ಚಿಕ್ಕೋಡಿ

ಕೆಎಲ್‌ಇ ಸಂಸ್ಥೆಯಿಂದ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ: ಡಾ. ಪ್ರಭಾಕರ ಕೋರೆ

ಕೆಎಲ್‌ಇ ಸಂಸ್ಥೆಯಿಂದ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ: ಡಾ. ಪ್ರಭಾಕರ ಕೋರೆ

ಮಾಂಜರಿ 03: ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ ಅಗತ್ಯವಿರುವ ಎಲ್ಲ ಕಡೆಗೂ ಕೆಎಲ್‌ಇ ಸಂಸ್ಥೆ ಆಸ್ಪತ್ರೆಗಳನ್ನು ಆರಂಭಿಸುವ ಮುಖಾಂತರ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುವ ಕೆಲಸ ಕೆಎಲ್‌ಇ ಸಂಸ್ಥೆ ಮಾಡುತ್ತಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಮತ್ತು ಮಾಜಿ ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.  

ತಾಲೂಕಿನ ಮಾಂಜರಿ ಗ್ರಾಮದಲ್ಲಿ ಸಹಕಾರ ಕ್ಷೇತ್ರದ ಛತ್ರಪತಿ ಶಿವಾಜಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಸಂಸ್ಥಾಪಕ ದಿ. ಅಣ್ಣಾಸಾಹೇಬ ಯಶವಂತ ಯಾಧವ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜವಾಹರಲಾಲ ನೇಹರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಮಹಾಂತೇಶ ಕವಟಗಿಮಠ ಸೋಶಿಯಲ್ ಫೌಂಡೇಶನ ಮತ್ತು ಶಿವಾಜಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಹಾಗೂ ಪ್ರತಿಭಾ ಪುರಸ್ಕರಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.  

10 ವರ್ಷದಲ್ಲಿ 91 ಸಾವಿರ ಜನರ ಕ್ಯಾನ್ಸ್‌ರ್ ರೋಗಿಗಳ ಮೇಲೆ ಕೆಎಲ್‌ಇ  ಸಂಸ್ಥೆಯ ಆಸ್ಪತ್ರೆಯಿಂದ ಉಪಚಾರ  ಮಾಡಿದ್ದು, ಅದರಲ್ಲಿ3500 ಜನರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಕ್ಯಾನ್ಸರ್ ಗುರುತಿಸುವ ಕೆಲಸ ಕೆಎಲ್‌ಇ ಸಂಸ್ಥೆ ಮಾಡುತ್ತಿದೆ. ಆದರೆ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡದೇ ಯೋಗ್ಯ ಸಮಯದಲ್ಲಿ ಹೋಗಿ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇದರಿಂದ ಮನುಷ್ಯ ಬದುಕುವ ಸಾಧ್ಯತೆ ಇರುತ್ತದೆ ಎಂದ ಅವರು, ಬರುವ ಮೂರು ತಿಂಗಳಲ್ಲಿ ಬೆಳಗಾವಿಯಲ್ಲಿ ಕೆಎಲ್ ಸಂಸ್ಥೆಯ ಕ್ಯಾನ್ಸರ್ ಆಸ್ಪತ್ರೆ ಆರಂಭವಾಗಲಿದೆ ಎಂದರು.  

ಆರೋಗ್ಯ ಮತ್ತು ಶಿಕ್ಷಣ ಸೇವೆಯನ್ನು ಜನರ ಮನೆ ಬಾಗೀಲಿಗೆ ತಲುಪಿಸುವ ಮಹತ್ತರ ಕಾರ್ಯವನ್ನು ಕೆಎಲ್‌ಇ ಸಂಸ್ಥೆ ಮಾಡುತ್ತಿದೆ ಎಂದರು. ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಮತ್ತು ಮಾಜಿ ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆಯವರು ತಮ್ಮ ಇಚ್ಚಾಶಕ್ತಿಯಿಂದ ಮುಂಬೈ ಮತ್ತು ಬೆಂಗಳೂರು ನಗರದಂತಹ ನಗರದಲ್ಲಿ ದೊರೆಯುವ ಆರೋಗ್ಯ ಸೇವೆ ನಮ್ಮ ಭಾಗದ ಗ್ರಾಮೀಣ ಜನರಿಗೂ ಸಮೀಪದಲ್ಲಿಯೇ ದೊರೆಯಬೇಕು ಎಂಬ ಉದ್ದೇಶದಿಂದ ಬೆಳಗಾವಿಯಲ್ಲಿಯೇ ಅಂತಹ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವಂತೆ ಕೆಎಲ್‌ಇ ಸಂಸ್ಥೆ ಮಾಡಿದ್ದಾರೆ ಎಂದರು.  

ದಿ. ಅಣ್ಣಾಸಾಹೇಬ ಯಾಧವ ಅವರು ಸಹಕಾರ ಕ್ಷೇತ್ರದ ಮುಖಾಂತರ ಮಾಂಜರಿ ಗ್ರಾಮದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದು, ಅಂತವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉಚಿತ ಆರೋಗ್ಯ ಸೇವೆ, ರಕ್ತದಾನ ಶಿಬಿರದಂತಹ ಜನರ ಉಪಯೋಗಿ ಸಮಾಜಮುಖಿ ಕಾರ್ಯಕ್ರಮಗಳ ಮುಖಾಂತರ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.ಮಹಾಂತೇಶ ಕವಟಗಿಮಠ ಫೌಂಡೇಶನ್ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 5000ರೂ.ಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಮಾಜಿ ಶಾಸಕ ಕೆ.ಪಿ.ಮಗೆನ್ನವರ, ತಾತ್ಯಾಸಾಹೇಬ ಕಾಟೆ, ಅಜೀತ ದೇಸಾಯಿ,ಸುರೇಶ ಪಾಟೀಲ, ಅಮರ ಯಾದವ, ಸತೀಶ ಅಪ್ಪಾಜಿಗೋಳ, ಶ್ರೀಧರ ಬೋಜಕರ, ಭೀಮಗೌಡ ಪಾಟೀಲ, ಮಹಾವೀರ ಕಾತ್ರಾಳೆ, ಅನ್ನ ಸಾಹೇಬ್ ಇಂಗಳೆ  ಸಿದ್ದು ಮಗದುಮ್ಮ, ಮೋಹನ ಲೋಕರೆ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರಾದ ಶರದ ಚಂದ್ರ ಫಾಠಕ ನಿರ್ದೇಶಕ ಜ್ಯೋತಿ ಕುಮಾರ್ ಪಾಟೀಲ್  ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಬಿ.ಡಿ.ರುಕಡೆ ನಿರೂಪಿಸಿ, ವಂದಿಸಿದರು.  


ಸುದ್ದಿ ಓದಿ