ಕಂಪ್ಲಿ

ಪೌರ ಕಾರ್ಮಿಕರಿಗೆ ಶೀಘ್ರದಲ್ಲೇ ನಿವೇಶನ ಹಂಚಿಕೆ : ಬಿ.ಮಲ್ಲಿಕಾರ್ಜುನ

ಪೌರ ಕಾರ್ಮಿಕರಿಗೆ ಶೀಘ್ರದಲ್ಲೇ ನಿವೇಶನ ಹಂಚಿಕೆ : ಬಿ.ಮಲ್ಲಿಕಾರ್ಜುನ

ಲೋಕದರ್ಶನ ವರದಿ 

ಕಂಪ್ಲಿ  23: ಪೌರ ಕಾರ್ಮಿಕರು ದಿನನಿತ್ಯದ ದುಡಿಮೆಯಲ್ಲಿ ಅಲ್ಪಸ್ವಲ್ಪ ಹಣವನ್ನು ಕೂಡಿಟ್ಟು, ಮಕ್ಕಳ ಶೈಕ್ಷಣಿಕ ಮಟ್ಟದ ಅಭಿವೃದ್ಧಿಗೆ ಬಳಸಿ, ಭವಿಷ್ಯ ರೂಪಿಸಬೇಕು. ಮತ್ತು ದುಶ್ಚಟಗಳಿಂದ ದೂರವಿರುವ ಮೂಲಕ ನಗರದ ಸ್ವಚ್ಚತೆಗೆ ಮುಂದಾಗಬೇಕು ಎಂದು ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಹೇಳಿದರು.  ಪಟ್ಟಣ ಪುರಸಭೆ ಕಛೇರಿ ಆವರಣದಲ್ಲಿ ಬುಧವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ದಿನನಿತ್ಯದಲ್ಲಿ ಕೈಗೊಂಡಿರುವ ಸ್ವಚ್ಚತೆ ಕಾರ್ಯ ಮೆಚ್ಚುವಂತಾಗಿದ್ದು, ಇದರ ಯಶಸ್ಸಿಗೆ ಪೌರ ಕಾರ್ಮಿಕರ ಶ್ರಮ ಮಹತ್ವದ್ದಾಗಿದೆ. ಪೌರ ಕಾರ್ಮಿಕರು ವರ್ಷಪೂರ್ತಿ ನಗರವನ್ನು ಸ್ವಚ್ಛವಾಗಿಡಲು ಆರೋಗ್ಯವನ್ನು ಲೆಕ್ಕಿಸದೆ ಶ್ರಮಿಸುತ್ತಿದ್ದಾರೆ.

ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಪರೀಶೀಲನೆ ನಡೆಸಲಾಗಿದೆ. ಸಮಸ್ಯೆಗಳು ಪರಿಹರಿಸಲು ತ್ವರಿತವಾಗಿ ಸ್ಪಂದಿಸಲಾಗುವುದು. ಸರ್ಕಾರದಿಂದ ಪೌರ ಕಾರ್ಮಿಕರಿಗೆ ನೀಡುವ ಸೌಲತ್ತುಗಳನ್ನು ಒದಗಿಸಲು ಪುರಸಭೆ ಬದ್ಧವಾಗಿದೆ. ಪೌರ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಪುರಸಭೆ ಶ್ರಮಿಸಲಿದೆ. ಪೌರ ಕಾರ್ಮಿಕರು ನಗರದ ಸೌಂದರ್ಯೀಕರಣಕ್ಕೆ ಸಹಕಾರ ನೀಡಬೇಕು. ಪೌರ ಕಾರ್ಮಿಕರು ಸರಿಯಾದ ದಾಖಲೆಗಳನ್ನು ನೀಡಿದ್ದಲ್ಲಿ ಅತಿ ಶೀಘ್ರದಲ್ಲೇ ನಿವೇಶನ ನೀಡಲಾಗುವುದು. ವಿಶ್ರಾಂತಿ ಗೃಹ ಕಟ್ಟಡ ಕಾಮಗಾರಿ ಈಗಾಗಲೇ ಮುಗಿದಿದ್ದು, ಅತಿ ಶೀಘ್ರದಲ್ಲೇ ಸ್ಥಳೀಯ ಶಾಸಕರ ಮೂಲಕ ಉದ್ಘಾಟಿಸಿ, ಪೌರ ಕಾರ್ಮಿಕರ ಬಳಕೆಗೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು. 


ಸುದ್ದಿ ಓದಿ