ಉತ್ತರ ಕನ್ನಡ ದಾಂಡೇಲಿಯಲ್ಲಿ ಎಡೆ ಬಿಡದ ಮಳೆ : ಎಲ್ಲೆಡೆ ಕಟ್ಟೆಚ್ಚರ
ಕಾರವಾರ 22: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ. ಗುರುವಾರ ಇಡೀ ಹಗಲು ಮಳೆ ಬಿದ್ದ ಕಾರಣ ನದಿಗಳು ತುಂಬಿ ಹರಿಯುತ್ತಿವೆ. ನದಿಬದಿಯ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಯಾರನ್ನು ಗ್ರಾಮಗಳಿಂದ ಸ್ಥಳಾಂತರಿಸಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ದಾಂಡೇಲಿ, ಕಾರವಾರದಲ್ಲಿ ಇಡೀ ಹಗಲು ಮಳೆ ಸುರಿಯಿತು. ಜನ ಜೀವನ ಎಂದಿನಂತೆಯೇ ಇತ್ತು. ಕದ್ರಾ, ಕೊಡಸಳ್ಳಿ ಭಾಗ ಮತ್ತು ಜಲಾಶಯಗಳ ಹಿನ್ನೀರಿನ ಪ್ರದೇಶದಲ್ಲಿ ಭಾರೀ ಮಳೆ ಸುರಿಯಿತು. ಪರಿಣಾಮ ಕದ್ರಾ, ಕೊಡಸಳ್ಳಿ ಅಣೆಕಟ್ಟುಗಳ ಎಲ್ಲಾ ಕ್ರಸ್ಟಗೇಟ್ ತೆರೆದು ನೀರು ಹೊರಕ್ಕೆ ಬಿಡಲಾಯಿತು. ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಮಳೆಯಾಗಿದೆ. ಘಟ್ಟದ ಪ್ರದೇಶದಲ್ಲಿ ಸಹ ಉತ್ತಮ ಮಳೆಯಾಗಿದೆ. ಮಳೆ ಇನ್ನೂ ಮೂರಾ್ನಲ್ಕು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನದಿಗೆ ಮೀನುಗಾರರು ಇಳಿಯದಂತೆ ಎಚ್ಚರಿಸಲಾಗಿದೆ. ಕಳೆದ 13 ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಯ ಮೇಲೆ ಸ್ವಲ್ಪ ಅಡ್ಡ ಪರಿಣಾಮ ಸಹ ಆಗಿದೆ. ಮಳೆ ಬಿಡುವಿನ ನಂತರ ಕೃಷಿ ಚಟುವಟಿಕೆ ಚುರುಕುಗೊಳ್ಳಲಿದೆ ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ.
ಎಲ್ಲೆಡೆ ಕಟ್ಟೆಚ್ಚರ : ಮಹಾಮಳೆಯ ಸೂಚನೆ ಇರುವ ಕಾರಣ ಜಿಲ್ಲೆಯ ಎಲ್ಲೆಡೆ ಹೆಚ್ಚಿನ ಜಾಗ್ರತೆ ವಹಿಸಲಾಗುತ್ತಿದೆ. 336 ಗಂಜಿ ಕೇಂದ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. 5272 ಜನರನ್ನು ಸ್ಥಳಾಂತರಿಸುವ ಸಾಮರ್ಥ್ಯ ನಮಗಿದೆ. 168 ಗ್ರಾಮಗಳು ನೆರೆಗೆ ತುತ್ತಾಗುತ್ತವೆ. ಈ ಸಂದರ್ಭದಲ್ಲಿ 185 ದೋಣಿ ಹಾಗೂ 21 ಉರಗ ತಜ್ಞರನ್ನು ಇಟ್ಟುಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಸಿಎಂಗೆ ವಿವರಿಸಿದರು. ಕಾರವಾರ ನಗರ ಭಾಗದ 3 ಕಡೆ, ಹೊನ್ನಾವರ, ದಾಂಡೇಲಿ ಪಟ್ಟಣದ ತಲಾ 2 ಪ್ರದೇಶ ಮಳೆ ನೀರಿಗೆ ಮುಳುಗುವ ಪ್ರದೇಶ ಎಂದು ಗುರುತಿಸಲಾಗಿದೆ. ಇಲ್ಲಿ ತುರ್ತು ಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬುಧುವಾರ ಬೆಳಿಗ್ಗೆ 9 ರಿಂದ ಗುರುವಾರ ಬೆಳಿಗ್ಗೆ 9ರತನಕ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ ಇಂತಿದೆ. ಅಂಕೋಲಾದಲ್ಲಿ 15.4 ಮಿ.ಮೀ, ಭಟ್ಕಳ 33.0 ಮಿ.ಮೀ, ಹಳಿಯಾಳ 30.8 ಮಿ.ಮೀ, ಹೊನ್ನಾವರ 40.7 ಮಿ.ಮೀ, ಕಾರವಾರ 6.8 ಮಿ.ಮಿ, ಕುಮಟಾ 14.3 ಮಿ.ಮೀ, ಮುಂಡಗೋಡ 17.4 ಮಿ.ಮೀ, ಸಿದ್ದಾಪುರ 52.4 ಮಿ.ಮೀ. ಶಿರಸಿ 62.5 ಮಿ.ಮೀ, ಜೋಯಿಡಾ 83.2 ಮಿ.ಮೀ, ಯಲ್ಲಾಪುರ 52.6 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ:
ಕದ್ರಾ: 34.50ಮೀ (ಗರಿಷ್ಟ), 30.36 ಮೀ, 14547.00 ಕ್ಯೂಸೆಕ್ಸ್ (ಒಳಹರಿವು) 40000.0 ಕ್ಯೂಸೆಕ್ಸ್ (ಹೊರ ಹರಿವು), ಕೊಡಸಳ್ಳಿ: 75.50 ಮೀ (ಗರಿಷ್ಟ), 70.80 ಮೀ. , 11731 ಕ್ಯೂಸೆಕ್ಸ್ (ಒಳ ಹರಿವು), 6700 ಕ್ಯೂಸೆಕ್ಸ್ (ಹೊರ ಹರಿವು), ಸೂಪಾ: 564.00 ಮೀ (ಗರಿಷ್ಟ), 543.40 ಮೀ, 26002.089 ಕ್ಯೂಸೆಕ್ಸ್ (ಒಳ ಹರಿವು), 489.437 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 459.30 ಮೀ, 1397.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 434.31 ಮೀ, 4285 ಕ್ಯೂಸೆಕ್ಸ್ (ಒಳ ಹರಿವು) 2642.0 ಕ್ಯೂಸೆಕ್ಸ್ (ಹೊರ ಹರಿವು). ಗೇರುಸೊಪ್ಪ: 55.00 ಮೀ (ಗ), 51.51 ಮೀ, 7226.00 ಕ್ಯೂಸೆಕ್ಸ್ (ಒಳ ಹರಿವು) 6852.00 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕ್ಕಿ 1819.00 ಅಡಿ (ಗ), 1796.60 ಅಡಿ, 45458.0 ಕೂಸೆಕ್ಸ್ (ಒಳ ಹರಿವು) 2176.00 ಕ್ಯೂಸೆಕ್ಸ್ (ಹೊರ ಹರಿವು).