ಪ್ರೌಢಶಾಲಾ ಮಕ್ಕಳಿಗಾಗಿ ಹಾಸ್ಯ ಭಾಷಣ ಸ್ಪರ್ಧೆಸ್ಪರ್ಧೆಗಳು ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುತ್ತವೆ: ಡಾ. ಅರವಿಂದ ಕುಲಕರ್ಣಿ
ಲೋಕದರ್ಶನ ವರದಿ
ಬೆಳಗಾವಿ 10 : ಸಂಗೀತ, ಸಾಹಿತ್ಯ, ನಾಟಕಗಳ ಕಾರ್ಯಕ್ರಮಗಳತ್ತ ಇಂದಿನ ಯುವ ಪೀಳಿಗೆ ಅಭಿರುಚಿಯನ್ನು ಕಳೆದುಕೊಳ್ಳುತ್ತಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಿರುವ ಹಾಸ್ಯಕೂಟವು ಯುವಪಡೆಯನ್ನು ಸಾಂಸ್ಕೃತಿ ಲೋಕದತ್ತ ಮುಖ ಮಾಡಿಸುತ್ತಿದೆ. ಅಲ್ಲದೇ ಸ್ಪರ್ಧೆಗಳು ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸುತ್ತವೆ ಎಂದು ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ ಇಂದಿಲ್ಲಿ ಹೇಳಿದರು. ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರೌಢಶಾಲಾ ಮಕ್ಕಳಿಗಾಗಿ ಹಾಸ್ಯ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು.
ಪ್ರಾಯೋಜಕರಾಗಿದ್ದ ರಂಗಸಂಪದದ ಡಾ. ಅರವಿಂದ ಕುಲಕರ್ಣಿಯವರು ಮಾತನಾಡುತ್ತ ಮೇಲಿನಂತೆ ಅಭಿಪ್ರಾಯ ಪಟ್ಟರು. ಪ್ರತಿ ತಿಂಗಳು ಎರಡನೇ ಶನಿವಾರದಂದು ತಪ್ಪದೇ ಹಾಸ್ಯಕ್ಕೆ ಸಂಬಂಧಿಸಿದ ಹರಟೆಗಳ ವಾಚನ, ವ್ಯಂಗಚಿತ್ರಗಳ ಪ್ರದರ್ಶನ, ಹೀಗೆ ವೈವಿದ್ಯಮಯ ಕಾರ್ಯಕ್ರಮಗಳನ್ನು ನೀಡುತ್ತ ಬಂದಿರುವ ಹಾಸ್ಯಕೂಟ ಈಗ 12 ವರ್ಷಗಳನ್ನು ಪುರೈಸಿ ಮುನ್ನಡೆಯುತ್ತಿರುವುದು ಕರ್ನಾಟಕದಲ್ಲಿ ನಿರ್ಮಿಸಿದ ಒಂದು ದಾಖಲೆಯೆಂದೇ ಹೆಳಬಹುದೆಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಲೇಖಕರಾದ ಪಿ. ಬಿ. ಸ್ವಾಮಿಯವರು ಹಾಸ್ಯಕೂಟ ಕಾರ್ಯಗಳನ್ನು ಮನದುಂಬಿ ಪ್ರಶಂಶಿಸಿದರು.
ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳನ್ನು ಉದೇಶಿಸಿ ಮಾತನಾಡುತ್ತ ಸ್ಪರ್ಧೆಯಲ್ಲಿ ಸೋಲು, ಗೆಲವುಗಳನ್ನು ಸಮಾನಾಗಿ ಸ್ವೀಕರಿಸಬೇಕು ಎಂದು ಹೇಳಿದರು. ಸಾಹಿತ್ಯ ಭವನದ ವಿಶ್ವಸ್ತ ಮಂಡಳಿ ಗೌರವ ಕಾರ್ಯದರ್ಶಿ ರಾಮಚಂದ್ರ ಕಟ್ಟಿ, ಬಿ.ಎ. ಪಾಟೀಲ, ತವನಪ್ಪ ದೇಸಾಯಿ ಉಪಸ್ಥಿತರಿದ್ದರು. ಲೇಖಕ ಪಿ.ಬಿ. ಸ್ವಾಮಿ, ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ವಿ.ಎನ್. ಜೋಶಿ, ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಡಾ. ಜಯಂತ ಕಿತ್ತೂರ ಇವರು ವಿಜೇತರಿಗೆ ಬಹುಮಾನ ವಿತರಿಸಿದರು. ಕೆ.ಎಲ್.ಇ. ಪ್ರೌಢಶಾಲೆಯ ಕುಮಾರ ನಿಖಿಲ ಮಾಶೆಟ್ಟಿ (ಪ್ರಥಮ),
ಬಿ. ಕೆ. ಮಾಡೆಲ್ ಪ್ರೌಢಶಾಲೆಯ ಕುಮಾರಿ ಕಾವ್ಯಶ್ರೀ ಸವದತ್ತಿ (ದ್ವಿತೀಯ) ಮತ್ತು ಮಾವಿನಕಟ್ಟಿ ಸರಕಾರಿ ಪ್ರೌಢಶಾಲೆಯ ಕುಮಾರಿ ಸಂಜೀವಿನಿ ಕೋಲಕಾರ (ತೃತೀಯ) ಇವರು ನಗದು ಬಹುಮಾನ ಮತ್ತು ಪ್ರಮಾಣ ಪತ್ರ ಪಡೆದರು. ಕೆ.ಜಿ.ಎಸ್. ನಂ. 5 ಪ್ರೌಢಶಾಲೆಯ ಕು. ಶ್ರೇಯಾ ಬೇವಿನಗಿಡದ ಮತ್ತು ಕು. ಸ್ಪೂರ್ತಿ ಕಾಮಕರ, ಬೆಳಗಾವಿ ಸರಕಾರಿ ಸರಸ್ವತಿ ಬಾಲಕಿಯರ ಪ್ರೌಢಶಾಲೆಯ ಕು. ವೈಷ್ಣವಿ ಭಸ್ಮೆ ಮತ್ತು ಕು. ರಾಜೇಶ್ವರಿ ಮತ್ತಿಕೊಪ್ಪ ಅಲ್ಲದೇ ಹಡಗಿನಹಾಳದ ಸರಕಾರಿ ಪ್ರೌಢಶಾಲೆ ಕು. ಪ್ರಜ್ವಲ ಜಕಬಾಳ ಪ್ರಮಾಣ ಪತ್ರ ಪಡೆದುಕೊಂಡರು. ಅರವಿಂದ ಹುನಗುಂದ ಮತ್ತು ತಾನಾಜಿ ಸ್ಪರ್ಧೆಯ ನಿರ್ಣಾಯಕರಾಗಿದ್ದರು.