ಕಂಪ್ಲಿ

ಜೋಕಮಾರನ ಆಚರಣೆ: ಮಳೆ ಬರಲಿದೆ ಎಂಬ ರೈತರ ನಂಬಿಕೆ

ಜೋಕಮಾರನ ಆಚರಣೆ: ಮಳೆ ಬರಲಿದೆ ಎಂಬ ರೈತರ ನಂಬಿಕೆ

ಲೋಕದರ್ಶನ ವರದಿ 

 ಕಂಪ್ಲಿ, ಸೆ. 25: ಉತ್ತರ ಕರ್ನಾಟಕದ ಪ್ರಮುಖ ಜಾನಪದ ಹಬ್ಬಗಳಲ್ಲಿ ಒಂದಾದ ಜೋಕಮಾರ ಹಬ್ಬವನ್ನು ಕಂಪ್ಲಿ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಜೋಕಮಾರನ ಆಗಮನದಿಂದ ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಲಿದೆ ಎಂಬ ನಂಬಿಕೆ ರೈತರಲ್ಲಿದೆ.  

 ಗಣೇಶ ಹಬ್ಬದ ಸಂದರ್ಭದಲ್ಲಿ ಮಳೆ ಕೈಕೊಟ್ಟಿದ್ದರೂ, ಜೋಕಮಾರ ಬಂದರೆ ಮಳೆ ಸುರಿಯಲಿದೆ ಎಂಬ ವಾಡಿಕೆ ನಂಬಿಕೆ ಈ ಭಾಗದ ಜನರಲ್ಲಿದೆ. ಭಾದ್ರಪದ ಮಾಸದ ಅನಂತ ಹುಣ್ಣಿಮೆಯ ಮುನ್ನ ಜೋಕಮಾರನ ಆಚರಣೆ ನಡೆಯುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ‘ಜೋಕ್ಯನ ಹುಣ್ಣಿಮೆ’ ಎಂದೂ ಕರೆಯುತ್ತಾರೆ.  

 ಗಂಗಾಮತ ಸಮುದಾಯದ ಮಹಿಳೆಯರು ಜೋಕಮಾರನ ಮೂರ್ತಿಯನ್ನು ಬುಟ್ಟಿಯಲ್ಲಿಟ್ಟು, ಬೇವಿನ ಎಲೆ ಹಾಗೂ ಕಪ್ಪು ಮಸಿಯಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ಜೋಕಮಾರನನ್ನು ಹೊತ್ತುಕೊಂಡು ಮನೆ-ಮನೆಗೆ ತೆರಳಿ ಜಾನಪದ ಹಾಡುಗಳನ್ನು ಹಾಡುತ್ತಾ ಜನರಿಗೆ ಆಶೀರ್ವಾದ ನೀಡುತ್ತಾರೆ.  

 ಜೋಕಮಾರನಿಗೆ ಅಕ್ಕಿ, ಜೋಳ ಸೇರಿದಂತೆ ವಿವಿಧ ಧಾನ್ಯಗಳನ್ನು ನೈವೇದ್ಯವಾಗಿ ಅರ​‍್ಿಸಲಾಗುತ್ತದೆ. ಮಹಿಳೆಯರು ಜೋಕಪ್ಪನ ಬಾಯಿಗೆ ಬೆಣ್ಣೆ ಹಚ್ಚಿ, ಅದನ್ನು ಕಣ್ಣಿಗೆ ಹಚ್ಚಿಕೊಂಡರೆ ಕಣ್ಣಿನ ತೊಂದರೆ ನಿವಾರಣೆಯಾಗುತ್ತದೆ ಹಾಗೂ ಉತ್ತಮ ಮಳೆ, ಬೆಳೆ ಮತ್ತು ನೆಮ್ಮದಿಯ ಜೀವನ ದೊರೆಯುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ.  

 ಜೋಕಮಾರ ಗಂಗಾಮತ ಸಮುದಾಯದ ಮನೆಗಳಲ್ಲಿ ಜನಿಸುತ್ತಾನೆ ಎಂಬ ನಂಬಿಕೆಯಿದ್ದು, ವಿಶೇಷವಾಗಿ ಅಲಂಕರಿಸಿದ ಮೂರ್ತಿಯನ್ನು ಏಳು ದಿನಗಳ ಕಾಲ ವಿವಿಧ ಊರುಗಳಿಗೆ ಕೊಂಡೊಯ್ಯಲಾಗುತ್ತದೆ. ಮಹಿಳೆಯರು ಜಾನಪದ ಹಾಡುಗಳನ್ನು ಹಾಡುತ್ತಾ ಮೂರ್ತಿಯನ್ನು ಹೊತ್ತು ಸಾಗುತ್ತಾರೆ.  

 ಅನಂತ ಹುಣ್ಣಿಮೆಯ ರಾತ್ರಿ ಸಂಪ್ರದಾಯದಂತೆ ಜೋಕಮಾರನನ್ನು ಭೂಲೋಕದಿಂದ ಕೈಲಾಸಕ್ಕೆ ಕಳುಹಿಸುವ ಆಚರಣೆ ನಡೆಯುತ್ತದೆ. ಉತ್ತರ ಕರ್ನಾಟಕದ ಹಲವು ಗ್ರಾಮಗಳಲ್ಲಿ ಇಂದಿಗೂ ಜೋಕಮಾರಸ್ವಾಮಿ ರೈತರ ಬದುಕಿನ ನಂಬಿಕೆಯ ಪ್ರತೀಕವಾಗಿ ಉಳಿದಿದ್ದಾನೆ.  ಜೋಕಮಾರ ಹಬ್ಬವು ಜನಪದ ಸಂಪ್ರದಾಯ, ಭಕ್ತಿ ಹಾಗೂ ರೈತರ ಮಳೆಯ ನೀರೀಕ್ಷೆಯನ್ನು ಪ್ರತಿಬಿಂಬಿಸುವ ವಿಶಿಷ್ಟ ಆಚರಣೆಯಾಗಿ ಮುಂದುವರಿದಿದೆ. 


ಸುದ್ದಿ ಓದಿ