ಇಂಡಿ

ಅಕ್ರಮವಾಗಿ ರಸಗೊಬ್ಬರ ದಾಸ್ತಾನು: ಅಧಿಕಾರಿಗಳಿಂದ ದಾಳಿ

ಅಕ್ರಮವಾಗಿ ರಸಗೊಬ್ಬರ ದಾಸ್ತಾನು: ಅಧಿಕಾರಿಗಳಿಂದ ದಾಳಿ
ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಿದ ಮನೆಯ ಮೇಲೆ ಕೃಷಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪರೀಶೀಲಿಸಿದರು.

ಇಂಡಿ22:  ಅಕ್ರಮವಾಗಿ ಗೊಬ್ಬರ ದಾಸ್ತಾನು ಮಾಡಿದ್ದ ಮನೆಯ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ರಸಗೊಬ್ಬರ ವಶಪಡಿಸಿಕೊಂಡ ಘಟನೆ ಇಂಡಿ ತಾಲ್ಲೂಕಿನ ಇಂಗಳಗಿ ಗ್ರಾಮದ ತೋಟದ ವಸತಿಯಲ್ಲಿ ಸೋಮವಾರ ನಡೆದಿದೆ. 

ಇಂಗಳಗಿ ಸರ್ವೇ ನಂಬರ್ 250/2 ರ ರುಕ್ಮುದ್ದಿನ್ ಬಾಗವಾನ್ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಗೊಬ್ಬರ ದಾಸ್ತಾನು ಮಾಡಲಾಗಿತ್ತು. ಭಾನುವಾರ ರಾತ್ರಿ 9ಘಂಟೆ ಸುಮಾರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ದೂರವಾಣಿ ಕರೆ ಮಾಡಿ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೂಡಲೆ ಕಾರ್ಯೋನ್ಮುಖರಾದ ಅಧಿಕಾರಿಗಳಾದ ಕೃಷಿ ಅಧಿಕಾರಿ (ತಾಂತ್ರಿಕ) ಬಸವರಾಜ ಬಿರಾದಾರ, ಸಹಾಯಕ ಕೃಷಿ ಅಧಿಕಾರಿ ಎಸ್‌.ಎಸ್‌. ಗುರುಬೆಟ್ಟಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ದೂರದಿಂದಲೆ ಅಧಿಕಾರಿಗಳು ಬರುತ್ತಿರುವುದನ್ನು ಕಂಡು ಅಲ್ಲಿನ ಜನ (ಕೂಲಿಕಾರರು) ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಅಂದಾಜು 3 ಲಕ್ಷ 13 ಸಾವಿರ ಮೌಲ್ಯದ 250 ಚೀಲ ಗೊಬ್ಬರವನ್ನು ವಶಪಡಿಸಿಕೊಂಡಿದ್ದು, ರಸಗೊಬ್ಬರದ ಖಾಲಿ ಚೀಲಗಳು, ಚೀಲ ಹೊಲೆಯುವ ಯಂತ್ರ ಸೇರಿದಂತೆ ಅಕ್ರಮವಾಗಿ ಬೆಳೆಗಳಿಗೆ ಸಿಂಪಡಿಸುವ ವಿವಿಧ ಬಗೆಯ ಓಷಧಿಗಳ ಖಾಲಿ ಡಬ್ಬಿಗಳನ್ನು ಜಪ್ತುಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರಾತ್ರಿಯಿಡೀ ಈರ್ವರು ಪೊಲೀಸ್ ಸಿಬ್ಬಂದಿಗಳೊಂದಿಗೆ ಕೃಷಿ ಅಧಿಕಾರಿಗಳು ದಾಸ್ತಾನು ಮಾಡಿದ ಗೊಬ್ಬರವನ್ನು ಕಾಯುತ್ತ ಕುಳಿತಿದ್ದು ಬೆಳಿಗ್ಗೆ 11 ಘಂಟೆಗೆ ವಿಜಯಪುರದಿಂದ ಕೃಷಿ ನಿಗ್ರಹ ದಳದ ಅಧಿಕಾರಿಗಳು ಹಾಗೂ ಉಪ ಕೃಷಿ ನಿರ್ದೇಶಕರು ಸ್ಥಳಕ್ಕೆ ಆಗಮಿಸಿ ಗೊಬ್ಬರ ಪರೀಶೀಲಿಸಿ ಜಪ್ತು ಮಾಡಿಕೊಂಡಿದ್ದಾರೆ. 

ಈ ಕುರಿತು ಇಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಉಪ ಕೃಷಿ ನಿರ್ದೇಶಕ 2 ಇಂಡಿಯ ಚಂದ್ರಕಾಂತ ಪವಾರ,  ಕೃಷಿ ನಿಗ್ರಹದಳದ ಅಧಿಕಾರಿಗಳಾದ ಸಹಾಯಕ ಕೃಷಿ ನಿರ್ದೇಶಕ ಜಾರಿದಳ 1ರ ಎ.ಪಿ. ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಜಾರಿದಳ2ನ ರೇಷ್ಮಾ ಸುತಾರ್, ಕೃಷಿ ಅಧಿಕಾರಿ (ತಾಂತ್ರಿಕ) ಬಸವರಾಜ ಬಿರಾದಾರ, ಸಹಾಯಕ ಕೃಷಿ ಅಧಿಕಾರಿ ಎಸ್‌.ಎಸ್‌. ಗುರುಬೆಟ್ಟಿ  ಮತ್ತಿತರರು ಸೇರಿಕೊಂಡು ರಸಗೊಬ್ಬರ ಜಪ್ತುಪಡಿಸಿಕೊಂಡಿದ್ದಾರೆ. 

ತಾಲೂಕಿನಲ್ಲಿ ಅಕ್ರಮವಾಗಿ ರಸಗೊಬ್ಬರ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ರೈತರಿಗೆ ಮೋಸ ಮಾಡುತ್ತಿರುವ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಅಕ್ರಮ ಗೊಬ್ಬರ ತಯಾರಿಸುವವರನ್ನು ಪತ್ತೆ ಹಚ್ಚಿ ರೈತರಿಗೆ ಮೋಸವಾಗದಂತೆ ತಡೆಯಬೇಕು. 

ಗುರಪ್ಪ ಅಗಸರ ರೈತ ಮುಖಂಡ ರೂಗಿ. 

ಇಂಗಳಗಿ ಗ್ರಾಮದ ತೋಟದ ವಸತಿಯಲ್ಲಿ ಅಕ್ರಮವಾಗಿ ಗೊಬ್ಬರ ದಾಸ್ತಾನು ಮಾಡುತ್ತಿರುವ ಖಚಿತ ಮಾಹಿತಿ ಲಭ್ಯವಾದ್ದರಿಂದ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಸ್ಥಳಕ್ಕೆ ನಾವೂ ಸಹ ಬಂದು ಪರೀಶೀಲಿಸಿದ್ದು ಗೊಬ್ಬರದ ಸ್ಯಾಂಪಲ್ ಕಳುಹಿಸಿ ಗೊಬ್ಬರ ಓರಿಜಿನಲ್ಲೋ, ಡೂಪ್ಲೀಕೇಟೋ ಎಂದು ವರದಿ ಬಂದ ನಂತರ ತಿಳಿಯುತ್ತದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಧ್ಯ ಗೊಬ್ಬರವನ್ನು ನಮ್ಮ ವ್ಯಾಪ್ತಿಗೆ ತೆಗೆದುಕೊಂಡು ಜಮೀನು ಮಾಲೀಕರ ಮೇಲೆ ಎಫ್‌.ಐ.ಆರ್‌. ದಾಖಲಿಸಿದ್ದೇವೆ 

ಉಪ ಕೃಷಿ ನಿರ್ದೇಶಕ 2, ಚಂದ್ರಕಾಂತ ಪವಾರ. 

ಸುದ್ದಿ ಓದಿ