ರಾಷ್ಟ್ರೀಯ

ಡಿ 4 ರಂದು ತಮಿಳುನಾಡು ಕರಾವಳಿ ದಾಟಲಿರುವ ‘ಬುರೆವಿ’ ಚಂಡಮಾರುತ

ಡಿ 4 ರಂದು ತಮಿಳುನಾಡು ಕರಾವಳಿ ದಾಟಲಿರುವ ‘ಬುರೆವಿ’ ಚಂಡಮಾರುತ

ಚೆನ್ನೈ,ಡಿಸೆಂಬರ್ 2 : ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ  ಉಂಟಾಗಿರುವ 'ಬುರೆವಿ' ಹೆಸರಿನ ಚಂಡಮಾರುತ ನಾಳೆ ತಮಿಳುನಾಡು ಕರಾವಳಿ ಸಮೀಪಿಸಲಿದ್ದು, ಡಿ 4ರಂದು ಬೆಳಿಗ್ಗೆ ಕನ್ಯಾಕುಮಾರಿ ಮತ್ತು ಪಂಬನ್‍ ನಡುವಿನ ದಕ್ಷಿಣ ಕರಾವಳಿ ದಾಟಲಿದೆ.

ಇಲ್ಲಿನ ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ನೀಡಿ ಹೊರಡಿಸಿರುವ ಸಂಚಿಕೆಯಂತೆ,  ಬುಧವಾರ ಚಂಡಮಾರುತ ಪಶ್ಚಿಮ-ವಾಯವ್ಯ ದಿಕ್ಕಿಗೆ ಸಾಗಿದೆ. ಕಳೆದ ಆರು ಗಂಟೆಗಳಲ್ಲಿ 15 ಕಿ.ಮೀ ವೇಗದಲ್ಲಿ ಸಾಗುತ್ತಿದ್ದು ಬಂಗಾಳಕೊಲ್ಲಿಯಲ್ಲಿ ಶ್ರೀಲಂಕಾದ ಟ್ರಿಂಕಾಮಲಿಯಿಂದ ಪೂರ್ವ-ಆಗ್ನೇಯಕ್ಕೆ 240 ಕಿ.ಮೀ. ದೂರದಲ್ಲಿ  ಪಂಬನ್‌ ನಿಂದ ಪೂರ್ವ-ಆಗ್ನೇಯಕ್ಕೆ 470 ಕಿ.ಮೀ ದೂರದಲ್ಲಿ ಮತ್ತು ಕನ್ಯಾಕುಮಾರಿಯಿಂದ ಪೂರ್ವ-ಈಶಾನ್ಯಕ್ಕೆ 650 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ.

ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು,

ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಸಾಗಿ, 90 ರಿಂದ 100 ಕಿ ಮೀ ವೇಗದ ಗಾಳಿಯೊಂದಿಗೆ ಇಂದು ಸಂಜೆ ಇಲ್ಲವೇ ನಾಳೆ ಬೆಳಿಗ್ಗೆ ಶ್ರೀಲಂಕಾ ಕರಾವಳಿಯ ಟ್ರಿಂಕಾಮಲಿಯ ಉತ್ತರ ಭಾಗವನ್ನು ಪ್ರವೇಶಿಸಲಿದೆ.  ನಂತರ ಸುಮಾರು ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ. ನಾಳೆ ಗಲ್ಫ್ ಆಫ್ ಮನ್ನಾರ್ ಮತ್ತು ಪಕ್ಕದ ಕೊಮೊರಿನ್ ಪ್ರದೇಶಕ್ಕೆ ಬೀಸಲಿದೆ.

ನಾಳೆ ಮಧ್ಯಾಹ್ನ 80ರಿಂದ 90 ಕಿ.ಮೀ ವೇಗದ ಗಾಳಿಯೊಂದಿಗೆ ಚಂಡಮಾರುತ ಪಂಬನ್‌ ಗೆ ಸಮೀಪಿಸಲಿದೆ. ಡಿ 4ರಂದು 80ರಿಂದ 90 ಕಿ.ಮೀ ವೇಗದ ಗಾಳಿಯೊಂದಿಗೆ ಪಂಬನ್‍ ಮತ್ತು ಕನ್ಯಾಕುಮಾರಿ ನಡುವಿನ ಕರಾವಳಿಯನ್ನು ದಾಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಮಿಳುನಾಡು ದಕ್ಷಿಣ ಕರಾವಳಿ ಜಿಲ್ಲೆಗಳಲ್ಲಿ ನಾಳೆ ರಾತ್ರಿಯಿಂದ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.

ಸುದ್ದಿ ಓದಿ