೇಟಿ ನೀಡಿ ಅಕ್ರಮ ದಂಧೆಯ ಬಗ್ಗೆ ಮನವರಿಕೆ ಮಾಡಿದರೂ ಯಾವುದೇ ರೀತಿ ಕ್ರಮ ಕೈಗೊಳ್ಳದಿರುವುದು ಖಂಡನೀಯವಾದುದು ಎಂದು ಲಮಾಣಿ ಎಚ್ಚರಿಸಿದ್ದಾರೆ.