ಬೆಳಗಾವಿ

ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿ: ಘಟಪ್ರಭಾ ನದಿಗೆ ಹೆಚ್ಚುವರಿ ನೀರು ಬಿಡುಗಡೆ

ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿ: ಘಟಪ್ರಭಾ ನದಿಗೆ ಹೆಚ್ಚುವರಿ ನೀರು ಬಿಡುಗಡೆ

ಯಮಕನಮರಡಿ, ಆ. 18: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಾಜಾ ಲಖಮಗೌಡ ಸರ ದೇಸಾಯಿ ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯಕ್ಕೆ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಘಟಪ್ರಭಾ ನದಿಗೆ ಬಿಡಲಾಗಿದೆ.

ಕಳೆದ ಕೆಲವು ದಿನಗಳಿಂದ ಮುಂಗಾರು ಮಳೆ ತೃಪ್ತಿಕರವಾಗಿ ಸುರಿಯುತ್ತಿದ್ದು, ಗಡಿ ಭಾಗದ ಮಹಾರಾಷ್ಟ್ರದಲ್ಲಿಯೂ ಉತ್ತಮ ಮಳೆಯಾಗುತ್ತಿರುವುದರಿಂದ ಹಿಡಕಲ್ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. 21.75 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯವು ಸಂಪೂರ್ಣ ಭರ್ತಿಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ಜಲಾಶಯದಿಂದ ಸಂಕೇಶ್ವರ, ಹುಕ್ಕೇರಿ, ಯಮಕನಮರಡಿ ಸೇರಿದಂತೆ ತಾಲೂಕಿನ ಸುಮಾರು 18 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಜಲಾಶಯ ಭರ್ತಿಯಾಗಿರುವುದರಿಂದ ಈ ಭಾಗದ ರೈತರ ಕೃಷಿ ಚಟುವಟಿಕೆಗಳಿಗೂ ಹೆಚ್ಚಿನ ಅನುಕೂಲವಾಗಲಿದೆ.

ಹಿಡಕಲ್ ಜಲಾಶಯ ನಿರ್ಮಾಣಕ್ಕೆ ಸಂಸ್ಥಾನದ ಮಹಾದಾನಿ ಹಾಗೂ ಉದಾರ ಜೀವಿಯಾಗಿದ್ದ ರಾಜಾ ಲಖಮಗೌಡ ಸರ ದೇಸಾಯಿ ಅವರು 1970ರ ಅವಧಿಯಲ್ಲಿ ತಮ್ಮ ಸಾವಿರಾರು ಎಕರೆ ಜಮೀನು ಮುಳುಗಡೆಯಾದರೂ, ನಾಡಿನ ಜನರು, ರೈತರು ಹಾಗೂ ಸಕಲ ಜೀವಿಗಳಿಗೆ ನೀರು ಒದಗಿಸುವ ಮಹದಾಸೆಯಿಂದ ಸಹಕಾರ ನೀಡಿದ್ದರು. ಅವರ ಈ ಕೊಡುಗೆಯನ್ನು ಈ ಭಾಗದ ಜನತೆ ಇಂದಿಗೂ ಸ್ಮರಿಸುತ್ತಿದ್ದಾರೆ.

ಸುದ್ದಿ ಓದಿ