ಹಣಗಳಿಸುವ ಬರಾಟೆಯಲ್ಲಿ ಮಾನವನ ಬದುಕು ಅವನತಿಯತ್ತ ಸಾಗಿದೆ: ಶಾಂತಿವೃತಾನಂದಜಿ ಮಹಾರಾಜ
ರಾಣೀಬೆನ್ನೂರ 06: ಮನುಷ್ಯ ತನ್ನ ಬದುಕನ್ನು ವೇದ ಇತಿಹಾಸ ಕಾಲದಿಂದಲೂ ಪ್ರಕೃತಿಯ ಮಧ್ಯದಲ್ಲಿಯೆ ಕಟ್ಟಿಕೊಂಡು ತನ್ನ ಜೀವನದ ನೂರಾರು ವರ್ಷಗಳ ಕಾಲ ಯಾವುದೇ ರೋಗ-ರುಜಿನಾದಿಗಳು ಕಾಣದೆ ಅತ್ಯಂತ ಆರೋಗ್ಯ ಮತ್ತು ಆನಂದಮಯ ಜೀವನ ಸಾಗಿಸಿದ್ದಾನೆ. ಆದರೆ ಇಂದಿನ ಜನರ ಬದುಕು ಆಧುನಿಕತೆಯ ಹೆಸರಿನಲ್ಲಿ ಹಣ ಗಳಿಸುವ ಹುಮ್ಮಸ್ಸಿನಲ್ಲಿ ನಿತ್ಯವೂ ಹಪಹಪಿಸುತ್ತಾ ಅನಾರೋಗ್ಯದಿಂದ ಚಿಂತಾಕ್ರಾಂತನಾಗಿ ಬದುಕುತ್ತಿದ್ದಾನೆ. ಹಾಗಾದರೆ ಭಗವಂತ ನೀಡಿದ ಈ ಬದುಕಿಗೆ ಅಂತ್ಯವಿದೆಯೇ ಎನ್ನುವ ಪ್ರಶ್ನೆ ಇಂದು ಎಲ್ಲರಲ್ಲೂ ಕಾಡುತ್ತಿರುವ ಸಾಮಾನ್ಯ ಪ್ರಶ್ನೆಯಾಗಿದೆ ಎಂದು ಮೈಸೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಶಾಂತಿವೃತಾನಂದಜಿ ಮಹಾರಾಜ ಹೇಳಿದರು.
ಅವರು ಇಲ್ಲಿನ ಆದಿಶಕ್ತಿ ದೇವಸ್ಥಾನ ಆವರಣದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಭಾರತ್ ಸ್ವಾಭಿಮಾಣ ಟ್ರಸ್ಟ ಆಯೋಜಿಸಿದ್ದ ವಾರ್ಷಿಕ ಸಂಪ್ರದಾಯದ ಆಚಾರ್ಯ ಆಯುರ್ವೇದ ಪಿತಾಮಹ ಬಾಲಕೃಷ್ಣಜೀ ಅವರ ಜನ್ಮದಿನೋತ್ಸವದ ಗಿಡಮೂಲಿಕೆ (ಜಡೀ-ಬೂಟಿ)ದಿನಾಚರಣೆ ಮತ್ತು ವಿತರಣಾ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ನಿತ್ಯವೂ ಮನುಷ್ಯನ ಜೀವನ ಕ್ಷೀಣಿಸುತ್ತಿದೆ. ಎಷ್ಟು ಗಳಿಸಿದರು ಮಾನಸಿಕ ತೃಪ್ತಿಯಿಲ್ಲ, ಇದರಿಂದ ನೆಮ್ಮದಿಯಂತೂ ಇಲ್ಲವೇ ಇಲ್ಲ, ಹಾಗಾದರೆ ಗಳಿಸಿದ ಹಣ ಯಾರಿಗೆ? ಅದಕ್ಕೆ ಇತಿಹಾಸಕಾರರು ಮತ್ತು ನಮ್ಮ ಋಷಿಮುನಿಗಳು ಹಣ ಗಳಿಸುವುದಕ್ಕಿಂತ ಆರೋಗ್ಯ ಗಳಿಸಿದರೆ ಕೋಟಿ ಗಳಿಸಿದಷ್ಟು ಸಮಾನವಾಗುತ್ತದೆ, ಆರೋಗ್ಯವೇ ಭಾಗ್ಯ ಎಂಬ ವಾಣಿಯನ್ನು ನೀಡಿದ್ದಾರೆ, ಸೂಕ್ಷ್ಮವಾಗಿ ಅರ್ಥಮಾಡಿಕೊಂಡರೆ ಪ್ರತಿಯೊಬ್ಬ ಮನುಷ್ಯ ಆಧುನಿಕ ಬದುಕಿನ ಇಂಗ್ಲೀಷ ಓಷಧಿಗೆ ಮಾರು ಹೋಗದೆ ಪೂರ್ವಜರು ಹಾಕಿಕೊಟ್ಟು ಹೋದ ಆಯುರ್ವೇದ ಗಿಡಮೂಲಿಕೆಗಳು ನಮ್ಮ ಆರೋಗ್ಯಕ್ಕೆ ಅತ್ಯಂತ ಸಹಕಾರಿಯಾಗಿವೆ. ಅವುಗಳ ಬಳಕೆ ಹೆಚ್ಚಾಗಿ ನಡೆಯಬೇಕು ಹಿತ್ತಲ ಗಿಡ ಮದ್ದಲ್ಲ ಎನ್ನುವ ವಾಣಿಗೆ ತಿಲಾಂಜಲಿ ನೀಡಿ ಹೌದು ನಮ್ಮ ಪೂರ್ವಜರು ಹೇಳಿದ ಹಿತ್ತಲ ಗಿಡವೇ ಮದ್ದು ಎನ್ನುವ ವಾಣಿ ನಿತ್ಯದ ಬದುಕಿನಲ್ಲಿ ಅಳವಡಿಕೆಯಾಗಬೇಕು ಎಂದು ಸೇರಿದ ಸಮುದಾಯಕ್ಕೆ ಸ್ವಾಮೀಜಿ ಕರೆನೀಡಿದರು.
ದಿವ್ಯ ನೇತೃತ್ವದಲ್ಲಿದ್ದ ಸ್ಥಳೀಯ ರಾಮಕೃಷ್ಣ ವಿವೇಕಾನಂದಾಶ್ರಮದ ಸ್ವಾಮಿ ಶ್ರೀ ಪ್ರಕಾಶಾನಂದಜೀ ಮಹಾರಾಜ ಅವರು ಮಾತನಾಡಿ ಹಣ ಗಳಿಸುವ ಭರಾಟೆಯಲ್ಲಿ ಇಂದಿನ ನಾಗರೀಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ್ಯ ತೋರುತ್ತಿರುವುದರ ಪರಿಣಾಮ ಗಳಿಸಿದ ಹಣವೆಲ್ಲ ವೈದ್ಯರಿಗೆ ಇಡುವಂತಾಗಿದೆ. ಮನೆಯ ಹಿತ್ತಲಲ್ಲೆ ಆಯುರ್ವೇದ ಗಿಡದ ರೂಪದಲ್ಲಿ ವೈದ್ಯನಿದ್ದಾನೆ ಬಳಸುವ ವಿಧಾನ ತಿಳಿಯದೇ ಒದ್ದಾಡುತ್ತಿದ್ದಾನೆ ಅದಕ್ಕಾಗಿ ಆಚಾರ್ಯ ವೇದ ಋಷಿಮುನಿಗಳು ಮನುಕುಲಕ್ಕೆ ನಿತ್ಯವೂ ಬೇಕಾಗುವ ಆಯುರ್ವೇದ ಗಿಡಮೂಲಿಕೆಗಳು ಸಿದ್ದಪಡಿಸಿದ್ದಾರೆ. ಉಪಯೋಗ ಮಾಡಿಕೊಳ್ಳುವ ಗುಣಧರ್ಮಗಳನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರೂರು ಕ್ಷೇತ್ರದ ಜಿ.ಪಂ.ಮಾಜಿ ಅಧ್ಯಕ್ಷ ಮಂಗಳಗೌರಿ ಪೂಜಾರ ಅವರು ಪ್ರತಿಯೊಬ್ಬರು ಆಧುನಿಕ ಬದುಕಿಗೆ ಮಾರುಹೋಗದೆ ಸಂಸ್ಕೃತಿ ಸಂಸ್ಕಾರ ಹೊಂದಿರುವ ನಮ್ಮ ಭಾರತೀಯ ಸಂಸ್ಕೃತಿಯ ಋಷಿಮುನಿಗಳು ಅಧ್ಯಯನ ನಡೆಸಿ ನಮ್ಮೆಲ್ಲರ ಆರೋಗ್ಯಕ್ಕೆ ಮಹತ್ವ ಪೂರ್ಣವಾಗಿ ನೀಡಿರುವ ಗಿಡಮೂಲಿಕೆಗಳ ಓಷಧಿಗಳನ್ನು ಬಳಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಚಾರ್ಯ ಬಾಲಕೃಷ್ಣ ಗುರೂಜಿ ಅವರ ತ್ಯಾಗಮಯ ಬದುಕು ಅತ್ಯಂತ ಶ್ಲಾಘನಿಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಐರ್ಲಾಂಡ್‌ನಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಸೇವಾಸಕ್ತರಾಗಿ ನಿಯುಕ್ತಿಗೊಂಡಿರುವ ರಾಮಕೃಷ್ಣಮಠದ ಶ್ರೀ ಸ್ವಾಮಿ ಶಾಂತಿವೃತಾನಂದಜಿ ಮಹಾರಾಜ ಅವರನ್ನು ನಾಗರೀಕರ ಪರವಾಗಿ ಗೌರವ ಸನ್ಮಾನ ನೀಡಿ ಅಭಿನಂದಿಸಿದರು. ಜಿಲ್ಲಾ ಪತಂಜಲಿ ಸಮಿತಿ ಅಧ್ಯಕ್ಷ ರವೀಂದ್ರ ಬಿಜಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ವರ್ತಕ ಜಿ.ಜಿ.ಹೊಟ್ಟಿಗೌಡ್ರ, ಕಣ್ಣಿನ ತಜ್ಞ ಡಾ. ಚಂದ್ರಶೇಖರ ಕೇಲಗಾರ, ಬಿ.ಎಸ್.ಟಿ ಅಧ್ಯಕ್ಷ ರಾಮಸಿಂಗ್ ರಾಠೋಡ, ಎನ್.ಎನ್.ಉದಗಟ್ಟಿ ಮೊದಲಾದವರು ಮಾತನಾಡಿದರು.
ವೇದಿಕೆಯಲ್ಲಿ ತೇಜಸ್ಸಕುಮಾರ ಕೆ.ಕೆ., ವಿದ್ಯಾ ಬಣಗಾರ, ಸರೋಜಾ ಸುಣಗಾರ, ನಾಗಪ್ಪ ಲಮಾಣಿ, ಎಸ್.ಜಿ.ಮುಂಡರಗಿ, ಜಗದೀಶ ಸುಣಗಾರ, ಜೀವನ್‌ಕುಮಾರ, ಗುಡ್ಡಪ್ಪ ಕನವಳ್ಳಿ, ಜಯಶ್ರೀ ಕನವಳ್ಳಿ, ಕುಬೇರ್ಪ ಹಾಲದಹಳ್ಳಿ, ಹನುಮಂತಪ್ಪ ಹಾಲದಹಳ್ಳಿ, ಮಹೇಶಪ್ಪ ಬಣಕಾರ, ಶಶಿಕಲಾ ಬಡೆಂಕಲ್ಲ ಪ್ರಾರ್ಥಿಸಿದರು ಕೆ.ಜಿ.ದಿವಾಕರಮೂರ್ತಿ ಸ್ವಾಗತಿಸಿ ನಿರೂಪಿಸಿದರು ಕೆ.ಸಿ. ಕೋಮಲಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಬಿ. ಪಾಟೀಲ ವಂದಿಸಿದರು. ದೇವಸ್ಥಾನದ ಆವರಣದಲ್ಲಿ ದಿನಾಚರಣೆ ನಿಮಿತ್ತ ನೂರಾರು ನಾಗರೀಕರಿಗೆ ವಿವಿಧ ಪ್ರಬೇದಗಳ ಓಷಧಿ ಗುಣವುಳ್ಳ ಸಸಿಗಳನ್ನು ವಿತರಿಸುವುದರ ಜೊತೆಗೆ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಮಾಹಿತಿ ಮಾರ್ಗದರ್ಶನ ನೀಡಿದರು.