ಕೂಲಿಕಾರರಿಗೆ ಆರೋಗ್ಯ ಶಿಬಿರ
ಬೈಲಹೊಂಗಲ16: ಆರೋಗ್ಯವಾಗಿದ್ದವನೇ ನಿಜವಾದ ಶ್ರೀಮಂತ ಎಂಬ ಮಾತಿನಂತೆ ಎಲ್ಲಾ ಕೂಲಿಕಾರರು ತಮ್ಮ ಖಾಯಿಲೆಗಳನ್ನು ಪರೀಕ್ಷಿಸಿಕೊಂಡು ಹೆಚ್ಚಿನ ತೊಂದರೆಗಳಿದ್ದರು ವೈದ್ಯರ ಸಲಹೆ ಪಡೆದುಕೊಂಡು ಆರ್ಥಿಕವಾಗಿ ಮತ್ತು ಆರೋಗ್ಯವಾಗಿ ಸದೃಢರಾಗಬೇಕು ಎಂದು ತಾಪಂ.ಇಓ ಸುಭಾಸ ಸಂಪಗಾಂವಿ ಹೇಳಿದರು.
ತಾಲೂಕಿನ ಗ್ರಾಪಂ ಸಂಗೊಳ್ಳಿ ಗ್ರಾಪಂ.ಯ ಗರಜೂರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಂಯೋಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಲಶಕ್ತಿ ಅಭಿಯಾನ ಅಂಗವಾಗಿ ಅಮೃತ ಸರೋವರ ಕೆರೆಯ ದಡದಲ್ಲಿ ಉದ್ಯೋಗ ಖಾತ್ರಿ ಕೂಲಿಕಾರರಿಗೆ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವೇ ಭಾಗ್ಯ ಎಂಬಂತೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಕಾರರಿಗೆ ಪ್ರತಿ ವರ್ಷದಂತೆ ಈ ವರ್ಷವು ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಿದ್ದು ಎಲ್ಲಾ ಕೂಲಿಕಾರರು ಸದೃಢ ದೇಹವನ್ನು ಹೊಂದಬೇಕು ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಬೇಕಾದಲ್ಲಿ ಮೊದಲು ಆರೋಗ್ಯವಂತರಾಗಿರಬೇಕು ಎಂದು ಕರೆ ನೀಡಿದರು. ವೈಯಕ್ತಿಕ ಶುಚಿತ್ವವನ್ನು ಕಾಳಜಿ ವಹಿಸಿಕೊಂಡು ಹಾಗೂ ಸಾಂಕ್ರಮಿಕ ರೋಗಗಳ ಬಗ್ಗೆ ಕೌಟುಂಬಿಕವಾಗಿ ಅರಿವು ಎಲ್ಲರಿಗೂ ಇರಬೇಕು ಎಂದು ತಿಳಿಸಿದರು. ಉದ್ಯೋಗ ಖಾತ್ರಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
ಡಾ.ಸಂತೋಷ ಮಾತನಾಡಿ , ನರೇಗಾ ಕೂಲಿಕಾರರು ಪ್ರತಿ ದಿನ ಕೆಲಸಕ್ಕೆ ಬರುವದರಿಂದ ನಾನು ಆರೋಗ್ಯವಾಗಿರುತ್ತೇನೆ ಎಂಬ ಭಾವನೆ ನಿಮ್ಮಲ್ಲಿ ಇರುತ್ತದೆ. ಹಲವಾರು ಸಾಂಕ್ರಾಮಿಕರ ರೋಗಗಳು, ಕಾಯಿಲೆಗಳು ಕ್ಯಾನ್ಸರ, ಗರ್ಭಪಾತ, ಚರ್ಮರೋಗ ಅನಿಮಿಯಾ ಇಂತಹ ಹಲವಾರು ರೋಗಗಳಿಂದ ಹೊರಗಡೆ ಬಂದು ಆರೋಗ್ಯದಿಂದ ನೀವು ಮತ್ತು ನಿಮ್ಮ ಕುಟುಂಬ ಇರಬೇಕು ಎಂದು ಸಲಹೆ ನೀಡಿದರು.
ಗ್ರಾಪಂ.ಅಧ್ಯಕ್ಷ ಇಮಾಮಹುಸೇನ ಖುದ್ದುನವರ ಸದಸ್ಯ ಬಸವರಾಜ್ ಕೊಡ್ಲಿ, ಶಿವಕುಮಾರ ಪೂಜೇರ, ಈರಣ್ಣಾ ಹಳೇಮನಿ, ಗಂಗವ್ವ ಹೋಳೆಪ್ಪನ್ನವರ, ಬಾಬು ತಳವಾರ, ಸನಾ ಖುದ್ದುನವರ, ಮಂಜುಳಾ ಕೊಡೊಳ್ಳಿ , ಪಿಡಿಒ ಬಿ ವ್ಹಿ ಬಳಿಗಾರ, ಪ್ರಭು ನರಗಟ್ಟಿ , ಎಸ್ ವ್ಹಿ ಹಿರೇಮಠ ತಾಪಂ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ನರೇಗಾ ಇಂಜಿನಿಯರಗಳು, ಬೇರಪೂಟ ಟೇಕ್ನಿಷಿಯನಗಳು, ಕಾಯಕ ಬಂಧುಗಳು ಮತ್ತು ನರೇಗಾ ಕೂಲಿಕಾರರು ಹಾಜರಿದ್ದರು. ಸುಮಾರು 135 ಕೂಲಿಕಾರರು ಶಿಬಿರದ ಲಾಭ ಪಡೆದರು.