ಅಂಚೆ ನೌಕರರ ಬೇಡಿಕೆ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆಯುವೆ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ
ಬೆಳಗಾವಿ: ದೇಶದ ಅಭಿವೃದ್ಧಿಯಲ್ಲಿ ಅಂಚೆ ಇಲಾಖೆಯ ಪಾತ್ರ ಮಹತ್ವದ್ದಾಗಿದ್ದು, ಅಂಚೆ ನೌಕರರ ಸಮಸ್ಯೆಗಳು ಹಾಗೂ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭರವಸೆ ನೀಡಿದರು. ನಗರದ ನೆಹರು ನಗರದ ಕನ್ನಡ ಭವನದಲ್ಲಿ ಭಾನುವಾರ ನಡೆದ ಅಖಿಲ ಭಾರತ ಅಂಚೆ ನೌಕರರ ಸಂಘ ಹಾಗೂ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘಗಳ 33ನೇ ಜಂಟಿ ದ್ವೈವಾರ್ಷಿಕ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟಿಷರ ಕಾಲದಿಂದಲೂ ಅಂಚೆ ಇಲಾಖೆ ದೇಶಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದು, ಅಂಚೆ ನೌಕರರು ಜನಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ತಂತ್ರಜ್ಞಾನ ಅಭಿವೃದ್ಧಿಯಾದರೂ ಅಂಚೆ ಇಲಾಖೆಯ ಮಹತ್ವ ಕಡಿಮೆಯಾಗಿಲ್ಲ. ಸರ್ಕಾರದ ವಿವಿಧ ಜನಪರ ಯೋಜನೆಗಳು, ಉಳಿತಾಯ ಯೋಜನೆಗಳು, ಬಾಂಡ್ಗಳು ಹಾಗೂ ಠೇವಣಿ ಸೇವೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವಲ್ಲಿ ಅಂಚೆ ಸಿಬ್ಬಂದಿಯ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಅಂಚೆ ನೌಕರರ ಸಮಸ್ಯೆಗಳು ಹಾಗೂ ಬೇಡಿಕೆಗಳ ಕುರಿತು ಸಂಘದ ಮುಖಂಡರು ತಮ್ಮ ಗಮನಕ್ಕೆ ತಂದಿದ್ದು, ಅವುಗಳನ್ನು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಕೇಂದ್ರ ರಾಜ್ಯ ಸಚಿವ ಎಂ.ಎಸ್. ಅನಿಲ್ ಕುಮಾರ್ ಅವರ ಗಮನಕ್ಕೆ ತಂದು ಅಗತ್ಯ ಕ್ರಮಕ್ಕೆ ಮನವಿ ಮಾಡುವುದಾಗಿ ತಿಳಿಸಿದರು. ಅಂಚೆ ನೌಕರರ ನ್ಯಾಯಯುತ ಬೇಡಿಕೆಗಳಿಗೆ ತಮ್ಮ ಬೆಂಬಲವಿದ್ದು, ಅವರ ಹಿತಾಸಕ್ತಿ ರಕ್ಷಣೆಗೆ ಜನಪ್ರತಿನಿಧಿಯಾಗಿ ನಿರಂತರವಾಗಿ ಪ್ರಯತ್ನಿಸುವುದಾಗಿ ಹೇಳಿದರು.
ಅಖಿಲ ಭಾರತ ಅಂಚೆ ನೌಕರರ ಸಂಘದ ಬೆಳಗಾವಿ ವಿಭಾಗದ ಅಧ್ಯಕ್ಷ ಎಚ್.ವಿ. ರಾಜ್ಕುಮಾರ್ ಮಾತನಾಡಿ, ಗುರಿ ತಲುಪುವ ಒತ್ತಡದ ಹೆಸರಿನಲ್ಲಿ ಅಧಿಕಾರಿಗಳು ಭಾನುವಾರವೂ ಸಭೆಗಳಿಗೆ ಕರೆಯುವುದು ಹಾಗೂ ನೋಟಿಸ್ ನೀಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಕಠಿಣ ಕ್ರಮಗಳು ದೇಶದ ಇತರೆ ಭಾಗಗಳಲ್ಲಿ ಇಲ್ಲದಿದ್ದರೂ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ನಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಸಿಹೆಚ್ಕ್ಯು ಮತ್ತು ವಲಯ ಸಂಘಟನೆಯ ನೇತೃತ್ವದಲ್ಲಿ ಜುಲೈ 14, 2026ರಂದು ಬೆಂಗಳೂರಿನಲ್ಲಿ ಬೃಹತ್ ಸಭೆ ಆಯೋಜಿಸಲಾಗಿದೆ. ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಅಖಿಲ ಭಾರತ ಅಂಚೆ ನೌಕರರ ಸಂಘದ ವಲಯ ಅಧ್ಯಕ್ಷ ರವಿ ಪಾಟೀಲ್ ಮಾತನಾಡಿ, ಜಿಡಿಎಸ್ ಸಿಬ್ಬಂದಿಗೆ ಬೋನಸ್ ದೊರಕಲು ಹಾಗೂ ಜಿಡಿಎಸ್ನಿಂದ ಪೋಸ್ಟ್ಮನ್, ಪಿಎ, ಎಂಟಿಎಸ್ ಮತ್ತು ಆರ್ಎಂಎಸ್ ಹುದ್ದೆಗಳಿಗೆ ಬಡ್ತಿ ಅವಕಾಶ ಕಲ್ಪಿಸಲು ಸಂಘಟನೆಗಳ ಹೋರಾಟ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಜಂಟಿ ಅಧ್ಯಕ್ಷತೆಯನ್ನು ಧರ್ಮೇಂದ್ರ ಆರ್. ಜ್ಯಾಯಿ, ಕಿಶೋರ ದೇಶಪಾಂಡೆ ಹಾಗೂ ರಾಮಾ ಆನಂದಾಚೆ ವಹಿಸಿದ್ದರು. ಇದೇ ವೇಳೆ ಅಂಚೆ ಇಲಾಖೆ ಹಾಗೂ ಸಂಘಟನೆಗೆ ಸೇವೆ ಸಲ್ಲಿಸಿದ ಮಾಜಿ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಅಂಚೆ ಅಧೀಕ್ಷಕ ಬಸವರಾಜ ವಾಲಿಕಾರ, ಉಪ ಅಂಚೆ ಅಧೀಕ್ಷಕ ಶ್ರೀಕಾಂತ ಮುರನಾಳ ಸೇರಿದಂತೆ ಅಂಚೆ ಇಲಾಖೆಯ ಅಧಿಕಾರಿಗಳು, ಸಂಘದ ಮುಖಂಡರು ಹಾಗೂ ನೌಕರರು ಉಪಸ್ಥಿತರಿದ್ದರು.