ಬೈಲಹೊಂಗಲ

ಪರಿಹಾರ ಧನ ವಿತರಣೆಯಲ್ಲಿ ಅಕ್ರಮ: ಅಧಿಕಾರಿಗಳ ಅಮಾನತ್ತಿಗೆ ಆಗ್ರಹ

ಪರಿಹಾರ ಧನ ವಿತರಣೆಯಲ್ಲಿ ಅಕ್ರಮ: ಅಧಿಕಾರಿಗಳ ಅಮಾನತ್ತಿಗೆ ಆಗ್ರಹ

ಲೋಕದರ್ಶನ ವರದಿ 


ಬೈಲಹೊಂಗಲ 13:  2019, 2021ನೇ ಸಾಲಿನ ತಾಲೂಕಿನ ಬುಡ್ರಕಟ್ಟಿ ಗ್ರಾಪಂ.ವ್ಯಾಪ್ತಿಯಲ್ಲಿ ವರುಣನ ಅರ್ಭಟಕ್ಕೆ  ಹಾನೀಗೀಡಾದ ಮನೆಗಳಿಗೆ ಸರಕಾರದಿಂದ ವಿತರಿಸಲಾಗುವ ಪರಿಹಾರ ಧನದಲ್ಲಿ ಆಗಿರುವ ಅಕ್ರಮವನ್ನು, ಅಧಿಕಾರಿಗಳ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ, ಬುಡ್ರಕಟ್ಟಿ ಗೆಳೆಯರ ಬಳಗದ ವತಿಯಿಂದ  ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನೆ  ಮೂಲಕ ಉಪವಿಭಾಗಾಧಿಕಾರಿಗಳ ಕಚೇರಿ  ಮುಂಭಾಗದಲ್ಲಿ ಅನಿರ್ದಿಷ್ಟಕಾಲ ಸತ್ಯಾಗ್ರಹ ಹಮ್ಮಿಕೊಂಡು ಅಧಿಕಾರಿಗಳ ವಿರುದ್ದ ಹಲಗೆ ಬಾರಿಸುವ ಮೂಲಕ ಧಿಕ್ಕಾರ ಎಂದು ಘೋಷಣೆ ಕೂಗಿದರು.  

             ಬುಡ್ರಕಟ್ಟಿ ಗ್ರಾಮದ ಯುವ ಮುಖಂಡ ಸಿದ್ದಾರೂಡ ಹೊಂಡಪ್ಪನವರ, ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೊಲಕಾರ ಮಾತನಾಡಿ,  2019 - 20 ನೇ ಸಾಲಿನ ಬುಡರಕಟ್ಟಿ ಗ್ರಾಪಂ ವ್ಯಾಪ್ತಿಯ ಬುಡರಕಟ್ಟಿ, ಬಿದರಗಡ್ಡಿ ಗ್ರಾಮಗಳಲ್ಲಿ ವರುನ ಅರ್ಭಟಕ್ಕೆ 351 ಮನೆಗಳಿಗೆ ಹಾನಿಯಾಗಿದ್ದು, ಕೆಲ ಕುಟುಂಬಸ್ಥರಿಗೆ ವಾಸಿಸಲಿಕ್ಕೆ ಸೂರು ಇಲ್ಲದೇ ಗುಡಿ, ಗುಂಡಾರ, ಜೊಪಡ ಪಟ್ಟಿ, ಉಗ್ರಾಣಗಳಲ್ಲಿ ವಾಸ ಮಾಡುವ ಪರಿಸ್ಥಿತಿ ಇದ್ದು, ಗ್ರಾಪಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದಿಂದ ಅರ್ಹ ಫಲಾನುಭವಿಗಳು ಪರಿಹಾರದಿಂದ ವಂಚಿತವಾಗಿದ್ದು ಈ ಕುರಿತು  ಬುಡ್ರಕಟ್ಟಿ ಗ್ರಾಪಂ.ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಗ್ರಾಪಂ.ಮುತ್ತಿಗೆ ಹಾಕಲಾಗಿತ್ತು. ಅಲ್ಲದೆ ನ.11 ರಂದು ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ಮಹಿಳೆಯರು, ವಯೋವೃದ್ದರು, ಕರವೇ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸಿ ಅಕ್ರೋಶ ವ್ಯಕ್ತಪಡಿಸಲಾಗಿತ್ತು. ಈ ಕುರಿತು ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಡಾ.ಶಶಿಧರ ಬಗಲಿ, ಶಾಸಕ ಮಹಾಂತೇಶ ಕೌಜಲಗಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದಾಗ ಅವರ ಮಾತಿಗೆ ಬೆಲೆ ಕೊಟ್ಟು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ಒಂದು ತಿಂಗಳು ಗತಿಸಿದರೂ ಕೂಡ ನಮ್ಮ ಹೋರಾಟಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲವೆಂದು ದೂರಿದರು.  

   ಕೂಡಲೇ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅಹೋರಾತ್ರಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. 

  ಪ್ರತಿಭಟನಾನಿರತ ಸ್ಥಳಕ್ಕೆ ಎಸಿ ಭೇಟಿ ನೀಡಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಎರಡು ದಿನ ಕಾಲಾವಕಾಶ ಕೊಡಿ ಎಂದು ಕೋರಿಕೊಂಡಾಗ ಪ್ರತಿಭಟನಾಕಾರರು ಈ ಹಿಂದೆ ನಾವು 15 ದಿನ ಕಾಲಾವಕಾಶ ನೀಡಿದ್ದೆವೆ ಮತ್ತೇ ನಿಮಗೆ ಸಮಯ ನೀಡುವುದಿಲ್ಲ. ನಮ್ಮ ಬೇಡಿಕೆಯನ್ನು ಈಡೇರಸಿಬೇಕೆಂದು ಒತ್ತಾಯಿಸಿ, ಪ್ರತಿಭಟನೆ ಅಹೋರಾತ್ರಿ ಮುಂದುವರೆಯಲಿದೆ ಎಂದರು. 

ಮಧ್ಯಾಹ್ನ ಊಟ -- ಪ್ರತಿಭಟನಾಕಾರರು ಮುಂಜಾನೇಯೆ ತಮ್ಮ ಗಂಟು ಮೂಟೆಗಳನ್ನು ಕಟ್ಟಿಕೊಂಡು ಪ್ರತಿಭಟನೆಗೆ ಆಗಮಿಸಿದ್ದು ಮಧ್ಯಾಹ್ನ ಉಪವಿಭಾಗಾಧಿಕಾರಿ ಕಾರ್ಯಾಲಯದ ಮುಂದೆ ಸಾಲಾಗಿ ಕುಳಿತು ಊಟ ಸವಿದು ಮಹಿಳೆಯರು ಸೋಬಾನ ಪದ ಹಾಡುತ್ತ ಕಾಲ ಕಳೆದರು. 

   ಮಹಾಂತೇಶ ಕರೀಕಟ್ಟಿ, ಮಹಾಂತೇಶ ಬಾಜಿ, ಮಲ್ಲಯ್ಯ ಪೂಜೇರ, ಶಶಿಕುಮಾರ ಪಾಟೀಲ, ಬಸಯ್ಯ ಕಾಡಯ್ಯನವರ, ಮಂಜುನಾಥ ಇಂಗಳಗಿ, ಕಮಲವ್ವ ಹುಗ್ಗಿ, ಪಾರಮ್ಮ ಹುಗ್ಗಿ, ಅನ್ನಪೂರ್ಣ ನಿಕ್ಕಮ್ಮನವರ, ಶಂಕರ ಕಲ್ಯಾಣದ, ಪಾರ್ವತೆವ್ವ ಮಠಪತಿ, ಭೀಮವ್ವ ಬಂಡಿವಡ್ಡರ ಮುಂತಾದವರು ಇದ್ದರು. 


ಸುದ್ದಿ ಓದಿ