ಹೊಸಪೇಟೆ

ಇತಿಹಾಸಕಾರರು ಇತಿಹಾಸದ ವಿಷಯಗಳ ಮೇಲೆ ಹೊಸ ಬೆಳಕು ಚೆಲ್ಲಬೇಕು: ಹೆಚ್‌.ಕೆ. ಪಾಟೀಲ

ಇತಿಹಾಸಕಾರರು ಇತಿಹಾಸದ ವಿಷಯಗಳ ಮೇಲೆ ಹೊಸ ಬೆಳಕು ಚೆಲ್ಲಬೇಕು:  ಹೆಚ್‌.ಕೆ. ಪಾಟೀಲ

ಹಂಪಿ 09: ಕರ್ನಾಟಕ ಇತಿಹಾಸ ಅಕಾಡೆಮಿಯವರು ನಮ್ಮ ಇಲಾಖೆಯನ್ನು ಜಾಗೃತಗೊಳಿಸಬೇಕು. ಇತಿಹಾಸಕಾರರು ಇತಿಹಾಸದ ವಿಷಯಗಳ ಮೇಲೆ ಹೊಸ ಬೆಳಕು ಚೆಲ್ಲಬೇಕು ಎಂದು ಶ್ರೀ ಹೆಚ್‌.ಕೆ. ಪಾಟೀಲ ಸನ್ಮಾನ್ಯ ಸಚಿವರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ, ಕರ್ನಾಟಕ ಸರ್ಕಾರ ಅವರು ಕರೆನೀಡಿದರು.  

ಕನ್ನಡ ವಿಶ್ವವಿದ್ಯಾಲಯ, ಹಂಪಿ ಹಾಗೂ ಕರ್ನಾಟಕ ಇತಿಹಾಸ ಅಕಾದೆಮಿ(ರಿ), ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 9ನೇ ನವೆಂಬರ್ 2024ರಂದು ಮಂಟಪ ಸಭಾಂಗಣದಲ್ಲಿ ಕರ್ನಾಟಕ ಇತಿಹಾಸ ಅಕಾದೆಮಿಯ 38ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದರು. 

ನನ್ನಲ್ಲಿರುವ ಕರ್ತವ್ಯಪ್ರಜ್ಞೆಯು ಇಲ್ಲಿ ನೆರೆದಿರುವ ಇತಿಹಾಸಕಾರರಿಂದ ಜಾಗೃತವಾಗಿದೆ. ಇತಿಹಾಸಕಾರರು ಶಾಸನತಜ್ಞರನ್ನು ಭೇಟಿಯಾಗುವ ಅವಕಾಶ ದೊರೆತಿದೆ ಎಂದು ಹೆಮ್ಮೆಯಿಂದ ನುಡಿಯುತ್ತ ನೀವು ಇತಿಹಾಸಕಾರರು ಮಾತೃ ಸ್ಥಾನದಲ್ಲಿ ಇರುವಿರಿ. ನೀವೇ ಶ್ರೇಷ್ಠರು. ಹೋಲಿಕೆ ಮಾಡಿಕೊಂಡು ನೋವು ಪಡಬೇಡಿ. ನಿಮ್ಮ ಕೆಲಸ ನೀವು ಮಾಡಿ ಎಂದು ಬೆನ್ನು ಚಪ್ಪರಿಸಿದರು. ನಮ್ಮ ಪುರಾತತ್ವ ಇಲಾಖೆಯು ಕರ್ನಾಟಕದ ಐತಿಹಾಸಿಕ ಸ್ಮಾರಕಗಳು, ಅವಶೇಷಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. ಸ್ಮಾರಕಗಳ ಸಂರಕ್ಷಣೆಗಾಗಿ ಸ್ಮಾರಕದತ್ತು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಸಾಂಸ್ಕೃತಿಕವಾಗಿ ನಾವು ಶ್ರೀಮಂತರಾಗಿದ್ದೇವೆ. 25 ಸಾವಿರ ಸ್ಮಾರಕಗಳಲ್ಲಿ 844 ಸ್ಮಾರಕಗಳನ್ನು ಮಾತ್ರ ಅಧಿಸೂಚಿಸಲಾಗಿದೆ. ಇನ್ನು ಉಳಿದ ಸ್ಮಾರಕಗಳನ್ನು ಅಧಿಸೂಚಿಸಬೇಕಾಗಿದೆ. ನೀವು ಇತಿಹಾಸ ಅಕಾಡೆಮಿಯವರು ಸ್ಮಾರಕಗಳನ್ನು ಅಧಿಸೂಚಿಸುವ ಕೆಲಸವನ್ನು ಸಿದ್ಧಮಾಡಿಕೊಟ್ಟರೆ ತಾಂತ್ರಿಕ, ಆಡಳಿತ ಬಲ, ಆರ್ಥಿಕ ಬಲ ನೀಡಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದರು. 

ಸುಮಾರು 556 ಸ್ಮಾರಕಗಳನ್ನು ಸ್ಕ್ರೀನಿಂಗ್, ಸ್ಕ್ಯಾನಿಂಗ್ ಹಾಗೂ 3ಡಿ ಡಿಜಿುಟಲ್ ತಂತ್ರಾಂಶದ ಮೂಲಕ ದಾಖಲಿಸುವ ಕೆಲಸ ಪ್ರವಾಸೋದ್ಯಮದ ಮೂಲಕ ನಡೆದಿದೆ. ಗ್ರಾಮಾವಾರು ಸರ್ವೇಕಾರ್ಯ ನಡೆಯುತ್ತಿದೆ. ಡೆಕ್ಕನ್ ಸುಲ್ತಾನಿ, ಹಿರೇಬೆನಕಲ್‌ನ ಪ್ರೀಹಿಸ್ಟಾರಿಕ್ ಸೈಟ್, ಶ್ರೀರಂಗಪಟ್ಟಣದ ಕೋಟೆಗಳು, ಬದಾಮಿ ಐಹೊಳೆಯನ್ನು ಪಟ್ಟದಕಲ್ಲಿನೊಂದಿಗೆ ಸೇರಿಸುವುದು ಹೀಗೆ ಈ ನಾಲ್ಕು ಸ್ಥಳಗಳನ್ನು ವಿಶ್ವ ಜಾಗತಿಕ, ಪಾರಂಪರಿಕ ಪಟ್ಟಿಗೆ ಸೇರಿಸಲು ಪ್ರಯತ್ನ ನಡೆದಿದೆ ಎಂದು ಹೇಳುತ್ತ ಪ್ರಾಚೀನ ಸ್ಮಾರಕಗಳನ್ನು ಹಾಗೂ ಅವಶೇಷಗಳನ್ನು ರಕ್ಷಿಸುವ ಸಲುವಾಗಿ ಹಾಗೂ ವಿರೂಪಗೊಳಿಸುವುದನ್ನು ತಡೆಯಲು 2024ರ ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ಸ್ಮಾರಕಗಳ ಹಾಗೂ ಅವಶೇಷಗಳ ತಿದ್ದುಪಡಿ ಕಾಯಿದೆ ಜಾರಿಗೆ ತಂದು ದಂಡದ ಹಾಗೂ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಸರ್ಕಾರ ಕ್ರಮವಹಿಸಿದೆ ಎಂದು ಹೇಳಿದರು. 

ನಾಡಿನ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟಂತೆ ಕೆಲಸ ಮಾಡುವವರಿಗೆ ಹಣಕಾಸು ಬಹಳ ದೊಡ್ಡ ಸಮಸ್ಯೆ ಆಗಬಾರದು. ಇತಿಹಾಸ ಅಕಾಡೆಮಿಯ ಸಂಶೋಧಕರ ಸಂಶೋಧನೆಗಾಗಿ ಪ್ರತಿ ವರ್ಷ 5 ಲಕ್ಷ ನೆರವು ನೀಡುವುದಾಗಿ ಪ್ರಕಟಿಸಿದರು.  

ಹಂಪಿ ಕನ್ನಡ ವಿಶ್ವವಿದ್ಯಾಲಯವು ಉತ್ತಮ ಕೆಲಸ ಮಾಡುತ್ತಿದೆ. ನಮ್ಮ ನೀರೀಕ್ಷೆಗೆ ವಿಶ್ವವಿದ್ಯಾಲಯ ಬರಬೇಕಾದ ನಾವು ಅವರಿಗೆ ಉತ್ತಮ ಸೌಲಭ್ಯ ಒದಗಿಸಬೇಕು. ಇವತ್ತಿನ ಮೊಬೈಲ್ ಯುಗದಲ್ಲಿ ಹೊಸ ಪೀಳಿಗೆಗೆ ಪುಸ್ತಕವನ್ನು ಅವರ ಆಸಕ್ತಿಗೆ ಮನೋಧರ್ಮಕ್ಕೆ ತಕ್ಕಂತೆ ತಲುಪಿಸುವ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು. 

ನಂತರ ಮಾನ್ಯ ಸಚಿವರು 12 ವಿದ್ವಾಂಸರಿಗೆ ಅಕಾಡೆಮಿಯ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಉದ್ಘಾಟನೆಗೆ ಮೊದಲು ಮಾನ್ಯ ಸಚಿವರು ಗಿಡವನ್ನು ನೆಟ್ಟು ನೀರೆರೆದರು. 

ಶ್ರೀ ಹೆಚ್‌.ಆರ್‌.ಗವಿಯಪ್ಪ ಮಾನ್ಯ ಶಾಸಕರು, ಹೊಸಪೇಟೆ ವಿಧಾನಸಭಾ ಕ್ಷೇತ್ರ ಅವರು ‘ಇತಿಹಾಸ ದರ್ಶನ’ ಸಂಪುಟ-39ನ್ನು ಲೋಕಾರೆ​‍್ಣ ಮಾಡಿ ಮಾತನಾಡುತ್ತ, ಮಕ್ಕಳು ಇತಿಹಾಸವನ್ನು ಮರೆಯುತ್ತಿದ್ದಾರೆ. ಆದ್ದರಿಂದ ಇತಿಹಾಸವನ್ನು ಕುರಿತು ಶೇರಿಂಗ್ ಸೆಂಟರ್‌ಗಳನ್ನು ತೆರೆಯಲು ಸರ್ಕಾರ ನೆರವು ನೀಡಬೇಕು ಎಂದು ಕೇಳಿದರು.  

ಸಮ್ಮೇಳನದ ಸರ್ವಾಧ್ಯಕ್ಷರಾದ ಬೆಂಗಳೂರಿನ ಶಾಸನತಜ್ಞರು ಹಾಗೂ ಸಂಶೋಧಕರು ಆದ ಡಾ.ಆರ್‌. ಶೇಷಶಾಸ್ತ್ರಿಯವರು ಮಾತನಾಡುತ್ತ, ತಮ್ಮ ಗುರುಗಳಾದ ಡಾ. ಎಂ. ಚಿದಾನಂದಮೂರ್ತಿ ಅವರ ಋಣವನ್ನು ತೀರಿಸುವ ಸಲುವಾಗಿ ಇತಿಹಾಸ ವಿಭಾಗದಲ್ಲಿ ನಡೆಯುತ್ತಿದ್ದ ಶಾಸನಗಳ ಅಧ್ಯಯನವನ್ನು ತೆಲುಗು ವಿಭಾಗದಲ್ಲಿ ಪ್ರಾರಂಭಿಸಿದೆ. ‘ಡಾ.ಎಂ. ಆದಿನಾರಾಯಣ ಶಾಸ್ತ್ರಿ ಅವರ ರಾಯಸೀಮ ಶಾಸನಾಲು ಸಾಂಸ್ಕೃತಿಕ ಅಧ್ಯಯನಮು' ಎಂಬ ಕೃತಿ ಮುದ್ರಣವಾಗುವಂತೆ ಮಾಡಿ ಆ ಪುಸ್ತಕವನ್ನು ಗುರುಗಳಿಂದಲೇ ಬಿಡುಗಡೆ ಮಾಡಿಸಿದೆ. ಶಾಸನಗಳ ಬಗ್ಗೆ ಕರ್ನಾಟಕದ ಜನತೆಗೆ ಇರುವಷ್ಟು ಅರಿವು ಆಂಧ್ರ​‍್ರದೇಶದಲ್ಲಿ ಇಂದಿಗೂ ಇಲ್ಲ. ಅಲ್ಲಿ ಶಾಸನಗಳು ಎಂದರೆ ಕೊಪ್ಪರಿಗೆ ಕೊಪ್ಪರಿಗೆ ಹಣದ ನಿಧಿ ಸಾರುವ ಬರಹಗಳು ಅಷ್ಟೇ ಎಂದು ನುಡಿದರು.  

ಜನಸಾಮಾನ್ಯರಿಗೆ ನಮ್ಮ ನಾಡಿನ ಶಾಸನಗಳ ಪರಿಚಯ ಆಗಬೇಕು. ಅವುಗಳ ಸಂರಕ್ಷಣೆಯಾಗಬೇಕು. ಕರ್ನಾಟಕ ಇತಿಹಾಸ ಅಕಾಡೆಮಿಯ ಅಭಿವೃದ್ಧಿಯಲ್ಲಿ ಶಾಸನ ತರಗತಿಗಳ ವಿದ್ಯಾರ್ಥಿಗಳ ಪಾತ್ರ ತುಂಬಾ ಮಹತ್ವವಾಗಿದೆ. ಇಂದಿನ ಯುವಜನಾಂಗ ಹಿರಿಯರ ಒಡನಾಟದಿಂದ ಬಹಳಷ್ಟು ಕಲಿಯಬೇಕಾಗಿದೆ. ಸಂಶೋಧನೆಯ ಬಗ್ಗೆ ಸಂಶೋಧನ ವಿಧಿ ವಿಧಾನಗಳಬಗ್ಗೆ ಇಲ್ಲಿಯವರಗೆ ಕನ್ನಡದಲ್ಲಿ ಹತ್ತು ಹಲವಾರು ಪುಸ್ತಕಗಳು ಬಂದಿವೆ. ಅವುಗಳು ನಮಗೆ ಕೆಲಸ ಮಾಡುವ ವಿಧಿವಿಧಾನಗಳನ್ನು ತಿಳಿಸುತ್ತವೆ. ಬಹಳ ಹಿಂದೆಯೇ ಪ್ರಕಟವಾಗಿರುವ ಡಾ.ಎಂ. ಚಿದಾನಂದಮೂರ್ತಿ ಅವರ ಸಣ್ಣ ಪುಸ್ತಕ ‘ಸಂಶೋಧನೆ' ಎಂಬ ಪುಸ್ತಕ ಇಂದಿಗೂ ಮಹತ್ವದ ಗ್ರಂಥವಾಗಿದೆ. ಸಂಶೋಧನೆಗೆ ಪೂರ್ವ ಸಿದ್ಧತೆ ಬೇಕು. ಈ ಸಿದ್ಧತೆಯ ಮೊದಲ ಹಂತವೆಂದರೆ ಹಿಂದಿನ ವಿದ್ವಾಂಸರ ಸಂಶೋಧನಾ ಕೃತಿಗಳನ್ನು ಶ್ರದ್ಧೆಯಿಂದ ಓದುವುದು ಮೂಲ ಆಕರಗಳನ್ನು ಶೋಧಿಸುವವರಿಗೆ ಲಿಪಿ ಮತ್ತು ಭಾಷಾ ಸಾಹಿತ್ಯದ ಮೇಲೆ ಅಪಾರವಾದ ಹಿಡಿತವಿರಬೇಕು, ಕನ್ನಡ ಸಂಶೋಧಕರಿಗೆ ಇಂಗ್ಲಿಷ್ ಬಾರದಿದ್ದರೆ ಏನೂ ಚಿಂತೆಯಿಲ್ಲ ಒಂದೆರಡು ಭಾರತೀಯ ಭಾಷೆಗಳ ಪರಿಚಯವಿರಬೇಕು ಎಂದು ಯುವ ಸಂಶೋಧಕರನ್ನು ಉದ್ದೇಶಿಸಿ ಮಾತನಾಡಿದರು.  

ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಡಾ.ದೇವರಕೊಂಡಾರೆಡ್ಡಿ ಅವರು ಇತಿಹಾಸ ಅಕಾಡೆಮಿಯ ಸದಸ್ಯರ ಕನ್ನಡದ ದಾಖಲೆಗಳ ಅಧ್ಯಯನ, ಪಂಚಮುಖ ಪ್ರತಿಬಿಂಬ ಆತ್ಮಕಥೆ, ದೃಶ್ಯಕಲಾ ಸೌರಭ, ಜಟ್ಟಿಅಗ್ರಹಾರ-ಸ್ಥಳೀಯ ಇತಿಹಾಸ ಎಂಬ ನಾಲ್ಕು ಕೃತಿಗಳನ್ನು ಲೋಕಾರೆ​‍್ಣ ಮಾಡಿ ಕೃತಿಗಳನ್ನು ಪರಿಚಯಿಸಿದರು.  

ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ, 2000ದ ಜೂನ್ ತಿಂಗಳಲ್ಲಿ ಇತಿಹಾಸ ಸಮ್ಮೇಳನ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದಿತ್ತು. ತರುವಾಯ 23 ವರ್ಷಗಳ ನಂತರ ಮತ್ತೆ ಸಮ್ಮೇಳನ ನಡೆಸುವ ಅವಕಾಶ ನಮಗೆ ದೊರೆಕಿದೆ ಎಂದು ಹೇಳಿದರು. 

ಇತಿಹಾಸ ಅಕಾಡೆಮಿಯ ಪ್ರಧಾನಕಾರ್ಯದರ್ಶಿಯಾದ ಶ್ರೀ ಕೆ.ಎಲ್‌.ರಾಜಶೇಖರ್ ಅವರು ಪ್ರಾಸ್ತಾವಿಕ ನುಡಿಯುತ್ತ 40 ವರ್ಷಗಳಲ್ಲಿ ಅಕಾಡೆಮಿಯ ಬೆಳವಣಿಗೆ ಕಾರ್ಯಕ್ರಮಗಳ ರೂಪುರೇಷೆಗಳನ್ನು ವಿವರಿಸುತ್ತ ಇತಿಹಾಸದ ಸಾಹಿತ್ಯವು 2ನೇ ದರ್ಜೆಯ ಸಾಹಿತ್ಯವಾಗುತ್ತಿದೆ ಎಂದು ವಿಷಾದಿಸಿದರು. ಪ್ರಾಧ್ಯಾಪಕರಾದ ಡಾ.ಎಸ್‌.ವೈ. ಸೋಮಶೇಖರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ ಅವರು ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ.ಅಮರೇಶ ಯತಗಲ್ ಅವರು ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಪ್ರಾರ್ಥಿಸಿದರು. 


ಸುದ್ದಿ ಓದಿ