ಬೈಲಹೊಂಗಲ

ಸಡಗರ, ಸಂತಸದಿಂದ ಹೋಳಿ ಹಬ್ಬ ಆಚರಣೆ

ಸಡಗರ, ಸಂತಸದಿಂದ ಹೋಳಿ ಹಬ್ಬ ಆಚರಣೆ
ಬೈಲಹೊಂಗಲ ಹೋಳಿ ಹಬ್ಬದ ನಿಮಿತ್ಯ ನಡೆದ ಬಣ್ಣದಾಟದಲ್ಲಿ ನಂದೆಮ್ಮ ನಗರದ ಚಿಣ್ಣರು ಪರಸ್ಪರ ಬಣ್ಣ ಹಚ್ಚುತ್ತಿರುವುದು.

ಬೈಲಹೊಂಗಲ 30: ಹೋಳಿ ಹಬ್ಬದ ಅಂಗವಾಗಿ ಸೋಮವಾರ ಪಟ್ಟಣದಲ್ಲಿ ಯುವಕರು, ಮಹಿಳೆಯರು ಎಲ್ಲರೂ ಪರಸ್ಪರ ಬಣ್ಣ ಎರಚಿಕೊಂಡು ರಂಗು ರಂಗಿನ ಹಬ್ಬವನ್ನು ಸಡಗರ, ಸಂತಸದಿಂದ  ಆಚರಿಸಿದರು.

ಮಧ್ಯರಾತ್ರಿಯೇ ಕಾಮನ್ನನನ್ನು ದಹನ ಮಾಡಿ ಬೆಳಿಗ್ಗೆ 7 ಘಂಟೆಯಿಂದಲೇ  ಬಣ್ಣದಾಟ ಪ್ರಾರಂಭವಾಯಿತು. ಸಣ್ಣ ಸಣ್ಣ ಮಕ್ಕಳು  ಮನೆ ಮಂದಿಗೆಲ್ಲ  ಬಣ್ಣ ಎರಚಿ ಖುಷಿ ಪಟ್ಟರು. ರಸ್ತೆಗಳಲ್ಲಿ ಯುವಕರ ಗುಂಪುಗಳು ಹಲಗೆ ಬಾರಿಸುತ್ತಾ, ಕುಣಿಯುತ್ತಾ ಸ್ನೇಹಿತರಿಗೆ, ಸಾರ್ವಜನಿಕರಿಗೆ ಬಣ್ಣ ಹಚ್ಚುತ್ತಾ  ಹೋಳಿ ಆಚರಣೆಯಲ್ಲಿ ತೊಡಗಿದ್ದರು.

ಪಟ್ಟಣದ ವಿದ್ಯಾನಗರ, ಬಸವ ಸರ್ಕಲ,  ಮೃತ್ಯುಂಜಯ ನಗರ, ಶಿವಾನಂದ ಭಾರತಿ ನಗರ, ಶಟಗಾರ ಚಾಳ, ನಂದೇಮ್ಮ ನಗರ, ಪ್ರಭು ನಗರ, ವಿನಾಯಕ ನಗರ, ಬಸವ ನಗರ, ಅಂಬೇಡ್ಕರ ನಗರ, ಜವಳಿ ಕೂಟ, ಇನ್ನಿತರ ಕಡೆ  ಜನರು ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂಭ್ರಮಿಸಿದರು.

ಗೊಂಬಿ ಗುಡಿ ದೇವಸ್ಥಾನದ ಮುಂಭಾಗದಲ್ಲಿ ನೂರಾರು ಯುವಕರು ನೀರಿನ ಕಾರಂಜಿಯಲ್ಲಿ ಮಿಂದೆದ್ದು, ಹಾಡಿಗೆ ತಕ್ಕ ಹಾಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸಿದರು.

ಬಣ್ಣದಾಟದಲ್ಲಿ ಯುವಕರು ಉತ್ಸಾಹದಿಂದ ಬೈಕಗಳಲ್ಲಿ  ಓಣಿಯಿಂದ ಓಣಿಗೆ ಸುತ್ತುತ್ತ ಎಲ್ಲರಿಗೂ ಬಣ್ಣ ಹಚ್ಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶಿವಾನಂದ ಭಾರತಿ, ಪ್ರಭುನಗರದಲ್ಲಿ ಮಹಿಳೆಯರೆಲ್ಲರೂ ಬಣ್ಣದ ಓಕುಳಿ ಆಡಿದರು. ಪಟ್ಟಣದ ಜನರೆಲ್ಲ ಒಂದಾಗಿ ಜಾತಿ, ಧರ್ಮ ಭೇದವಿಲ್ಲದೆ ಹಬ್ಬ ಆಚರಿಸಿದ್ದು ವಿಶೇಷವಾಗಿತ್ತು. ಯುವಕರ ದಂಡು ಹಲಗೆ ಬಾರಿಸುತ್ತ, ಕುಣಿಯುತ್ತಾ ಬಣ್ಣ ಎರಚುತ್ತಿದ್ದರಿಂದ ಪಟ್ಟಣದ ಎಲ್ಲಾ ಓಣಿಗಳು  ಹಾಗೂ ಪ್ರಮುಖ ರಸ್ತೆಗಳು ರಂಗೇರಿದವು. ಕೆಂಪು, ಹಸಿರು, ಕೇಸರಿ, ಹಳದಿ, ನೀಲಿ, ಹೀಗೆ ಎಲ್ಲ ಬಣ್ಣಗಳಿಂದ ರಸ್ತೆಗಳು ಕಂಗೊಳಿಸುತ್ತಿದ್ದವು. ಸಣ್ಣ ಮಕ್ಕಳಂತೂ ಪಿಚಕಾರಿ ಹಿಡಿದು ಹಿಂದಿನಿಂದ ಬಂದು ಜನರಿಗೆ ಬಣ್ಣದ ನೀರು ಹಾಕಿ ಓಡುತ್ತಿದ್ದರು. ವಿಚಿತ್ರ ವೇಷಧಾರಿಗಳು ಬಣ್ಣ ಎರಚುತ್ತ ಅಡ್ಡಾಡುತ್ತಿದ್ದರು.

ತಲೆಗೆ ಋಷಿಗಳ ರೀತಿಯಲ್ಲಿ ಕೂದಲು ಕಟ್ಟಿಕೊಂಡು ಕೆಲವರು ಗಮನಸೆಳೆದರೆ, ಇನ್ನೂ ಕೆಲವರು ಮುಖವಾಡಗಳ ಹಾಕಿಕೊಂಡು, ಹಲಗೆ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರು. ಬಣ್ಣದಾಟದ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್  ನಿಯೋಜಿಸಲಾಗಿತ್ತು.

ಸುದ್ದಿ ಓದಿ