ಶಿಗ್ಗಾವ್

ಕನ್ನಡಿಗರನ್ನು ಜಾಗೃತಿಗೊಳಿಸಲು ಪಾದಯಾತ್ರೆ

ಕನ್ನಡಿಗರನ್ನು ಜಾಗೃತಿಗೊಳಿಸಲು ಪಾದಯಾತ್ರೆ

ಶಿಗ್ಗಾವಿ 13: ಗಡಿಭಾಗದಲ್ಲಿನ ಕನ್ನಡ ಭಾಷಾ ಅಸ್ತಿತ್ವ ಕುರಿತು ಕನ್ನಡಿಗರನ್ನು ಜಾಗೃತಿಗೊಳಿಸುವ ಹಿನ್ನೆಲೆಯಲ್ಲಿ ಪಾದಯಾತ್ರೆ ಕೈಗೊಂಡಿರುವ ಮಂಜುನಾಥ ಭದ್ರಶೆಟ್ಟಿಗೆ ಶುಕ್ರವಾರ ತನ್ನ ತವರು ಮುಗಳಿ ಗ್ರಾಮದಲ್ಲಿ ಹೃದಯಸ್ಪರ್ಶಿ ಸ್ವಾಗತ ದೊರೆಯಿತು.

ಬೆಳಗ್ಗೆ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಮನೆಮಗನನ್ನು ಪ್ರೀತಿಯಿಂದ ಸ್ವಾಗತಿಸಿದ ಗ್ರಾಮಸ್ಥರು ಮಂಜುನಾಥನ ಕನ್ನಡಾಭಿಮಾನವನ್ನು ಕೊಂಡಾಡಿದರು. ಬಳಿಕ ಶಾಲು, ಫಲಪುಷ್ಪಗಳಿಂದ ಸನ್ಮಾನಿಸಿ ಕನ್ನಡ ಜಾಗೃತಿ ಅಭಿಯಾನವನ್ನು ಹುರಿದುಂಬಿಸಿದರು. ಐದು ವರ್ಷಗಳ ಬಳಿಕ ಮನೆಗೆ ಆಗಮಿಸಿದ ಮಗನನ್ನು ಕಂಡ ತಂದೆ ತಿಪ್ಪಣ್ಣ, ತಾಯಿ ಬಸವ್ವ ಅವರ ಖುಷಿಗೆ ಪಾರವೇ ಇರಲಿಲ್ಲ. ಈ ವೇಳೆ ಆರತಿ ಬೆಳಗಿ ಮಗನಿಗೆ ದೃಷ್ಟಿ ತೆಗೆದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುನಾಥ, ಆಂಧ್ರಪ್ರದೇಶದ ಕಾಂಚನಪಲ್ಲಿಯಲ್ಲಿ ಕನ್ನಡಿಗರು ಬಹುಸಂಖ್ಯೆಯಲ್ಲಿದ್ದರೂ ಪರಕೀಯರಂತೆ ಇದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡಿಗರು ಅಭಿಮಾನ ಶೂನ್ಯರಾಗಬಾರದು ಎಂಬ ಕಾರಣಕ್ಕೆ 2020ರ ಅಕ್ಟೋಬರ್ 29ರಿಂದ ಪಾದಯಾತ್ರೆ ಕೈಗೊಂಡಿರುವೆ. ಪಾದಯಾತ್ರೆ ಸಂದರ್ಭದಲ್ಲಿ ಕನ್ನಡ ಭಾಷಾ ಸಂಸ್ಕೃತಿಯನ್ನು ಪರಿಚಯಿಸುತ್ತಿರುವೆ. ನನ್ನ ಸಂಕಲ್ಪವನ್ನು ಬೆಂಬಲಿಸಿರುವ ಕನ್ನಡಪರ ಸಂಘಟನೆಗಳು ನನಗೆ ಊಟ, ವಸತಿ ಸೌಕರ್ಯ ಕಲ್ಪಿಸಿದ್ದಾರೆ. ಬೆಳಗಾವಿವರೆಗೂ ನನ್ನ ಪಾದಯಾತ್ರೆ ಮುಂದುವರೆಯುತ್ತದೆ. ಕನ್ನಡದ ಬಗೆಗಿನ ನನ್ನ ನಿಲುವನ್ನು ಬೆಂಬಲಿಸಿ, ಸನ್ಮಾನಿಸಿರುವ ಮುಗಳಿ ಗ್ರಾಮಸ್ಥರಿಂದ ಕನ್ನಡಾಭಿಮಾನ ದುಪ್ಪಟ್ಟಾಗಿದೆ ಎಂದರು.

ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘ, ಮಲ್ಲಿಕಾರ್ಜುನ ಯುವಕ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.


ಸುದ್ದಿ ಓದಿ