ಪ್ರತ್ಯೇಕ ಮಹಿಳಾ ಬ್ಯಾಂಕಗೆ ಹೆಚ್ಚಿನ ಆದ್ಯತೆ: ಮೀನಾಕ್ಷಿ ಗಡ
ಜಮಖಂಡಿ 19: ರಾಜ್ಯ-ದೇಶಗಳಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕಾದರೆ ಅವರಿಗೆ ಬ್ಯಾಂಕ ವ್ಯವಹಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಮಹಿಳೆಯರಿಗಾಗಿನೇ ಪ್ರತ್ಯೇಕ ಮಹಿಳಾ ಬ್ಯಾಂಕಗಳನ್ನು ತೆರೆಯುವ ಸಂಸ್ಥೆಗಳಿಗೆ ರಿಜರ್ವಬ್ಯಾಂಕ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಭಾರತೀಯ ರಿಜರ್ವ ಬ್ಯಾಂಕಿನ ಪಟ್ಟಣ ಬ್ಯಾಂಕಗಳ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಮೀನಾಕ್ಷಿ ಗಡ ಹೇಳಿದರು.
ನಗರದ ದಾನಮ್ಮಾದೇವಿ ಬಡಾವಣೆ ಬಳಿ ಅರ್ಬನ ಬ್ಯಾಂಕಿನ ಪ್ರತ್ಯೇಕ ಮಹಿಳಾ ಬ್ಯಾಂಕ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು 80 ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ಅರ್ಬನ್ ಬ್ಯಾಂಕ ಸ್ಥಾಪಿಸಿರುವ ಈ ಶಾಖೆಯ ಸಂಪೂರ್ಣ ಸದುಪಯೋಗವನ್ನು ಮಹಿಳಾ ಗ್ರಾಹಕರು ಪಡೆದುಕೊಳ್ಳಬೇಕು. ರಾಜ್ಯದಲ್ಲಿ ಸದ್ಯ 16 ಮಹಿಳಾ ಬ್ಯಾಂಕಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿಯೊಬ್ಬರ ಮನೆಯ ಅಡುಗೆ ಮನೆಯಿಂದಲೇ ಉಳಿತಾಯ ವ್ಯವಹಾರ ಪ್ರಾರಂಭವಾಗುತ್ತಿದ್ದು, ಮಹಿಳೆಯರು ಮನಸ್ಸು ಮಾಡಿದರೆ ಒಂದು ವರ್ಷದಲ್ಲಿ ಈ ಬ್ಯಾಂಕ ಹೆಚ್ಚು ಲಾಭ ಗಳಿಸಲು ಸಾಧ್ಯವಾಗಬಲ್ಲದು. ಸಹಕಾರಿ ಬ್ಯಾಂಕಗಳು ಗ್ರಾಹಕರಿಗೆ ಹೆಚ್ಚಿನ ಅನುಕೂಲತೆಗಳನ್ನು ನೀಡಲು ಮುಂದೆ ಬರಬೇಕು. ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗಗಳ ಹೊಂದಾಣಿಕೆ ಬ್ಯಾಂಕಗಳ ಅಭಿವೃದ್ದಿಗೆ ಹೆಚಿನ ಸಹಕಾರಿಯಾಗಬಲ್ಲದು ಎಂದರು.
ಮಹಿಳೆಯರು ಆರ್ಥಿಕವಾಗಿ ಹೆಚ್ಚು ಸಸೃಡವಾಗಲು ಬ್ಯಾಂಕ ವ್ಯವಹಾರ ಹೆಚ್ಚೆಚ್ಚು ನಡೆಸಬೇಕು.ಪುರುಷರು ಕೂಡಾ ಮಹಿಳೆಯರಿಗೆ ಹಣಕಾಸಿನ ವ್ಯವಹಾರದಲ್ಲಿ ತೊಡಗುವಂತೆ ಪ್ರೋತ್ಸಾಹ ನೀಡಬೇಕು. ಬ್ಯಾಂಕ ಸಿಬ್ಬಂದಿ ಮತ್ತು ಆಡಳಿತ ಮಂಡಳಿಗೆ ಸಮಯಪ್ರಜ್ಞೆ ಹೆಚ್ಚಾಗಿಸಬೇಕು ಎಂದು ಹೇಳಿದರು.
ತಾಲೂಕಿನ ತೊದಲಬಾಗಿ ಗ್ರಾಮದ ಪಿಕೆಪಿಎಸ್ ಕಟ್ಟಡದಲ್ಲಿ ನೂತನ ಶಾಖೆ ಉದ್ಘಾಟಿಸಿದ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ದೇಶ ನನಗೆ ಏನು ನೀಡಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನು ಏನು ನೀಡಿದ್ದೇನೆಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಅದೇ ರೀತಿ ಸಹಕಾರಿ ಕ್ಷೇತ್ರದಲ್ಲಿನ ಆಡಳಿತ ಮಂಡಳಿಯ ಜನ ಕೊಡುಗೆ ಅಪಾರವಾಗಿದೆ ಎಂದರು.
ಅತಿಥಿಗಳಾಗಿದ್ದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ರಾಹುಲ್ ಕಲೂತಿ, ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ ಅಧ್ಯಕ್ಷ ಅಪ್ಪಾಸಾಹೇಬ ಮನಗೂಳಿ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಕಲ್ಯಾಣಮಠ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಜಿ ಆಶೀರ್ವಚನ ನೀಡಿದರು. ಬ್ಯಾಂಕ ನಿರ್ದೇಶಕ ಡಾ.ಉಮೇಶ ಮಹಾಬಳಶೆಟ್ಟಿ, ನಂದೆಪ್ಪ ದಡ್ಡಿಮನಿ, ಫಕೀರಸಾಬ ಬಾಗವಾನ, ವಿರುಪಾಕ್ಷಯ್ಯಾ ಕಂಬಿ, ಪ್ರದೀಪ ಮಹಾಲಿಂಗಪೂರಮಠ, ಬಸವರಾಜ ಕಲೂತಿ, ವೈಶಾಲಿ ಗೊಂದಿ, ಗೀರೀಶ ಬಾಂಗಿ, ಎ.ಆರ್.ಸಿಂಧೆ,ಈಶ್ವರ ಚೌದರಿ, ರಮೇಶ ಕನಕೇರಿ, ಶೋಭಾ ಅರಕೇರಿ, ಶಕುಂತಲಾ ಕಡ್ಡಿ, ಪಲ್ಲವಿ ಸರ್ಜಾಪೂರ, ಸುನಿತಾ ಚಿಚಡಿ, ಸಂಗೀತಾ ಗುರ್ಲಾಪೂರ, ಮಾಲನಾ ಮೋರೆ, ಪ್ರಧಾನ ವ್ಯವಸ್ಥಾಪಕ ಸಂಗಮೇಶ ತುಪ್ಪದ ಅನೇಕರಿದ್ದರು. ರೇಖಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಂತೋಷ ಹಲ್ಯಾಳ ಸ್ವಾಗತಿಸಿದರು. ವಿಪ ಮಾಜಿ ಸದಸ್ಯ ಜಿ,ಎಸ್.ನ್ಯಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ನಿರೂಪಿಸಿ, ವಂದಿಸಿದರು.