ರಾಣೆಬೆನ್ನೂರ

ರಾಣೇಬೆನ್ನೂರು ಲಯನ್ಸ್‌ ಸಭಾಭವನದಲ್ಲಿ ಶ್ರವಣ ದೋಷ ಶಿಬಿರಾರ್ಥಿಗಳ ತಪಾಸಣಾ ಶಿಬಿರ

ರಾಣೇಬೆನ್ನೂರು ಲಯನ್ಸ್‌ ಸಭಾಭವನದಲ್ಲಿ ಶ್ರವಣ ದೋಷ ಶಿಬಿರಾರ್ಥಿಗಳ ತಪಾಸಣಾ ಶಿಬಿರ


ಲೋಕದರ್ಶನ ವರದಿ 

ರಾಣೀಬೆನ್ನೂರ 17: ಮನುಷ್ಯನಿಗೆ ಎಲ್ಲಾ ಅಂಗಾಂಗಗಳು ಸರಿಯಿದ್ದಾಗ ಮಾತ್ರ ಆತನ ಜೀವನ ಸರಿಯಾಗಿ ನಡೆಯಲು ಸಾಧ್ಯವಾಗುತ್ತದೆ. ಕಿವುಡರು, ಮೂಕರು ಸಹ ನಮ್ಮಂತೆ ಮನುಷ್ಯರು ಸಮಾಜದಲ್ಲಿ ಅವರು ಸಹ ಸಮಾನತೆಯಿಂದ ಜೀವನವನ್ನು ಸಾಗಿಸಬೇಕಾದರೆ ಇರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ. ಅಂತಹ ಕಾರ್ಯವು ಹುಬ್ಬಳ್ಳಿಯ ಪಾಟೀಲ ಹಿಯರಿಂಗ್ ವರ್ಟಿಗೋ ಮತ್ತು  ಸ್ಪಿಚ್ ಸೆಂಟರ್ ಆಯೋಜಿಸುವುದರ ಮೂಲಕ ಸಾಮಾಜಿಕ ಕಾರ್ಯದಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡಿರುವುದು ಅತ್ಯಂತ ಸಂತೋಷಕರ ಸಂಗತಿಯಾಗಿದೆ ಎಂದು ಎಂಜಿಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲೇಶಪ್ಪ ಅರಕೇರಿ ಹೇಳಿದರು.  

    ಅವರು ರವಿವಾರ ಇಲ್ಲಿನ ಮೇಡ್ಲೇರಿ ರಸ್ತೆಯ ಲಯನ್ಸ್‌ ಶಾಲಾ ಸಭಾಭವನದಲ್ಲಿ ಲಯನ್ಸ್‌ ಸೇವಾ ಸಂಸ್ಥೆ ಆತಿಥ್ಯದಲ್ಲಿ ಆಯೋಜಿಸಿದ್ದ ಶ್ರವಣ ದೋಷರ ತಪಾಷಣಾ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಯನ್ಸ್‌ ಸಂಸ್ಥೆ ಜನ ಸಾಮಾನ್ಯರ ಮತ್ತು ಬಡವರ ಬದುಕಿಗೆ ಸಹಕಾರಿಯಾಗಿ ಎಲ್ಲಾ ಸೇವೆಗಳನ್ನು ಉಚಿತವಾಗಿ ನೀಡುವುದರ ಮೂಲಕ ತನ್ನ ಮಾನವೀಯ ಸೇವಾ ಕಾರ್ಯ ಮೆರೆಯುತ್ತಲಿದೆ ಎಂದ ಅವರು, ಗ್ರಾಮಾಂತರ ಪ್ರದೇಶದ ಮತ್ತು ನಗರದ ನಾಗರೀಕರು ಸಂಸ್ಥೆಯು ಹಂತ ಹಂತವಾಗಿ ಆಯೋಜಿಸುವ ಉಚಿತ ಶಿಬಿರಗಳ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.  

     ಕಿವುಡ ಮೂಕ ತಜ್ಞರಾದ ಡಾಽಽ ಪ್ರಸನ್ನ ಪಾಟೀಲ ಮತ್ತು ಅವರ ತಂಡದವರು ಭಾಗವಹಿಸಿದ ತಾಲೂಕಿನ ಮತ್ತು ಜಿಲ್ಲೆಯ ನೂರಾರು ಶ್ರವಣ ದೋಷ ಶಿಬಿರಾರ್ಥಿಗಳನ್ನು ತಪಾಷಣೆಗೆ ಒಳಪಡಿಸಿ ಸಲಹೆ ಸೂಚನೆ ನೀಡುವುದರ ಜೊತೆಗೆ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಸೇವಾ ಮಾನವೀಯತೆಯನ್ನು ಮೆರೆದು ಶಿಭಿರಾರ್ಥಿಗಳ ಪ್ರಶಂಶೆಗೆ ಪಾತ್ರರಾದರು.  

       ವೇದಿಕೆಯಲ್ಲಿ ಲಯನ್ಸ್‌ ಅಧ್ಯಕ್ಷ ಟಿ.ವೀರಣ್ಣ, ಬಸವರಾಜ ಪಾಟೀಲ,  ಡಾ.ಪ್ರಸನ್ನ ಪಾಟೀಲ್, ಟಿ.ಸಿ ಪಾಟೀಲ್, ಬಿ.ಎನ್‌.ಪಾಟೀಲ್, ಎಲ್‌.ಜಿ.ಶೆಟ,  ಜಯಣ್ಣ ಮುಚಡಿ, ಬಸವರಾಜ ಬಡಿಗೇರ, ಶಿವಾನಂದ ಸಂಗಾಪುರ, ಅಮೋಘ ಬದಾಮಿ,  ಜಗನ್ನಾಥ,  ಕೊಟ್ರೇಶಪ್ಪ ಯಮ್ಮಿ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು  ಉಪಸ್ಥಿತರಿದ್ದರು. 

     ಶ್ರೀದೇವಿ ಗುರುಮಠ ಪ್ರಾರ್ಥಿಸಿದರು. ಆರ್‌.ವಿ.ಸುರಗೊಂಡ ಸ್ವಾಗತಿಸಿ ನಿರೂಪಿಸಿದರು. ಎಂ.ಎಚ್‌.ಪಾಟೀಲ ವಂದಿಸಿದರು. 


ಸುದ್ದಿ ಓದಿ