ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮೇಲಿನ ನಿಷೇಧ ವಿಸ್ತರಣೆ
ನವದೆಹಲಿ, ಅ 28 : ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳು ಇನ್ನೂ ಒಂದು ತಿಂಗಳು ಪುನರಾರಂಭಗೊಳ್ಳುವ ಸಾಧ್ಯತೆಯಿಲ್ಲ. ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಹಾರಾಟದ ಮೇಲಿನ ಅಮಾನತ್ತನ್ನು 2020 ನವಂಬರ್ 30 ರವರೆಗೆ ವಿಸ್ತರಿಸುವುದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಬುಧವಾರ ಪ್ರಕಟಿಸಿದೆ.
ಯುರೋಪ್ ದೇಶಗಳಲ್ಲಿ ಮತ್ತೊಮ್ಮೆ ಕೊರೊನಾ ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಡಿಜಿಸಿಎ ತಿಳಿಸಿದೆ. ಆದರೆ, ನಿಷೇಧ ಎಲ್ಲಾ ರೀತಿಯ ಅಂತರರಾಷ್ಟ್ರೀಯ ಸರಕು ಸೇವೆಗಳಿಗೆ ಹಾಗೂ ಅನುಮತಿಸಲಾದ ವಿಶೇಷ ವಿಮಾನ ಸೇವೆಗಳಿಗೆ ಅನ್ವಯಿಸುವುದಿಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ.
ಆದರೆ, ಆಯ್ದ ಕೆಲವು ಮಾರ್ಗಗಳಲ್ಲಿ ಮಾತ್ರ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನಯಾನಕ್ಕೆ ಅವಕಾಶ ನೀಡುವುದಾಗಿ ಡಿಜಿಸಿಎ ತಿಳಿಸಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷದ ಮಾರ್ಚ್ 23 ರಿಂದ ಅಂತಾರಾಷ್ಟ್ರೀಯ ವಿಮಾನಯಾನವನ್ನು ಡಿಜಿಸಿಎ ನಿಷೇಧಿಸಿತು. ಆದರೂ ಕೊರೊನಾ ಹರಡುವಿಕೆ ಮಾತ್ರ ಕಡಿಮೆಯಾಗದ ಕಾರಣ ನಿಷೇಧವನ್ನು ಹಲವು ಬಾರಿ ವಿಸ್ತರಿಸಲಾಗಿದೆ. ಇತ್ತೀಚಿಗೆ ವಿಧಿಸಿದ್ದ ನಿಷೇಧ ಅಕ್ಟೋಬರ್ 31 ಕ್ಕೆ ಮುಕ್ತಾಯಗೊಳ್ಳುವ ಹಿನ್ನಲೆಯಲ್ಲಿ ಮತ್ತೊಮ್ಮೆ ನಿಷೇಧ ವಿಸ್ತರಿಸಲಾಗಿದೆ.