ಸಿಂಧಗಿ

ಆರ್ಥಿಕ ಲಾಭ, ಹಲವಾರು ದೃಷ್ಠಿಕೋನದಿಂದ ಮಾನವ ಕಳ್ಳ ಸಾಗಾಣಿಕೆ: ಮೊಗೇರ

ಆರ್ಥಿಕ ಲಾಭ, ಹಲವಾರು ದೃಷ್ಠಿಕೋನದಿಂದ ಮಾನವ ಕಳ್ಳ ಸಾಗಾಣಿಕೆ: ಮೊಗೇರ

ಸಿಂದಗಿ 01: ಮಕ್ಕಳು ಮತ್ತು ಮಹಿಳೆಯರನ್ನು ಅಪಹರಿಸಿ ಕಾನೂನುಬಾಹಿರ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವುದು ಬೇಸರದ ಸಂಗತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ನಾಗೇಶ ಮೊಗೇರ ಹೇಳಿದರು. 

ಮಂಗಳವಾರದಂದು ಪಟ್ಟಣದ ಶ್ರೀಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಸಿಂದಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಹಾಗೂ ಶ್ರೀಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡ ಮಾನವ ಕಳ್ಳ ಸಾಗಾಣಿಕೆ ವಿರೋಧಿ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಲಾಭದ ಜೊತೆಗೆ ಹಲವಾರು ದೃಷ್ಠಿಯನ್ನಿಟ್ಟುಕೊಂಡು ಮಾನವ ಸಾಗಾಣಿಕೆ ನಡೆಯುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳು ಜಾಗೃತರಾಗಿರಬೇಕು. ಅನಗತ್ಯ ವಿಚಾರಗಳನ್ನು ಯಾರೂ ಮಾಡಬಾರದು. ನಮ್ಮನ್ನು ನಾವು ಸಂರಕ್ಷಣೆ ಮಾಡಿಕೊಳ್ಳಬೇಕು ಎಂದರು. 

ಎಸಿಡಿಪಿಒ ಎಸ್‌.ಎನ್‌.ಕೋರವಾರ ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ ಅನೇಕ ಕಾಯ್ದೆ ಕಾನೂನುಗಳಿವೆ. ಅವುಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯ. ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಮಹಿಳೆಯರು ಅರಿತುಕೊಂಡಿರಬೇಕು. ಮಹಿಳಾ ಸಹಾಯವಾಣಿ ಮೂಲಕ ಮಕ್ಕಳನ್ನು ಮತ್ತು ಮಹಿಳೆಯರನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಮಕ್ಕಳ ಮೇಲಾಗುವ ದೌರ್ಜನ್ಯ, ಬಾಲ್ಯ ವಿವಾಹ, ಭಿಕ್ಷಾಟನೆದಂತಹ ಹಲವಾರು ಅಹಿತರಕ ಘಟನೆಗಳನ್ನು ಎಲ್ಲರೂ ಸೇರಿಕೊಂಡು ತಡೆಗಟ್ಟೋಣ ಎಂದು ಉಪನ್ಯಾಸ ನೀಡಿದರು. 

ವಕೀಲರ ಸಂಘದ ತಾಲೂಕಾಧ್ಯಕ್ಷ ಎಸ್‌.ಬಿ.ಪಾಟೀಲ, ಅಪರ ಸರಕಾರಿ ವಕೀಲ ಭೀ.ಜಿ.ನೆಲ್ಲಗಿ, ಪ.ಪೂ ಕಾಲೇಜಿನ ಪ್ರಾಚಾರ್ಯ ಎಮ್‌.ಎಸ್‌.ಹೈಯಾಳಕರ ಮಾತನಾಡಿ, ಹಿಂದಿನ ದಿನಮಾನಗಳಲ್ಲಿ ಸರಕು ಸಮಾನುಗಳ ಸಾಗಾಣಿಕೆ, ಪ್ರಾಣಿ ಸಾಗಾಣಿಕೆ ಹೆಚ್ಚಿದ್ದವು. ಆದರೆ ಇದೀಗ ಮಾನವ ಸಾಗಾಣಿಕೆ ನಮ್ಮ ಸಮಾಜದಲ್ಲಿ ಬೃಹತ್ ಸಮಸ್ಯೆಯಾಗಿ ಬೆಳದಿದೆ. ಇದರ ಬಗ್ಗೆ ನಾವು ನೀವು ಅರಿತುಕೊಳ್ಳಬೇಕಾಗಿರುವುದು ಅತ್ಯಗತ್ಯ ಎಂದು ಹೇಳಿದರು. 

ಸಹಾಯಕ ಶಿಶು ಅಭಿವೃದ್ಧಿ ಯಫಜನಾಧಿಕಾರಿ ಎಸ್‌.ಎನ್‌.ಕೋರವಾರ ಪ್ರತಿಜ್ಞಾವಿಧಿ ಬೋಧಿಸಿದರು. 

ಪ್ರಾಚಾರ್ಯ ಎಸ್‌.ಎಂ.ಪೂಜಾರಿ ಅಧ್ಯಕ್ಷೀಯ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಜಿ.ಎಸ್‌.ಕುಲಕರ್ಣಿ, ಎಸ್‌.ಸಿ.ದುದ್ದಗಿ, ಎ.ಆರ್‌.ರಜಪೂತ, ಯು.ಸಿ.ಪೂಜೇರಿ, ಡಿ.ಎಂ.ಪಾಟೀಲ, ಹೇಮಾ ಹಿರೇಮಠ, ಜಿ.ವ್ಹಿ.ಪಾಟೀಲ, ಶೃತಿ ಹೂಗಾರ, ಪ್ರಿಯಾಂಕ ಬ್ಯಾಕೋಡ, ಎಂ.ಕೆ.ಬಿರಾದಾರ, ನೀಲಮ್ಮ ಬಿರಾದಾರ, ಮಂಗಳಾ ಈಳಗೇರ, ಮಮತಾ ಹರನಾಳ, ಶಂಕರ ಕುಂಬಾರ ಸೇರಿದಂತೆ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದ್ದರು. ಹೇಮಾ ಹಿರಮೇಠ ಸ್ವಾಗತಿಸಿದರು. ವಿದ್ಯಾರ್ಥಿ ಪೂಜಾ ಸಾರಂಗಮಠ ನಿರೂಪಿಸಿದರು. ಮಹಾಂತೇಶ ನೂಲಾನವರ ವಂದಿಸಿದರು. 


ಸುದ್ದಿ ಓದಿ